ಸಿರುಗುಪ್ಪ: ತಾಲ್ಲೂಕಿನ ಶಾನವಾಸಪುರ ಗ್ರಾಮದ ವಾಣಿಜ್ಯ ಪದವೀಧರ ಪ್ರಸನ್ನಕುಮಾರ್ ಮಧ್ಯಪ್ರದೇಶದ ಕಡಕ್‍ನಾಥ್ ತಳಿ ಕೋಳಿ ಸಾಕಣೆ ಮೂಲಕ ಆದಾಯ ಕಂಡುಕೊಂಡಿದ್ದಾರೆ.
ರೈತರು ಸಮಗ್ರ ಕೃಷಿ ಪದ್ಧತಿಗಳೊಂದಿಗೆ ಉಪ ಕಸುಬುಗಳಾದ ಕೋಳಿ, ಮೊಲ, ಕುರಿಸಾಕಾಣಿಕೆ ಮತ್ತು ಹೈನುಗಾರಿಕೆಯಂತಹ ಸಣ್ಣ ಉದ್ದಿಮೆಗಳಲ್ಲೂ ಸುಸ್ಥಿರ ಬದುಕನ್ನು ಕಟ್ಟಿಕೊಳ್ಳಬಹುದು ಎಂಬುದಕ್ಕೆ ಅವರು ಮಾದರಿಯಾಗಿದ್ದಾರೆ.
ಐದು ತಿಂಗಳ 720 ಕೋಳಿ ಮರಿಗಳನ್ನು ಅವರು ತಮ್ಮ ಫಾರಂನಲ್ಲಿ ಸಾಕಾಣಿಕೆ ಮಾಡುತ್ತಿದ್ದಾರೆ. ಈ ಕೋಳಿಯ ಮಾಂಸ ಹಾಗೂ ಮೊಟ್ಟೆಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದು, ಮಾಂಸದಲ್ಲಿ ಕೊಬ್ಬಿನ ಪ್ರಮಾಣ ಕಡಿಮೆ ಇರುವುದರಿಂದ ಮಧುಮೇಹ ಹಾಗೂ ಹೃದಯರೋಗ ಖಾಯಿಲೆ ಇರುವ ಮಾಂಸ ಪ್ರಿಯರಿಗೆ ಹೇಳಿ ಮಾಡಿಸಿದ ತಳಿಯಾಗಿದೆ.
‘ಬ್ರಾಯ್ಲರ್ ಕೋಳಿ ಹಾಗೂ ನಾಟಿಕೋಳಿ ಮಾಂಸದ ರುಚಿಯಲ್ಲಿ ಅಪಾರ ವ್ಯತ್ಯಾಸವಿದ. ನಾಟಿಕೋಳಿಯ ಜಾತಿಗೆ ಸೇರಿರುವ ಕಡಕ್‍ನಾಥ್ ಕೋಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಸಾಕಾಣಿಕೆ ಮಾಡುತ್ತಿದ್ದೇನೆ’ ಎಂದು ಪದವೀಧರ ಪ್ರಸನ್ನಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಇವುಗಳನ್ನು ಹಿತ್ತಲ ಕೋಳಿಗಳಂತೆಯೇ ಸಾಕಾಣಿಕೆ ಮಾಡಬಹುದು. ಕಡಿಮೆ ಅವಧಿಯಲ್ಲಿ ಹೆಚ್ಚಿನ ಮಾಂಸದ ಇಳುವರಿ ಜೊತೆಗೆ ಮೊಟ್ಟೆಗಳನ್ನು ಕೂಡ ನೀಡುತ್ತವೆ. ಉತ್ತಮ ಮೊಟ್ಟೆಗಳ ಇಳುವರಿಯನ್ನು ಪಡೆಯಲು 150 ಹೆಣ್ಣು ಕೋಳಿಗಳಿಗೆ 30 ಹುಂಜ ಸೇರಿದ ಘಟಕಗಳನ್ನು ವಿಂಗಡಿಸಿಕೊಂಡರೆ ಮೊಟ್ಟೆಗಳ ಇಳುವರಿಯಲ್ಲಿ ಹೆಚ್ಚಳ ಕಾಣಬಹುದು’ ಎಂದರು.
‘ನಮ್ಮಲ್ಲಿ 600 ಹೆಣ್ಣು ಕೋಳಿಗಳಿಗೆ 120 ಹುಂಜಗಳನ್ನು ನಾಲ್ಕು ಘಟಕಗಳಾಗಿ ವಿಂಗಡಿಸಲಾಗಿದೆ. ಅವುಗಳು 6 ತಿಂಗಳಿಗೆ ಮೊಟ್ಟೆಗಳನ್ನು ಇಡಲು ಪ್ರಾರಂಭಿಸಿ ದಿನಬಿಟ್ಟು ದಿನ ಪ್ರತಿ ಕೋಳಿ 100 ಮೊಟ್ಟೆಗಳನ್ನು ನೀಡುತ್ತವೆ. ಮಾರುಕಟ್ಟೆಯಲ್ಲಿ ಪ್ರತಿ ಮೊಟ್ಟೆಗೆ ₹ 15 ಬೆಲೆ ಇದ್ದು, ಒಂದು ಕೆಜಿ ಮಾಂಸಕ್ಕೆ ₹ 750 ರಿಂದ ₹1 ಸಾವಿರದವರೆಗೂ ದರವಿದೆ’ ಎಂದು ವಿವರಿಸಿದರು.
‘ಇವು ಎಲ್ಲಾ ರೀತಿಯ ಆಹಾರವನ್ನು ಸೇವಿಸುತ್ತವೆ, ತರಕಾರಿಗಳು, ಪಲ್ಲೆಗಳು ಜೊತೆಗೆ ಪ್ರತಿದಿನ ವಿವಿಧ ಮಿಶ್ರಧಾನ್ಯಗಳ ಪುಡಿಯನ್ನು ಪ್ರತಿ ಕೋಳಿಗೆ 100ಗ್ರಾಂ ನಂತೆ ಕೊಡುತ್ತೇನೆ’ ಎಂದರು.
‘ಪ್ರತಿ ಕೋಳಿಯಿಂದ ಸರಾಸರಿ 100 ಮೊಟ್ಟೆಗಳ ಇಳುವರಿಯಂತೆ 600 ಕೋಳಿಗಳಿಂದ 60 ಸಾವಿರ ಮೊಟ್ಟೆಗಳನ್ನು ಪಡೆದರೆ, ಪ್ರತಿ ಮೊಟ್ಟೆಗೆ ₹15ರಂತೆ ₹ 9 ಲಕ್ಷ ಆದಾಯ ದೊರಕುತ್ತದೆ. ಮೊಟ್ಟೆ ಮತ್ತು ಕೋಳಿ ಮಾರಾಟದಿಂದ ₹ 14,40 ಲಕ್ಷ ಆದಾಯವನ್ನು ನಿರೀಕ್ಷಿಸಿದ್ದು, ಕೋಳಿ ಸಾಕಾಣಿಕೆಗೆ ತಗುಲಿದ ₨ 7 ಲಕ್ಷ ವೆಚ್ಚ ಕಳೆದರೆ ನಿಖರವಾಗಿ ₹7.35 ಲಕ್ಷ ಆದಾಯ ಬರುತ್ತದೆ’ ಎಂದರು.
ಕೋಳಿ ಮತ್ತು ಮೊಟ್ಟೆಗಳ ಮಾರಾಟಕ್ಕೆ ಬೆಳಗಾವಿಯ ಇರೈಡಸ್ ಆಗ್ರೋ ಆಗ್ರ್ಯಾನಿಕ್ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಮಾರುಕಟ್ಟೆಯ ಸಮಸ್ಯೆ ಇಲ್ಲ, ಅವರಿಗೆ ತಂದೆ ಶಶಿಧರಗೌಡ ಹಾಗೂ ಸಹೋದರ ಚೇತನ್‍ಕುಮಾರ್ ಸಾಥ್ ನೀಡುತ್ತಿದ್ದಾರೆ. ಸಂಪರ್ಕಕ್ಕೆ: 9663648642.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.