ADVERTISEMENT

ಸೌಕರ್ಯ ವಂಚಿತ ಪಾಂಡುರಂಗ ನಗರ

ಹೊಳಲು ಗ್ರಾಮ: ಮಳೆಗಾಲಕ್ಕೆ ಭಯಪಡುವ ನಿವಾಸಿಗಳು

ಕೆ.ಸೋಮಶೇಖರ
Published 18 ಜೂನ್ 2024, 6:03 IST
Last Updated 18 ಜೂನ್ 2024, 6:03 IST
ಹೊಳಲು ಗ್ರಾಮದ ಪಾಂಡುರಂಗ ನಗರದ ಮಣ್ಣಿನ ರಸ್ತೆ ಕೆಸರುಗದ್ದೆಯಾಗಿರುವುದು
ಹೊಳಲು ಗ್ರಾಮದ ಪಾಂಡುರಂಗ ನಗರದ ಮಣ್ಣಿನ ರಸ್ತೆ ಕೆಸರುಗದ್ದೆಯಾಗಿರುವುದು   

ಹೂವಿನಹಡಗಲಿ: ‘ಮನೆಗಳಿಗೆ ನುಗ್ಗುವ ಮಳೆ ನೀರು, ಕೆಸರು ಗದ್ದೆಯಾಗುವ ರಸ್ತೆ, ಹೂಳು ತುಂಬಿರುವ ಚರಂಡಿಗಳು, ಪೈಪ್‌ಲೈನ್‌ನಲ್ಲಿ ಕಲುಷಿತ ನೀರು ಮಿಶ್ರಣವಾಗಿ ಕುಡಿಯುವ ನೀರು ಪೂರೈಕೆಯಾಗುವುದರಿಂದ ಮಳೆಗಾಲ ಅಂದ್ರೆ ನಾವು ಭಯಪಡುತ್ತೇವೆ’.

ತಾಲ್ಲೂಕಿನ ಹೊಳಲು ಗ್ರಾಮದ ಪಾಂಡುರಂಗ ನಗರ ನಿವಾಸಿಗಳ ಆತಂಕದ ನುಡಿಗಳಿವು.

ಪ್ರತಿ ಮಳೆಗಾಲದಲ್ಲೂ ನಿವಾಸಿಗಳು ಸಂಕಷ್ಟ ಅನುಭವಿಸುತ್ತಾರೆ. ಬಡವರು, ಕೂಲಿಕಾರರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ, 300ಕ್ಕೂ ಹೆಚ್ಚು ಕುಟುಂಬಗಳಿರುವ ಈ ಜನವಸತಿ ಮೂಲಸೌಕರ್ಯ ವಂಚಿತವಾಗಿದೆ.

ADVERTISEMENT

‘ಹೊಳಲು ಗ್ರಾಮದಲ್ಲಿ ಎರಡು ದಶಕದ ಹಿಂದೆ ಪಾಂಡುರಂಗ ನಗರ ರೂಪುಗೊಂಡಿದೆ. ಮಳೆಗಾಲದಲ್ಲಿ ಮನೆ, ಶೌಚಾಲಯಗಳಿಗೆ ನೀರು ನುಗ್ಗುತ್ತದೆ. ರಾತ್ರಿ ಮಳೆ ಬಂದರೆ ಇಡೀ ರಾತ್ರಿ ಜಾಗರಣೆ ಮಾಡಬೇಕಾಗುತ್ತದೆ. 20 ವರ್ಷಗಳಿಂದ ತೊಂದರೆ ಅನುಭವಿಸುತ್ತಿದ್ದರೂ ಸಂಬಂಧಿಸಿದವರು ಇತ್ತ ಗಮನಹರಿಸುತ್ತಿಲ್ಲ’ ಎಂದು ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.

ಪಾಂಡುರಂಗ ನಗರ ಸಂಪರ್ಕಿಸುವ ಎರಡು ಮುಖ್ಯ ರಸ್ತೆಗಳ ಪೈಕಿ ಒಂದು ರಸ್ತೆಯನ್ನು ಆರು ವರ್ಷಗಳ ಹಿಂದೆ ಸಿಮೆಂಟ್ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲಾಗಿದೆ. ಇನ್ನೊಂದು ರಸ್ತೆಯನ್ನು ಹಾಗೇ ಉಳಿಸಿರುವುದರಿಂದ ಮಳೆಗಾಲದಲ್ಲಿ ಕೆಸರು ಗದ್ದೆಯಾಗಿ ಮಾರ್ಪಡುತ್ತದೆ.

ಚರಂಡಿಗಳ ಹೂಳು ತೆಗೆಯದೇ ಇರುವುದರಿಂದ ರಸ್ತೆ ಮೇಲೆ ತ್ಯಾಜ್ಯ ಹರಿಯುತ್ತದೆ. ಚರಂಡಿಗಳಲ್ಲಿ ಹಾದು ಹೋಗಿರುವ ಕುಡಿಯುವ ನೀರಿನ ಪೈಪ್ ಲೈನ್ ಗಳಲ್ಲಿ ಮಳೆ ನೀರು ಮಿಶ್ರಣವಾಗಿ ಪೂರೈಕೆಯಾಗುತ್ತಿದೆ. ಈ ಸಮಸ್ಯೆಯನ್ನು ಗ್ರಾಮ ಪಂಚಾಯಿತಿಯವರು ಗಂಭೀರವಾಗಿ ಪರಿಗಣಿಸಿಲ್ಲ ಎಂದು ನಿವಾಸಿಗಳಾದ ಹಾವೇರಿ ರೇಖಾ, ಹಡಗಲಿ ನಿಂಗಪ್ಪ ದೂರಿದ್ದಾರೆ.

ಮಳೆ ನೀರು ಹರಿದು ಹೋಗುವ ಮಾರ್ಗಗಳಿಲ್ಲದೇ ತಗ್ಗು, ಗುಂಡಿಗಳು ನೀರು ತುಂಬಿಕೊಂಡು ಸೊಳ್ಳೆ, ಕ್ರಿಮಿಕೀಟಗಳ ಹಾವಳಿ ಹೆಚ್ಚುತ್ತದೆ. ಕಳೆದ 20 ವರ್ಷಗಳಿಂದ ನಿವಾಸಿಗಳು ಸಮಸ್ಯೆ ಎದುರಿಸುತ್ತಿದ್ದರೂ ಸಂಬಂಧಿಸಿದವರು ಗಮನಹರಿಸುತ್ತಿಲ್ಲ. ಕೂಡಲೇ ಸರ್ಕಾರ ಪಾಂಡುರಂಗ ನಗರದ ಅಭಿವೃದ್ಧಿಗೆ ಅನುದಾನ ನೀಡಬೇಕು. ಗ್ರಾಮ ಪಂಚಾಯಿತಿಯವರು ತಕ್ಷಣ ಮೂಲಸೌಕರ್ಯ ಕಲ್ಪಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹ.

ಪಾಂಡುರಂಗ ನಗರದ ಚರಂಡಿಯಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಹಾದು ಹೋಗಿರುವುದು

ಪಾಂಡುರಂಗ ನಗರ ಮೂಲಸೌಕರ್ಯ ಒದಗಿಸಲು ಗ್ರಾಮ ಪಂಚಾಯಿತಿ ಅನುದಾನ ಸಾಲುವುದಿಲ್ಲ. ಆದ್ಯತೆಯ ಕೆಲಸಗಳಿಗೆ ಕೆಕೆಆರ್‌ಡಿಬಿ ಶಾಸಕರ ಅನುದಾನ ‌ಮಂಜೂರಾತಿಗೆ ಪ್ರಸ್ತಾವ ಸಲ್ಲಿಸಲಾಗುವುದು

–ಎಂ.ಉಮೇಶ ತಾಲ್ಲೂಕು ಪಂಚಾಯಿತಿ ಇ.ಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.