ಬೀದರ್: ಇಲ್ಲಿಯ ತರಕಾರಿ ಮಾರುಕಟ್ಟೆಯಲ್ಲಿ ಬೀನ್ಸ್ ಮತ್ತೆ ಹಿಡಿತ ಸಾಧಿಸಿದೆ. ಬೀನ್ಸ್ ಬೆಲೆ ಪ್ರತಿ ಕ್ವಿಂಟಲ್‌ಗೆ ಒಮ್ಮೆಲೇ ₹ 17 ಸಾವಿರಕ್ಕೆ ಜಿಗಿದರೆ, ಬೆಳ್ಳೂಳ್ಳಿ ₹ 7,500 ಹಾಗೂ ಸಬ್ಬಸಗಿ ಬೆಲೆ ₹ 5,500ಗೆ ಏರಿದೆ. ಒಟ್ಟು 18 ಬಗೆಯ ತರಕಾರಿಗಳ ಬೆಲೆಯಲ್ಲಿ ಭಾರಿ ಹೆಚ್ಚಳವಾಗಿದ್ದು, ಗ್ರಾಹಕರಿಗೆ ಆಘಾತ ಉಂಟು ಮಾಡಿದೆ.
ಪ್ರತಿ ಕ್ವಿಂಟಲ್‌ಗೆ ಕೊತಂಬರಿ ₹ 6 ಸಾವಿರ, ಟೊಮೆಟೊ ₹ 4,800, ಗಜ್ಜರಿ ₹ 4,500, ಕರಿಬೇವು ₹ 3,500, ಬಹುಬೇಡಿಕೆಯ ಬದನೆಕಾಯಿ ಹಾಗೂ ಮೆಂತೆಸೊಪ್ಪು ತಲಾ ₹ 2 ಸಾವಿರ ಹೆಚ್ಚಳವಾಗಿದೆ. ಹಿರೇಕಾಯಿ, ಬೆಂಡೆಕಾಯಿ, ಪಾಲಕ್ ಬೆಲೆ ತಲಾ ₹ 1 ಸಾವಿರ, ತೊಂಡೆಕಾಯಿ ಹಾಗೂ ಈರುಳ್ಳಿ ₹ 500, ಎಲೆಕೋಸು ₹ 200 ಏರಿಕೆಯಾಗಿದೆ.
ಬೀದರ್ ನಗರಕ್ಕೆ ಮೂರು ಜಿಲ್ಲೆಗಳಿಂದ ಹಸಿ ಮೆಣಸಿನಕಾಯಿ ಬರುತ್ತಿರುವ ಕಾರಣ ಅದರ ಬೆಲೆ ಸಹಜವಾಗಿಯೇ ಕುಸಿದಿದೆ. ಕಳೆದ ವಾರಕ್ಕೆ ಹೋಲಿಸಿದರೆ ಮೆಣಸಿನಕಾಯಿ ಬೆಲೆ ₹ 2 ಸಾವಿರ ಕಡಿಮೆಯಾಗಿದೆ. ಅಲೂಗಡ್ಡೆ ಬೆಲೆ ಸಹ ₹ 800 ಇಳಿದಿದೆ.
ಇಲ್ಲಿಯ ಮಾರುಕಟ್ಟೆಗೆ ಮಹಾರಾಷ್ಟ್ರದ ಸೋಲಾಪುರದಿಂದ ಬೀನ್ಸ್, ಮೆಂತೆಸೊಪ್ಪು, ಬೆಂಡೆಕಾಯಿ, ಬೆಳಗಾವಿ, ಹೈದರಾಬಾದ್, ಜಾಲನಾದಿಂದ ಮೆಣಸಿನಕಾಯಿ ಆವಕವಾಗಿದೆ. ಹೈದರಾಬಾದ್‌ನಿಂದ ಟೊಮೆಟೊ, ಬದನೆಕಾಯಿ, ಹಿರೇಕಾಯಿ, ತೊಂಡೆಕಾಯಿ, ಬಿಟ್‌ರೂಟ್, ಬೆಳ್ಳೂಳ್ಳಿ ಬಂದಿದೆ.
‘ಮದುವೆ, ಮುಂಜಿವೆ ಹಾಗೂ ಶಾಲು ಕಿರುಗುಣಿ ಕಾರ್ಯಕ್ರಮಗಳು ನಿರಂತರವಾಗಿ ನಡೆದಿರುವ ಕಾರಣ ತರಕಾರಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಇನ್ನೂ ಒಂದು ವಾರ ತರಕಾರಿ ಬೆಲೆ ಕಡಿಮೆಯಾಗುವ ಲಕ್ಷಣ ಕಂಡು ಬರುತ್ತಿಲ್ಲ. ಮಳೆ ಸುರಿಯಲು ಆರಂಭಿಸಿದ 15 ದಿನಗಳ ನಂತರ ಸ್ವಲ್ಪ ಮಟ್ಟಿಗೆ ಬೆಲೆ ಕುಸಿಯುವ ಸಾಧ್ಯತೆ ಇದೆ’ ಎಂದು ತರಕಾರಿ ಸಗಟು ವ್ಯಾಪಾರಿ ಅಮೀರ್ ಹೇಳುತ್ತಾರೆ.
ಜಿಲ್ಲೆಯಲ್ಲಿ ಬರ ಇರುವ ಕಾರಣ ರೈತರು ತರಕಾರಿ ಬೆಳೆದಿಲ್ಲ. ನೆರೆಯ ರಾಜ್ಯಗಳಲ್ಲಿ ನೀರಾವರಿ ಸೌಲಭ್ಯವಿರುವ ಪ್ರದೇಶದಲ್ಲಿ ಬೆಳೆದ ತರಕಾರಿ ಮಾತ್ರ ನಗರಕ್ಕೆ ಬರುತ್ತಿದೆ. ಸೊಪ್ಪಿಗೆ ಬೇಡಿಕೆ ಇದ್ದರೂ ಬೆಲೆ ಅಧಿಕ ಇರುವ ಕಾರಣ ಗ್ರಾಹಕರು ಖರೀದಿಸಲು ಹಿಂಜರಿಯುತ್ತಿದ್ದಾರೆ. ಹೀಗಾಗಿ ವ್ಯಾಪಾರಿಗಳು ಸಹ ಹೊರ ಜಿಲ್ಲೆಗಳಿಂದ ಸೊಪ್ಪು ಖರೀದಿಸಲು ಆಸಕ್ತಿ ತೋರಿಸುತ್ತಿಲ್ಲ.
ಮಳೆ ಸುರಿಯಲು ಆರಂಭವಾದರೆ ಕೊತಂಬರಿ, ಕರಿಬೇವು, ಸಬ್ಬಸಗಿ ಬೆಲೆ ಕುಸಿಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.