ಬಳ್ಳಾರಿ: ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಸಂಭವಿಸಿದ ಬಾಣಂತಿಯರ ಸಾವು ಪ್ರಕರಣದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಜಿಲ್ಲಾಧಿಕಾರಿಯಿಂದ ಶನಿವಾರ ಮಾಹಿತಿ ಪಡೆದುಕೊಂಡಿದ್ದಾರೆ.
ಬಾಣಂತಿಯರ ಸಾವು ಪ್ರಕರಣ ಹಿನ್ನೆಲೆಯಲ್ಲಿ ರಚಿಸಿರುವ ವೈದ್ಯಕೀಯ ತಂಡದ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಬೇಕು. ಆಸ್ಪತ್ರೆ ವ್ಯವಸ್ಥೆ ಬಗ್ಗೆಯೂ ಜಾಗರೂಕತೆ ವಹಿಸಬೇಕು ಎಂದು ಅವರು ಸೂಚನೆ ನೀಡಿದರು ಎಂದು ಪ್ರಕಟಣೆ ತಿಳಿಸಿದೆ
ಘಟನೆಗೆ ಆಸ್ಪತ್ರೆ ಸಿಬ್ಬಂದಿ ಅಥವಾ ವೈದ್ಯಕೀಯ ವ್ಯವಸ್ಥೆಯ ವೈಫಲ್ಯ ಕಾರಣವೇ ಎಂಬುದರ ಬಗ್ಗೆಯೂ ತನಿಖೆ ನಡೆಸಿ ವರದಿ ನೀಡಲು ನಿರ್ದೇಶನ ನೀಡಿದ್ದಾರೆ.
ಸುಮಯ ಯಥಾಸ್ಥಿತಿ: ಜಿಲ್ಲಾಸ್ಪತ್ರೆಯಲ್ಲಿ ಸಿಸೇರಿಯನ್‌ಗೆ ಒಳಗಾದ ಬಳಿಕ ಸೋಂಕಿಗೀಡಾಗಿ ಬಹುಅಂಗಾಂಗ ವೈಫಲ್ಯದ ಸಮಸ್ಯೆಗೆ ಗುರಿಯಾಗಿರುವ ಕೂಡ್ಲಿಗಿಯ ಸುಮಯ ಎಂಬುವವರು ಸದ್ಯ ಬಳ್ಳಾರಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ವಿಮ್ಸ್)ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಇನ್ನೂ ಚಿಂತಾಜನಕವಾಗಿಯೇ ಇದೆ. ಅವರಿಗೆ ಶನಿವಾರ ಡಯಾಲಿಸಿಸ್ ಕೂಡ ಮಾಡಲಾಗಿದೆ. ಅವರ ರಕ್ತದೊತ್ತಡ ಸ್ಥಿರವಾಗಿ ಮುಂದುವರಿದೆ ಎಂದು ವೈದ್ಯರು ಮಾಹಿತಿ ನೀಡಿದರು.
ಮಗುವಿಗೆ ನ್ಯುಮೊನಿಯಾ: ಸೋಂಕಿಗೆ ಒಳಗಾದರೂ ಸದ್ಯ ಗುಣಮಮುಖವಾಗಿರುವ ರಜೀಯಾ ಬೇಗಂ ಎಂಬುವವರ ಶಿಶುವಿನಲ್ಲಿ ನ್ಯುಮೋನಿಯಾ ಸಮಸ್ಯೆ ಕಾಣಿಸಿಕೊಂಡಿದೆ. ಮಗುವಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಹೀಗಾಗಿ ತಾಯಿ ಮತ್ತು ಮಗುವಿನ ಬಿಡುಗಡೆಯನ್ನು ಮುಂದೂಡಲಾಗಿದೆ ಎಂದು ಗೊತ್ತಾಗಿದೆ.
ಇನ್ನು ಸುಮಲತಾ ಎಂಬವವರನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು. ಅಮೃತವಾಣಿ, ಮಹಾಲಕ್ಷ್ಮೀ ಎಂಬುವವರನ್ನು ನಂತರ ಬಿಡುಗಡೆ ಮಾಡಲಾಗುತ್ತದೆ ಎಂದು ವಿಮ್ಸ್ ಆಸ್ಪತ್ರೆ ಮೂಲಗಳು ತಿಳಿಸಿವೆ.
ಈ ಮಧ್ಯೆ, ಆರೋಗ್ಯ ಇಲಾಖೆಯ ತಾಯಿ ಮತ್ತು ಶಿಶು ಆರೋಗ್ಯ ವಿಭಾಗದ ನೋಡಲ್ ಅಧಿಕಾರಿ ರಾಜಕುಮಾರ್ ಅವರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಹೋಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ಧಾರೆ.
ವಿಮ್ಸ್ ಮೇಲೆ ಒತ್ತಡ: ‘ಸಾಮಾನ್ಯವಾಗಿ ವಿಮ್ಸ್‌ನಲ್ಲಿ ದಿನವೊಂದಕ್ಕೆ 30–35 ಹೆರಿಗೆಗಳು ನಡೆಯುತ್ತಿದ್ದವು. ಈಗ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ವಿಮ್ಸ್‌ನಲ್ಲಿ ಒತ್ತಡ ಸೃಷ್ಟಿಯಾಗಿದೆ’ ಎಂದು ವಿಮ್ಸ್ ನಿರ್ದೇಶಕ ಗಂಗಾಧರ ಗೌಡ ಪ್ರಜಾವಾಣಿಗೆ ತಿಳಿಸಿದರು.
ಜಿಲ್ಲಾಸ್ಪತ್ರೆಯಲ್ಲಿ ನಡೆದ ಘಟನೆಯೂ ಇದಕ್ಕೆ ಕಾರಣವಿರಬಹುದು ಎಂದು ಅವರು ಹೇಳಿದರು.
ವರದಿ ಸಲ್ಲಿಕೆ
ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸೂಚನೆ ಮೇರೆಗೆ ರಚನೆಯಾಗಿದ್ದ ತ್ರಿಸದಸ್ಯ ತನಿಖಾ ತಂಡ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆದರೆ, ಅದರಲ್ಲಿನ ವಿವರಗಳನ್ನು ಬಹಿರಂಗಪಡಿಸಲು ತನಿಖಾ ತಂಡ ನಿರಾಕರಿಸಿದೆ. ವರದಿ ಸಲ್ಲಿಕೆಯಾದರೂ, ಕಾರಣ ಬಹಿರಂಗಪಡಿಸದಿರುವ ಮತ್ತು ಯಾರೊಬ್ಬರ ವಿರುದ್ಧವೂ ಕ್ರಮ ಕೈಗೊಳ್ಳದ ಇಲಾಖೆ ನಡೆಗೆ ಆಕ್ರೋಶ ವ್ಯಕ್ತವಾಗಿದೆ.
ತನಿಖೆಗೆ ಎಐಎಂಎಸ್‌ಎಸ್ ಆಗ್ರಹ
ಬಳ್ಳಾರಿ: ಜಿಲ್ಲಾಸ್ಪತ್ರೆಯಲ್ಲಿ ಸಂಭವಿಸಿದ ಬಾಣಂತಿಯರ ಸಾವಿನ ಬಗ್ಗೆ ಶೀಘ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ‘ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ಎಸ್)’ ಸಂಘಟನೆ ಶುಕ್ರವಾರ ಜಿಲ್ಲಾಧಿಕಾರಿಗೆ ಮನವಿ ಮಾಡಿದೆ.
ಈ ವೇಳೆ ಮಾತನಾಡಿರುವ ಸಂಘಟನೆಯ ಜಿಲ್ಲಾ ಅಧ್ಯಕ್ಷೆ, ಈಶ್ವರಿ ಕೆ.ಎಂ. ‘ಹೆರಿಗೆಗಾಗಿ ಸರ್ಕಾರಿ ಆಸ್ಪತ್ರೆಗಳನ್ನು ಅರಸಿಕೊಂಡು ಬರುವ ಗ್ರಾಮೀಣ ಪ್ರದೇಶದ ಬಡ ಮಹಿಳೆಯರು ಸರಿಯಾದ ಆರೋಗ್ಯ ಸೌಲಭ್ಯಗಳು ಸಿಗದೆ ಈ ರೀತಿ ಅನಾಯಾಸವಾಗಿ ಜೀವ ಕಳೆದುಕೊಳ್ಳುತ್ತಿದ್ಧಾರೆ. ಬಡ ಮಹಿಳೆಯರ ಪಾಲಿಗೆ ಸರ್ಕಾರಿ ಆಸ್ಪತ್ರೆಗಳೇ ಸಾವಿನ ಕೂಪಗಳಾಗುತ್ತಿವೆ. ಪ್ರಸವಪೂರ್ವ ಮತ್ತು ನಂತರದ ತಾಯಂದಿರ ಸಾವುಗಳಲ್ಲಿ ಹೈದರಾಬಾದ್ ಕರ್ನಾಟಕದ ಜಿಲ್ಲೆಗಳೇ ಮೊದಲನೇ ಸ್ಥಾನದಲ್ಲಿವೆ. ಪರಿಸ್ಥಿತಿ ಹೀಗಿದ್ದರೂ ಸರ್ಕಾರಗಳು ಮಾತ್ರ ಆರೋಗ್ಯ ಬಜೆಟ್ಟನ್ನು ವರ್ಷದಿಂದ ವರ್ಷಕ್ಕೆ ಕಡಿತಗೊಳಿಸುತ್ತಲೆ ಇವೆ. ಖಾಸಗಿಕರಣಕ್ಕೆ ದಾರಿ ಮಾಡಿಕೊಡುತ್ತಿವೆ’ ಎಂದು ಆರೋಪಿಸಿದರು.
‘ಸರ್ಕಾರ ಈ ಕೂಡಲೇ ಎಚ್ಚೆತ್ತು ಬಾಣಂತಿಯರ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಮೃತರ ಕುಟುಂಬಕ್ಕೆ ಪರಿಹಾರ ಒದಗಿಸಬೇಕು. ಸರ್ಕಾರಿ ಆಸ್ಪತ್ರೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು’ ಎಂದರು.
ಸಂಘಟನೆ ಜಿಲ್ಲಾ ಕಾರ್ಯದರ್ಶಿ ವಿಜಯಲಕ್ಷ್ಮಿ, ಸಂಘಟನೆಯ ಪದಾಧಿಕಾರಿಗಳಾದ ವಿದ್ಯಾ, ರೇಖಾ, ಗಿರಿಜಾ, ಅಭಿಲಾಷ ಇದ್ದರು.
ಮೃತರ ಕುಟುಂಬಕ್ಕೆ ತಲಾ ₹2 ಲಕ್ಷ ಪರಿಹಾರ ನೀಡುವ ಬಗ್ಗೆ ಮುಖ್ಯಮಂತ್ರಿ ಬಳಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.ಜಮೀರ್ ಅಹಮದ್ ಖಾನ್ ಜಿಲ್ಲಾ ಉಸ್ತುವಾರಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.