ADVERTISEMENT

ಬಳ್ಳಾರಿ: ದಾಖಲೆ ಪ್ರಮಾಣದಲ್ಲಿ ಬಿಯರ್ ವಹಿವಾಟು

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ 21.39ರಷ್ಟು ಹೆಚ್ಚಳ

ಆರ್. ಹರಿಶಂಕರ್
Published 25 ಮೇ 2024, 7:23 IST
Last Updated 25 ಮೇ 2024, 7:23 IST
<div class="paragraphs"><p>ಪ್ರಾತಿನಿಧಿಕ ಚಿತ್ರ&nbsp;</p></div>

ಪ್ರಾತಿನಿಧಿಕ ಚಿತ್ರ 

   

ಬಳ್ಳಾರಿ: ಜಿಲ್ಲೆಯಲ್ಲಿ 2023–24ನೇ ಸಾಲಿನಲ್ಲಿ ಬಿಯರ್‌ ಮಾರಾಟ ಶೇ 21.39ರಷ್ಟು ಹೆಚ್ಚಳವಾಗಿದೆ. 2023ರ ಏಪ್ರಿಲ್‌ಗೆ ಹೋಲಿಸಿದರೆ ಕಳೆದ ಏಪ್ರಿಲ್‌ನಲ್ಲಿ ಬಿಯರ್‌ ಮಾರಾಟದ ಶೇ 52.95ರಷ್ಟು ಬೆಳವಣಿಗೆ ಕಂಡಿದೆ ಎಂಬುದು ಅಬಕಾರಿ ಇಲಾಖೆಯ ‌ಅಂಕಿ–ಅಂಶಗಳಿಂದ ಗೊತ್ತಾಗಿದೆ.

ಭಾರತೀಯ ತಯಾರಿಕಾ ಮದ್ಯ (ಐಎಂಎಲ್‌) ಮಾರಾಟ ಪ್ರಮಾಣವು ಒಂದು ವರ್ಷದ ಅವಧಿಯಲ್ಲಿ ಶೇ 0.66ರಷ್ಟು ಮಾತ್ರ ಹೆಚ್ಚಳವಾಗಿದೆ. 2024ರ ಏಪ್ರಿಲ್‌ನಲ್ಲಿ ಶೇ 5.53ರಷ್ಟು ಮಾತ್ರ ಏರಿಕೆಯಾಗಿದೆ. ಮದ್ಯಪ್ರಿಯರಿಗೆ ಬಿಯರ್ ಅಚ್ಚುಮೆಚ್ಚಾಗಿರುವುದು ಈ ಅಂಕಿ–ಅಂಶಗಳಿಂದ ಸಾಬೀತಾಗುತ್ತದೆ.

ADVERTISEMENT

ಬಳ್ಳಾರಿಯಲ್ಲಿ ಐದು ಅಬಕಾರಿ ವಲಯಗಳಿವೆ. ಬಳ್ಳಾರಿ ತಾಲ್ಲೂಕಿನಲ್ಲಿ ಎರಡು ವಲಯಗಳಿದ್ದರೆ, ಕಂಪ್ಲಿ ಮತ್ತು ಕುರಗೋಡು ತಾಲ್ಲೂಕುಗಳು ಕಂಪ್ಲಿ ವಲಯಕ್ಕೆ ಸೇರುತ್ತವೆ. ಇನ್ನುಳಿದಂತೆ ಸಂಡೂರು ಮತ್ತು ಸಿರುಗುಪ್ಪ ಪ್ರತ್ಯೇಕ ವಲಯಗಳಾಗಿವೆ.

ಬಳ್ಳಾರಿ ಗಡಿ ಜಿಲ್ಲೆ. ಜತೆಗೆ ಇಲ್ಲಿ ಬಿಸಿಲು ಜಾಸ್ತಿ. ಇನ್ನೊಂದು ಕಡೆ ಇತರೆ ಮದ್ಯದ ದರಗಳು ಏರಿಕೆ ಕಾರಣದಿಂದಲೂ ಬಿಯರ್‌ಗೆ ಹೆಚ್ಚಿನ ಬೇಡಿಕೆ ಬಂದಿದೆ.
–ಎನ್.ಮಂಜುನಾಥ, ಅಬಕಾರಿ ಉಪ ಆಯುಕ್ತ

ಐಎಂಎಲ್‌ಗೆ ಬೆಲೆ ಏರಿಕೆ ಬಿಸಿ: ಬಿಯರ್‌ ಮಾರಾಟ ಪ್ರಮಾಣ ಒಂದೆಡೆ ಏರುತ್ತಿದ್ದರೆ, ಮತ್ತೊಂದು ಕಡೆ ಇತರೆ ಮದ್ಯಗಳ ಮಾರಾಟ ಪ್ರಮಾಣ ಅಷ್ಟಕ್ಕಷ್ಟೇ ಎಂಬಂತಿದೆ. ಈ ವರ್ಷ ಐಎಂಎಲ್‌ ಮಾರಾಟ ಶೇ 0.66ರಷ್ಟು ಮಾತ್ರ ಏರಿರುವುದು ಇದಕ್ಕೆ ಸಾಕ್ಷಿ.

ಬಿಸಿಲ ಝಳ ಹೆಚ್ಚಳದ ಜೊತೆಗೆ, ಸರ್ಕಾರ ಮದ್ಯದ ದರವನ್ನೂ ಏರಿಸಿದೆ. ಬೆಲೆ ಏರಿಕೆ ಬಿಸಿಯ ಕಾರಣದಿಂದಲೂ ಜನರು ಇತರೆ ಮದ್ಯಗಳ ಸೇವನೆಗೆ ಮನಸ್ಸು ಮಾಡಿಲ್ಲ. ಇತರೆ ಮದ್ಯದ 180 ಎಂ.ಎಲ್. ಮದ್ಯಕ್ಕೆ ಕನಿಷ್ಠ ₹40 ಬೆಲೆ ಹೆಚ್ಚಳವಾಗಿದೆ. ಈ ಬೆಲೆ ಹೆಚ್ಚಳ ಸಹ ಮದ್ಯ ಪ್ರಿಯರಿಗೆ ದುಬಾರಿ ಎನಿಸಿದ್ದು, ಬಿಯರ್‌ನತ್ತ ಹೊರಳುವಂತೆ ಮಾಡಿದೆ.

ಸಿರುಗುಪ್ಪದಲ್ಲಿ ಕುಸಿತ: ಸಿರುಗುಪ್ಪದಲ್ಲಿ ಈ ವರ್ಷ 3,98,389 ಪೆಟ್ಟಿಗೆ ಐಎಂಎಲ್‌ ಮಾರಾಟವಾಗಿದೆ. ಕಳೆದ ವರ್ಷ 4,11,034 ಪೆಟ್ಟಿಗೆ ಮಾರಾಟವಾಗಿತ್ತು. ಶೇ 3.08ರಷ್ಟು ಮಾರಾಟ ಕುಸಿತವಾಗಿದೆ. ಆದೇ ಹೊತ್ತಲ್ಲೇ ಬಿಯರ್‌ ಮಾರಾಟ ಹೆಚ್ಚಳವಾಗಿದೆ. ಕಳೆದ ವರ್ಷ ಇಲ್ಲಿ 68,496 ಪೆಟ್ಟಿಗೆ ಬಿಯರ್‌ ಮಾರಾಟವಾಗಿತ್ತು. ಈ ವರ್ಷ ಅದು 78,920 ಪೆಟ್ಟಿಗೆಗೆ ಏರಿದೆ. 

ಕಳೆದ ತಿಂಗಳು ಬಳ್ಳಾರಿ ನಗರದ ವಲಯ–1ರಲ್ಲಿ ಐಎಂಎಲ್‌ ಮಾರಾಟ ಶೇ 1.15ರಷ್ಟು ಕುಸಿತವಾಗಿದೆ. ಆದರೆ, ಇದೇ ಅವಧಿಯಲ್ಲಿ ಬಿಯರ್ ಮಾರಾಟ ಶೇ 46.28ರಷ್ಟು ಬೆಳವಣಿಗೆ ಕಂಡಿದೆ.

ಚುನಾವಣೆ ವೇಳೆ ಭಾರಿ ಬೇಡಿಕೆ
ಏಪ್ರಿಲ್‌ ತಿಂಗಳಲ್ಲಿ ಚುನಾವಣೆ ಕಾವು ಏರಿತ್ತು. ಈ ಅವಧಿಯಲ್ಲಿ ಬಿಯರ್ ಮಾರಾಟವೂ ಭಾರಿ ಏರಿಕೆಯಾಗಿದೆ. 2023ರ ಏಪ್ರಿಲ್‌ಗೆ ಹೋಲಿಸಿದರೆ ಈ ವರ್ಷ ಏಪ್ರಿಲ್‌ನಲ್ಲಿ ಬಿಯರ್‌ ಮಾರಾಟ ಶೇ 52.95ರಷ್ಟು ಹೆಚ್ಚಳವಾಗಿದೆ. ಈ ಒಂದು ತಿಂಗಳಲ್ಲಿ ಜಿಲ್ಲೆಯ ಎಲ್ಲ ಐದು ವಲಯಗಳಲ್ಲಿ 79,510 ಪೆಟ್ಟಿಗೆ ಬಿಯರ್‌ ಮಾರಾಟವಾಗಿದೆ. ಕಳೆದ ವರ್ಷ ಇದೇ ತಿಂಗಳು 51,984 ಪೆಟ್ಟಿಗೆ ಮಾರಾಟವಾಗಿತ್ತು. ಬಳ್ಳಾರಿ ನಗರದ ವಲಯ–1ರಲ್ಲಿ ಅತಿ ಹೆಚ್ಚು, ಅಂದರೆ, 24,809 ಪೆಟ್ಟಿಗೆಗಳು ಮಾರಾಟವಾಗಿದೆ. ಐಎಂಎಲ್‌ ಮಾರಾಟವೂ ಏಪ್ರಿಲ್‌ ತಿಂಗಳಲ್ಲಿ ಹೆಚ್ಚಾಗಿದೆ. ಕಳೆದ ತಿಂಗಳೊಂದರಲ್ಲೇ 1,33,287 ಪೆಟ್ಟಿಗೆ ಐಎಂಎಲ್‌ ಮಾರಾಟವಾಗಿದೆ. 2023ರ ಏಪ್ರಿಲ್‌ಗೆ ಹೋಲಿಸಿದರೆ ಶೇ 5.53ರಷ್ಟು ಏರಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.