ADVERTISEMENT

ಎಪಿಎಂಸಿ ವೃತ್ತದಲ್ಲಿ ಬಸವೇಶ್ವರ ಪುತ್ಥಳಿ–ಸಚಿವ ಸಿಂಗ್‌

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2022, 13:17 IST
Last Updated 1 ಸೆಪ್ಟೆಂಬರ್ 2022, 13:17 IST
ಹೊಸಪೇಟೆಯಲ್ಲಿ ನೂತನವಾಗಿ ನಿರ್ಮಿಸಿದ ಸಣ್ಣಕ್ಕಿ ವೀರಭದ್ರೇಶ್ವರ ದೇವಸ್ಥಾನದ ಮಹಾದ್ವಾರವನ್ನು ಕೊಟ್ಟೂರು ಬಸವಲಿಂಗ ಸ್ವಾಮೀಜಿ, ಸಚಿವ ಆನಂದ್‌ ಸಿಂಗ್‌ ಉದ್ಘಾಟಿಸಿದರು
ಹೊಸಪೇಟೆಯಲ್ಲಿ ನೂತನವಾಗಿ ನಿರ್ಮಿಸಿದ ಸಣ್ಣಕ್ಕಿ ವೀರಭದ್ರೇಶ್ವರ ದೇವಸ್ಥಾನದ ಮಹಾದ್ವಾರವನ್ನು ಕೊಟ್ಟೂರು ಬಸವಲಿಂಗ ಸ್ವಾಮೀಜಿ, ಸಚಿವ ಆನಂದ್‌ ಸಿಂಗ್‌ ಉದ್ಘಾಟಿಸಿದರು   

ಹೊಸಪೇಟೆ (ವಿಜಯನಗರ): ‘ನಗರದ ಎ.ಪಿ.ಎಂ.ಸಿ. ವೃತ್ತದಲ್ಲಿ ಹನ್ನೆರಡನೇ ಶತಮಾನದ ಬಸವೇಶ್ವರರ ಪುತ್ಥಳಿ ಪ್ರತಿಷ್ಠಾಪಿಸಲಾಗುವುದು’ ಎಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಭರವಸೆ ನೀಡಿದರು.

ನಗರದ ಸಣ್ಣಕ್ಕಿ ವೀರಭದ್ರೇಶ್ವರ ದೇವಸ್ಥಾನದ ಮಹಾದ್ವಾರ ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ನಗರದಲ್ಲಿ ಬಸವೇಶ್ವರರ ಮೂರ್ತಿ ಸ್ಥಾಪಿಸಬೇಕೆನ್ನುವುದು ವೀರಶೈವ ಲಿಂಗಾಯತ ಸಮಾಜದವರ ಹಲವು ವರ್ಷಗಳ ಬೇಡಿಕೆಯಾಗಿತ್ತು. ಅದನ್ನು ಈಡೇರಿಸುವ ಸಂದರ್ಭ ಈಗ ಬಂದಿದೆ. ಬಸವಣ್ಣನವರು ಕೈಗಳಲ್ಲಿ ವಚನಗಳ ಕಟ್ಟುಗಳು ಹಿಡಿದಿರುವ ಭಂಗಿಯಲ್ಲಿ ಮೂರ್ತಿ ಸ್ಥಾಪಿಸಿ, ಅದರ ಸುತ್ತ ಐಕ್ಯ ಮಂಟಪ ನಿರ್ಮಿಸಲಾಗುವುದು. ಶೀಘ್ರದಲ್ಲೇ ಅದಕ್ಕೆ ಭೂಮಿಪೂಜೆ ನೆರವೇರಿಸಿ, ಐದಾರೂ ತಿಂಗಳೊಳಗೆ ಕೆಲಸ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

ಲಿಂಗಾಯತ ಸಮಾಜದವರು ಅನಂತಶಯನಗುಡಿ ಬಳಿ ಮೂರ್ತಿ ಸ್ಥಾಪನೆಗೆ ಜಾಗ ಕೇಳಿದ್ದರು. ಆದರೆ, ಅಲ್ಲಿ ಬೇಡ ಎ.ಪಿ.ಎಂ.ಸಿ ಬಳಿ ಸ್ಥಾಪಿಸಿದರೆ ಅದಕ್ಕೊಂದು ಅರ್ಥ ಬರುತ್ತದೆ ಎಂದು ಹೇಳಿದ್ದೆ. ಎ.ಪಿ.ಎಂ.ಸಿ. ಸುತ್ತ ಶ್ರಮಜೀವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಾರೆ. ಅಲ್ಲಿ ಸ್ಥಾಪಿಸಿದರೆ ಅದಕ್ಕೊಂದು ಮಹತ್ವ ಬರುತ್ತದೆ ಎಂದು ತಿಳಿಸಿದ್ದೆ. ಎಲ್ಲರೂ ಒಪ್ಪಿಕೊಂಡಿದ್ದಾರೆ. ಬಸವಣ್ಣನವರು ಅವರ ವಚನಗಳ ಮೂಲಕವೇ ಸಮಾಜದ ಅಂಕು ಡೊಂಕು ತಿದ್ದಿದ್ದ ಮಹಾನುಭಾವರು ಎಂದು ತಿಳಿಸಿದರು.

ADVERTISEMENT

ಮಹಾದ್ವಾರ ನಿರ್ಮಿಸಿದ ವಡಗೇರಿ ಜಂಬುನಾಥ ಅವರನ್ನು ಸನ್ಮಾನಿಸಲಾಯಿತು. ಕೊಟ್ಟೂರು ಬಸವಲಿಂಗ ಸ್ವಾಮೀಜಿ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಶರಣು ಸ್ವಾಮಿ, ಪ್ರಧಾನ ಕಾರ್ಯದರ್ಶಿ ರವಿಶಂಕರ್‌, ದೇವಸ್ಥಾನದ ಕಾರ್ಯದರ್ಶಿ ಅಶ್ವಿನ್‌ ಕೋತಂಬ್ರಿ, ಖಜಾಂಚಿ ಕೆ. ಗಂಗಾಧರಪ್ಪ, ನಗರಸಭೆ ಅಧ್ಯಕ್ಷ ಸುಂಕಮ್ಮ, ಸದಸ್ಯ ಎಚ್.ಕೆ. ಮಂಜುನಾಥ, ಸ್ಥಾಯಿ ಸಮಿತಿ ಅಧ್ಯಕ್ಷ ತಾರಿಹಳ್ಳಿ ಜಂಬುನಾಥ, ಸಾಲಿ ಸಿದ್ದಯ್ಯ ಸ್ವಾಮಿ, ಗೊಗ್ಗ ಚೆನ್ನಬಸವರಾಜ, ಕೆ. ಕೊಟ್ರೇಶ, ಮಧುರಚೆನ್ನ ಶಾಸ್ತ್ರಿ, ಎಲ್‌. ನಾಗರಾಜ್‌ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.