ಬಳ್ಳಾರಿ: ಸಮುದಾಯದ ಅಭ್ಯುದಯಕ್ಕಾಗಿ ಪ್ರತಿಯೊಬ್ಬ ನಾಗರಿಕರು ತಮ್ಮ ಮನೆಯಿಂದಲೇ ಸ್ವಚ್ಛತೆಗೆ ಆದ್ಯತೆ ನೀಡಿದರೆ ರೋಗ ರುಜಿನಗಳ ಹರಡುವಿಕೆ ತಡೆಗಟ್ಟಿ ಪರಿಸರ ಕಾಪಾಡಬಹುದು ಎಂದು ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಯುನಿಸೆಫ್ ಹಾಗೂ ವರ್ಲ್ಡ್ ವಿಷನ್ ಇಂಡಿಯಾ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಜಿಲ್ಲಾ ಪಂಚಾಯತ್‍ನ ಕಚೇರಿ ಮುಂಭಾಗದಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ಸ್ವಚ್ಛತಾ ರಥಕ್ಕೆ ಹಸಿರು ನಿಶಾನೆ ತೋರಿ ಚಾಲನೆ ನೀಡಿ ಅವರು ಮಾತನಾಡಿದರು.
ಈ ವಾಹನವು ಬಳ್ಳಾರಿ ತಾಲ್ಲೂಕಿನ ಸುಮಾರು 66 ಗ್ರಾಮಗಳಲ್ಲಿ ಸಂಚರಿಸಲಿದೆ. ಶೌಚಾಲಯ ಬಳಕೆ ಮಹತ್ವ, ಹಸಿ ಕಸ, ಒಣ ಕಸ ವಿಂಗಡಣೆ ಮತ್ತು ಹದಿಹರೆಯದ ಹೆಣ್ಣು ಮಕ್ಕಳಲ್ಲಿ ಋತುಚಕ್ರ ಮತ್ತು ನೈರ್ಮಲ್ಯ ಕುರಿತು, ಕೈತೊಳೆಯುವ ವಿಧಾನ, ಮಕ್ಕಳಿಗೆ ಒಂದು ವರ್ಷ ವಯಸ್ಸಿನೊಳಗೆ ನೀಡುವ ಲಸಿಕೆಗಳ ಮೂಲಕ ಬಾಲ್ಯದಲ್ಲಿ ಕಾಡುವ ರೋಗಗಳ ನಿಯಂತ್ರಣ, ಬಾಲ್ಯವಿವಾಹ ತಡೆಗಟ್ಟುವಿಕೆ ಮಾಹಿತಿಯನ್ನ ಆಡಿಯೋ ಕ್ಲಿಪ್ಲಿಂಗ್‍ಗಳ ಮೂಲಕ ಜಾಗೃತಿ ಮೂಡಿಸಲಿದೆ.
ಸ್ವಚ್ಛತೆ ಕುರಿತ ಕರಪತ್ರಗಳೊಂದಿಗೆ ಆಯಾ ಗ್ರಾಮಗಳ ಗ್ರಾಮ ಪಂಚಾಯತಿ ಸಿಬ್ಬಂದಿ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಮೂಲಕ ಮಾಹಿತಿ ನೀಡಲಾಗುವುದು. ಎಲ್ಲರೂ ಈ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸ್ವಚ್ಛತೆ ಕುರಿತ ಮಾಹಿತಿ ಇರುವ ಕರಪತ್ರಗಳನ್ನು ಬಿಡುಗಡೆ ಮಾಡಿದರು. ಜಿಲ್ಲಾ ಪಂಚಾಯತ್‍ನ ಯೋಜನಾ ನಿರ್ದೇಶಕ ಪ್ರಮೋದ್.ಸಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮೋಹನ್‍ಕುಮಾರಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ ಮತ್ತು ವರ್ಲ್ಡ್ ವಿಷನ್ ಇಂಡಿಯಾ ಎಡಿಪಿ ವ್ಯವಸ್ಥಾಪಕಿ ಪ್ರೇಮಲತಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.