ಹೊಸಪೇಟೆ: ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಬಿಡಿಸಿಸಿ) ಅಧ್ಯಕ್ಷ ಸ್ಥಾನಕ್ಕೆ ಟಿ.ಎಂ. ಚಂದ್ರಶೇಖರಯ್ಯ ರಾಜೀನಾಮೆ ಸಲ್ಲಿಸಿದ್ದಾರೆ.
ಇದರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರು ಬ್ಯಾಂಕಿನ ಅಧ್ಯಕ್ಷರಾಗುವ ಹಾದಿ ಸುಗಮಗೊಂಡಿದೆ.
‘ಈ ಹಿಂದಿನ ಅಧ್ಯಕ್ಷ ಎಂ.ಪಿ. ರವೀಂದ್ರ ಅವರ ನಿಧನದ ನಂತರ ಒಪ್ಪಂದದಂತೆ ಎರಡು ವರ್ಷಗಳ ಅವಧಿಗೆ ಅಧ್ಯಕ್ಷನಾಗಿದ್ದೆ. ಆ ಅವಧಿ ಮುಕ್ತಾಯಗೊಂಡಿರುವುದರಿಂದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವೆ’ ಎಂದು ಚಂದ್ರಶೇಖರಯ್ಯ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ಆದರೆ, ಇತ್ತೀಚಿಗಷ್ಟೇ ಬ್ಯಾಂಕಿನ ಚುನಾವಣೆಯಲ್ಲಿ ಗೆದ್ದು, ನಿರ್ದೇಶಕರಾಗಿ ಆಯ್ಕೆಯಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರಿಗೆ ಅಧ್ಯಕ್ಷ ಸ್ಥಾನಕ್ಕೆ ಅವಕಾಶ ಮಾಡಿಕೊಡುವುದಕ್ಕಾಗಿಯೇ ಚಂದ್ರಶೇಖರಯ್ಯ ಅವರ ಮೇಲೆ ಒತ್ತಡ ಇತ್ತು. ಹೀಗಾಗಿಯೇ ಅವರು ರಾಜೀನಾಮೆ ಕೊಟ್ಟಿದ್ದಾರೆ ಎಂಬ ಮಾತುಗಳು ಸಹಕಾರಿ ವಲಯದಲ್ಲಿ ಕೇಳಿ ಬರುತ್ತಿದೆ.
ಬ್ಯಾಂಕಿನ ಮೇಲೆ ಮೊದಲಿನಿಂದಲೂ ಕಾಂಗ್ರೆಸ್ ಹಿಡಿತ ಇದೆ. ಚಂದ್ರಶೇಖರಯ್ಯ ಸೇರಿದಂತೆ ಹೆಚ್ಚಿನ ನಿರ್ದೇಶಕರು ಆ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದಾರೆ. 2018ರ ಅಕ್ಟೋಬರ್‌ನಲ್ಲಿ ಬ್ಯಾಂಕಿನ ನೂತನ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದಿದೆ. ಇನ್ನೂ ಮೂರು ವರ್ಷ ಅವಧಿ ಇದೆ. ಉಳಿದ ಅವಧಿಗೆ ಆನಂದ್ ಸಿಂಗ್ ಅಧ್ಯಕ್ಷರಾಗುವ ಸಾಧ್ಯತೆ ದಟ್ಟವಾಗಿದೆ. ಒಂದುವೇಳೆ ಸಿಂಗ್ ಅಧ್ಯಕ್ಷರಾದರೆ ಬ್ಯಾಂಕ್ ಬಿಜೆಪಿ ತೆಕ್ಕೆಗೆ ಹೋಗಲಿದೆ.
ಚಂದ್ರಶೇಖರಯ್ಯ ರಾಜೀನಾಮೆ ಸಲ್ಲಿಸಿದರೂ ಅದರ ಅಂಗೀಕಾರಕ್ಕೆ 15 ದಿನಗಳ ಕಾಲಾವಕಾಶ ಇರುತ್ತದೆ. ಆ ಅವಧಿ ಜ. 17ರಂದು ಮುಗಿಯಲಿದೆ. ಜ. 18ರಂದು ಬ್ಯಾಂಕಿನ ಆಡಳಿತ ಮಂಡಳಿ ಸಭೆ ಸೇರಿ, ರಾಜೀನಾಮೆ ಅಂಗೀಕರಿಸುವುದರ ಕುರಿತು ತೀರ್ಮಾನ ತೆಗೆದುಕೊಳ್ಳಲಿದೆ. ಬಳಿಕವಷ್ಟೇ ಹೊಸ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗುವಿರಾ ಎಂದು ಇತ್ತೀಚೆಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಆನಂದ್ ಸಿಂಗ್, ‘ಸಮಯ ಬಂದಾಗ ನೋಡೋಣ’ ಎಂದು ಪ್ರತಿಕ್ರಿಯಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.