ಬಳ್ಳಾರಿ: ‘ಸಂಡೂರಿನಲ್ಲಿ ಎದುರಾದ ಸೋಲು ಮುಂದಿನ ಗೆಲುವಿಗೆ ಮುನ್ನುಡಿ’ ಎಂದು ಬಿಜೆಪಿಯ ಪರಾಜಿತ ಅಭ್ಯರ್ಥಿ ಬಂಗಾರು ಹನುಮಂತ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಭಾನುವಾರ ಪೋಸ್ಟ್ ಪ್ರಕಟಿಸಿರುವ ಅವರು, ತಮ್ಮ ಮನದಾಳವನ್ನು ವ್ಯಕ್ತಪಡಿಸಿದ್ದಾರೆ. ‘ಜೀವನದಲ್ಲಿ ಸೋಲು ಗೆಲುವು ಎಲ್ಲವೂ ಸಾಮಾನ್ಯ. ಸೋಲೇ ಗೆಲುವಿನ ಮೆಟ್ಟಿಲು ಎನ್ನುತ್ತಾ, ನನ್ನನ್ನು ಗೆಲುವಿನ ಅಂಚಿಗೆ ತಂದು ನಿಲ್ಲಿಸಿರುವ ಸಂಡೂರಿನ ಜನತೆಗೆ ಹೃದಯಪೂರ್ವಕ ಧನ್ಯವಾದಗಳು’ ಎಂದು ಅವರು ಬರೆದಿದ್ದಾರೆ.
‘ಈ ಬಾರಿ ಸಂಡೂರಿನ ಜನತೆ ಭಾರತೀಯ ಜನತಾ ಪಾರ್ಟಿಗೆ ನೀಡಿರುವ ಧೈರ್ಯ, ಬೆಂಬಲ ಮುಂದಿನ ಗೆಲುವಿಗೆ ಮುನ್ನುಡಿಯಾಗಿದೆ. ಪಕ್ಷದ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಕುಗ್ಗದೆ ಇಂದಿನ ಸೋಲನ್ನು ಸವಾಲಾಗಿ ಸ್ವೀಕರಿಸಿ ಮುಂಬರುವ ಚುನಾವಣೆಗೆ ಪಕ್ಷವನ್ನು ಸಂಘಟಿಸಬೇಕು’ ಎಂದು ವಿನಂತಿ ಮಾಡಿದ್ದಾರೆ.
‘ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದು ಬಂದು ಗೆಲುವನ್ನು ಪಕ್ಷಕ್ಕೆ ಅರ್ಪಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ, ಜನಾರ್ದನ ರೆಡ್ಡಿ ಅವರಿಗೆ ಪ್ರಮಾಣ ಮಾಡಿದ್ದೆ. ನಾನು ಸೋತಿರುವುದರಿಂದ ಅವರೆಲ್ಲರಲ್ಲೂ ಕ್ಷಮೆ ಕೋರುತ್ತೇನೆ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
‘ಈ ಹೋರಾಟದಲ್ಲಿ ನನ್ನ ಜೊತೆ ಹಗಲಿರುಳೆನ್ನದೆ ಶ್ರಮಿಸಿದ ರಾಜ್ಯ ನಾಯಕರಿಗೆ, ಸ್ನೇಹಿತರಿಗೆ, ಸಹೋದರರಿಗೆ, ಆಪ್ತರಿಗೆ, ಮುಖಂಡರಿಗೆ, ಪಕ್ಷದ ಎಲ್ಲಾ ಪದಾಧಿಕಾರಿಗಳಿಗೂ ಹಾಗೂ ಕಾರ್ಯಕರ್ತರಿಗೆ ಅವರು ಧನ್ಯವಾದ ಅರ್ಪಿಸುತ್ತೇನೆ’ ಎಂದು ಅವರು ಬರೆದುಕೊಂಡಿದ್ದಾರೆ.
‘ಸಂಡೂರು ಕ್ಷೇತ್ರದ ಜನರ ಸೇವೆ ಮಾಡಲು ಅಧಿಕಾರವೊಂದೇ ಮಾನದಂಡವಲ್ಲ. ನಾನು ಈ ಉಪಚುನಾವಣೆಯ ಫಲಿತಾಂಶದಲ್ಲಿ ಸೋತಿರಬಹುದು ಆದರೆ ಈ ಸೋಲಿಗೆ ನನ್ನ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಶಕ್ತಿಯಿಲ್ಲ. ಸಂಡೂರು ಜನತೆಯ ಮನೆ ಮಗನಾಗಿ ನಿಮ್ಮೊಳಗೊಬ್ಬನ್ನಾಗಿ ಸದಾ ನಿಮ್ಮೊಡನೆ ಇದ್ದು ನಿಮ್ಮ ಸೇವೆ ಮಾಡುತ್ತೇನೆ’ ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ವಿಧಾನಸಭೆ ಉಪ ಚುನಾವಣೆಯಲ್ಲಿ ಸೋಲಿನ ಬೇಸರದಲ್ಲಿದ್ದ ಬಂಗಾರು ಹನುಮಂತ ಅವರನ್ನು ಪಕ್ಷದ ನಾಯಕರು ಆತ್ಮೀಯರು ಸಂತೈಸಿದ್ದಾರೆ. ಪಕ್ಷದ ನಾಯಕರು ಕರೆ ಮಾಡಿ ಮಾತನಾಡಿದ್ದರೆ ಸ್ಥಳೀಯ ನಾಯಕರು ನಿವಾಸಕ್ಕೆ ತೆರಳಿ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಅವರನ್ನು ಭೇಟಿಯಾದ ಮುಖಂಡರು ಸೋಲಿಗೆ ಏನು ಕಾರಣವಾಯಿತು ಏನು ಮಾಡಬೇಕಾಗಿತ್ತು ಎಲ್ಲಿ ಎಡವಿದ್ದೇವೆ ಮುಂದೆ ಯಾವ ವಿಚಾರಗಳನ್ನು ಸರಿಪಡಿಸಿಕೊಳ್ಳಬೇಕು ಎಂಬ ಚರ್ಚೆ ನಡೆಸಿದ್ದಾರೆ ಎಂದು ಗೊತ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.