ADVERTISEMENT

ಎರಡನೇ ದಿನವೂ ಬ್ಯಾಂಕಿಂಗ್‌ ವಹಿವಾಟು ಸ್ಥಗಿತ: ಗ್ರಾಹಕರಿಗೆ ತೀವ್ರ ತೊಂದರೆ

ಎರಡನೇ ದಿನವೂ ಬ್ಯಾಂಕಿಂಗ್‌ ವಹಿವಾಟು ಸ್ಥಗಿತ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2021, 12:41 IST
Last Updated 16 ಮಾರ್ಚ್ 2021, 12:41 IST
ಬ್ಯಾಂಕ್‌ ನೌಕರರು ಮುಷ್ಕರ ನಡೆಸುತ್ತಿರುವುದರಿಂದ ಮಂಗಳವಾರ ಹೊಸಪೇಟೆಯಲ್ಲಿ ಎಸ್‌ಬಿಐ ಸೇರಿದಂತೆ ಇತರೆ ಬ್ಯಾಂಕುಗಳು ಮುಚ್ಚಿದ್ದವು
ಬ್ಯಾಂಕ್‌ ನೌಕರರು ಮುಷ್ಕರ ನಡೆಸುತ್ತಿರುವುದರಿಂದ ಮಂಗಳವಾರ ಹೊಸಪೇಟೆಯಲ್ಲಿ ಎಸ್‌ಬಿಐ ಸೇರಿದಂತೆ ಇತರೆ ಬ್ಯಾಂಕುಗಳು ಮುಚ್ಚಿದ್ದವು   

ವಿಜಯನಗರ (ಹೊಸಪೇಟೆ): ರಾಷ್ಟ್ರೀಕೃತ ಬ್ಯಾಂಕುಗಳ ಖಾಸಗೀಕರಣ ವಿರೋಧಿಸಿ ಬ್ಯಾಂಕ್‌ ಯೂನಿಯನ್‌ಗಳ ಸಂಯುಕ್ತ ವೇದಿಕೆಯ ಅಡಿ ಬ್ಯಾಂಕ್‌ ನೌಕರರು ಮಂಗಳವಾರ ಎರಡನೇ ದಿನವೂ ಮುಷ್ಕರ ನಡೆಸಿದ್ದರಿಂದ ಬ್ಯಾಂಕಿಂಗ್‌ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿತು.

ನಗರದ ಕೆನರಾ ಬ್ಯಾಂಕ್‌, ಭಾರತೀಯ ಸ್ಟೇಟ್‌ ಬ್ಯಾಂಕ್‌ ಸೇರಿದಂತೆ ಪ್ರಮುಖ ಬ್ಯಾಂಕುಗಳು ಬಾಗಿಲು ಮುಚ್ಚಿದ್ದರಿಂದ ಗ್ರಾಹಕರು ಬಂದು ಹಿಂತಿರುಗುವುದು ಕಂಡು ಬಂತು. ಅನೇಕ ಎಟಿಎಂಗಳಲ್ಲಿ ಹಣವೇ ಇರಲಿಲ್ಲ. ಕೆಲವೆಡೆ ಇದ್ದರೂ ಉದ್ದನೆಯ ಸಾಲು ಕಂಡು ಬಂತು. ಬ್ಯಾಂಕಿನಲ್ಲಿ ಹಣ ಠೇವಣಿ ಇಡುವವರು, ಕಾಲೇಜಿನ ಶುಲ್ಕ ತುಂಬಲು ಡಿಡಿ ತೆಗೆಸಬೇಕಾದವರು, ಹಣ ಬಿಡಿಸುವವರು ತೀವ್ರ ತೊಂದರೆ ಅನುಭವಿಸಿದರು.

ಬ್ಯಾಂಕುಗಳ ಸುಧಾರಣೆಯ ಹೆಸರಿನಲ್ಲಿ ಕೇಂದ್ರ ಸರ್ಕಾರವು ಖಾಸಗೀಕರಣಕ್ಕೆ ಮುಂದಾಗಿದೆ. ಖಾಸಗೀಕರಣ, ಆಸ್ತಿ ವಸೂಲಿ ಕಂಪನಿ ಸ್ಥಾಪನೆ, ಜೀವ ವಿಮಾ ನಿಗಮದಲ್ಲಿ ಬಂಡವಾಳ ಹಿಂತೆಗೆತ, ವಿಮಾ ಕ್ಷೇತ್ರದಲ್ಲಿ ಶೇ 74ರಷ್ಟು ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಲು ಮುಂದಾಗಿರುವುದು ಸರಿಯಲ್ಲ. 1947ರಿಂದ 1969ರ ಅವಧಿಯಲ್ಲಿ ಒಟ್ಟು 550 ಖಾಸಗಿ ಬ್ಯಾಂಕುಗಳು ಬಾಗಿಲು ಮುಚ್ಚಿವೆ. ಹೀಗಿರುವಾಗ ಪುನಃ ಖಾಸಗೀಕರಣಕ್ಕೆ ಕೈಹಾಕಿದರೆ ಇರುವ ಬ್ಯಾಂಕುಗಳು ಕೂಡ ಮುಚ್ಚಬಹುದು ಎಂದು ಮುಷ್ಕರ ನಿರತರು ಆರೋಪಿಸಿದರು.

ADVERTISEMENT

ಖಾಸಗೀಕರಣ ಮಾಡಿದರೆ ಜನರ ಉಳಿತಾಯದ ಹಣದ ಲೂಟಿಗೆ ಅವಕಾಶ ಕಲ್ಪಿಸಿದಂತಾಗುತ್ತದೆ. ಠೇವಣಿದಾರರ ಹಿತಾಸಕ್ತಿಗೂ ಧಕ್ಕೆಯಾಗುತ್ತದೆ. ಉದ್ಯೋಗ ಅವಕಾಶ, ಮೀಸಲಾತಿ, ಸಾಮಾಜಿಕ ನ್ಯಾಯಕ್ಕೂ ಧಕ್ಕೆಯಾಗುತ್ತದೆ. ಬ್ಯಾಂಕುಗಳನ್ನು ಮುಚ್ಚುವುದರಿಂದ ಜನಸಾಮಾನ್ಯರು ಬ್ಯಾಂಕಿಂಗ್‌ ಸೇವೆಗಳಿಂದ ವಂಚಿತರಾಗಬಹುದು. ಖಾಸಗೀಕರಣ, ಬ್ಯಾಂಕುಗಳ ವಿಲೀನ ಪ್ರಕ್ರಿಯೆ ಕೈಬಿಡಬೇಕು. ಇಲ್ಲವಾದಲ್ಲಿ ಬರುವ ದಿನಗಳಲ್ಲಿ ಇನ್ನಷ್ಟು ಉಗ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.