ADVERTISEMENT

ಬಳ್ಳಾರಿ: ಕಳ್ಳಭಟ್ಟಿ, ಮಾದಕ ದ್ರವ್ಯ ತಡೆಗಟ್ಟಲು ಸೂಚನೆ

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ಸ್ಥಾಯಿ ಸಮಿತಿಯ ಸಭೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 13:06 IST
Last Updated 25 ಜುಲೈ 2024, 13:06 IST
ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಬುಧವಾರ ಸ್ಥಾಯಿ ಸಮಿತಿ ಸಭೆ ನಡೆಯಿತು
ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಬುಧವಾರ ಸ್ಥಾಯಿ ಸಮಿತಿ ಸಭೆ ನಡೆಯಿತು   

ಬಳ್ಳಾರಿ: ಕಳ್ಳಭಟ್ಟಿ, ಕೈಹೆಂಡ, ಮಾದಕ ವಸ್ತು ಮತ್ತು ನಿದ್ರಾಜನಕ ಪದಾರ್ಥಗಳ ಅಕ್ರಮಗಳನ್ನು ಸಂಪೂರ್ಣ ತಡೆಗಟ್ಟಲು ಪೊಲೀಸ್‌ ಮತ್ತು ಅಬಕಾರಿ ಇಲಾಖೆ ಕ್ರಮಗಳನ್ನು ಬಿಗಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್‌ ಕುಮಾರ್‌ ಮಿಶ್ರಾ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಳ್ಳಭಟ್ಟಿ ಸಾರಾಯಿ, ಕೈಹೆಂಡ ಮತ್ತು ಕಲುಷಿತ ಮದ್ಯ ತಯಾರಿಕೆ, ಸಾಗಾಣಿಕೆ ಹಾಗೂ ಮಾರಾಟವನ್ನು ತಡೆಯಲು ರಚಿಸಲಾಗಿರುವ ವಿವಿಧ ಇಲಾಖೆಗಳನ್ನೊಳಗೊಂಡ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಯುವಜನರಿಗೆ ಡ್ರಗ್ಸ್‌ ದುಷ್ಪರಿಣಾಮಗಳ ಕುರಿತು ತಿಳಿವಳಿಕೆ ಮೂಡಿಸಲು ಸಮಿತಿ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ತಿಳಿಸಿದರು.

ADVERTISEMENT

ವಿಷಪೂರಿತ, ಕಲುಷಿತ ಮದ್ಯ ಸೇವಿಸಿ ತಮಿಳುನಾಡಿನ ಕಲ್ಲುಕುರಚಿ ಜಿಲ್ಲೆ ಸೇರಿದಂತೆ ದೇಶದ ವಿವಿಧೆಡೆ ಅಪಾರ ಸಾವುನೋವು ಸಂಭವಿಸಿದ್ದು, ಬಳ್ಳಾರಿಯಲ್ಲಿ ಇಂಥ ಯಾವುದೇ ಘಟನೆ ನಡೆಯದಂತೆ ಎಚ್ಚರಿಕೆ ವಹಿಸುವ ಭಾಗವಾಗಿ ಸಭೆ ನಡೆಯಿತು.

‘ಬಳ್ಳಾರಿಯು ಆಂಧ್ರಪ್ರದೇಶದೊಂದಿಗೆ ಗಡಿ ಹಂಚಿಕೊಂಡಿದ್ದು, ಅಲ್ಲಿಂದ, ಕೈಹೆಂಡ(ಸೇಂದಿ), ಸೇವನೆಗೆ ಯೋಗ್ಯವಲ್ಲದ ಮದ್ಯ ಬಾರದಂತೆ ಕ್ರಮ ಕೈಗೊಳ್ಳಬೇಕು’ ಎಂದು ಅಬಕಾರಿ, ಪೊಲೀಸ್‌, ಅರಣ್ಯ ಮತ್ತು ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಕಳ್ಳಭಟ್ಟಿ ತಯಾರಿಕಾ ಕೇಂದ್ರವಾಗಿರುವ ಕಂಪ್ಲಿ, ಶಿಕಾರಿಹಟ್ಟಿ ಪ್ರದೇಶದಲ್ಲಿ ಸಮಗ್ರ ಕ್ರಿಯಾಯೋಜನೆಯನ್ನು ರೂಪಿಸಿ, ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಲಾಯಿತು.

ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್‌ ಸಂಕನೂರು, ಎಸ್‌ಪಿ ಡಾ.ಶೋಭರಾಣಿ ವಿ.ಜೆ, ಅಬಕಾರಿ ಉಪ ಆಯುಕ್ತ ಮಂಜುನಾಥ್‌ ಎನ್, ಡಿಎಚ್‌ಒ ರಮೇಶಬಾಬು, ಡಿಡಿಪಿಐ ಉಮಾದೇವಿ, ತಹಶೀಲ್ದಾರರು, ಅಬಕಾರಿ ಅಧೀಕ್ಷಕರು, ಅಬಕಾರಿ ಉಪ ಅಧೀಕ್ಷಕರು, ಬಳ್ಳಾರಿ ವಲಯ ಅರಣ್ಯಾಧಿಕಾರಿ, ಅಬಕಾರಿ ನಿರೀಕ್ಷಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.