ADVERTISEMENT

ಬೆಳೆವಣಿಗೆಗೆ ತಕ್ಕಂತೆ ಅಭಿವೃದ್ಧಿಯಾಗದ ನಗರ: ಡಾ.ಅರವಿಂದ್ ಪಟೇಲ್‌

ಬಳ್ಳಾರಿ ನಾಗರಿಕ ಹೋರಾಟ ಸಮಿತಿಯ ಸಮಾವೇಶದಲ್ಲಿ ತಜ್ಞರ ಬೇಸರ

​ಪ್ರಜಾವಾಣಿ ವಾರ್ತೆ
Published 30 ಜೂನ್ 2024, 15:26 IST
Last Updated 30 ಜೂನ್ 2024, 15:26 IST
ಬಳ್ಳಾರಿ ನಗರಕ್ಕೆ ಸಂಬಂಧಿಸಿದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ‘ಬಳ್ಳಾರಿ ನಾಗರಿಕ ಹೋರಾಟ ಸಮಿತಿ (ಬಿಎನ್‌ಎಚ್‌ಎಸ್‌)’ ವತಿಯಿಂದ ಭಾನುವಾರ ಗಾಂಧಿ ಭವನದಲ್ಲಿ ಜನ ಸಮಾವೇಶ ನಡೆಯಿತು
ಬಳ್ಳಾರಿ ನಗರಕ್ಕೆ ಸಂಬಂಧಿಸಿದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ‘ಬಳ್ಳಾರಿ ನಾಗರಿಕ ಹೋರಾಟ ಸಮಿತಿ (ಬಿಎನ್‌ಎಚ್‌ಎಸ್‌)’ ವತಿಯಿಂದ ಭಾನುವಾರ ಗಾಂಧಿ ಭವನದಲ್ಲಿ ಜನ ಸಮಾವೇಶ ನಡೆಯಿತು   

ಬಳ್ಳಾರಿ: ‘ಬಳ್ಳಾರಿ ನಗರ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಇದಕ್ಕೆ ತಕ್ಕಂತೆ ಸ್ಥಳೀಯ ಸಂಸ್ಥೆಯೂ ಕೂಡ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದೆ. ಆದರೆ ಸಾರ್ವಜನಿಕ ಸೌಲಭ್ಯಗಳು ಮಾತ್ರ ಅಭಿವೃದ್ಧಿಯಾಗಿಲ್ಲ’ ಎಂದು ಡಾ.ಅರವಿಂದ್ ಪಟೇಲ್‌ ಅಭಿಪ್ರಾಯಪಟ್ಟರು. 

ಬಳ್ಳಾರಿಯಲ್ಲಿ ರಿಂಗ್ ರಸ್ತೆ, ಸುಧಾ ಕ್ರಾಸ್ ಮೇಲ್ಸೇತುವೆ, ನಗರದ ಸ್ವಚ್ಛತೆ, ಉತ್ತಮ ರಸ್ತೆ ಹಾಗೂ ಒಳಚರಂಡಿ ವ್ಯವಸ್ಥೆ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಳ್ಳಾರಿ ನಾಗರಿಕ ಹೋರಾಟ ಸಮಿತಿ (ಬಿಎನ್‌ಎಚ್‌ಎಸ್‌) ವತಿಯಿಂದ ಭಾನುವಾರ ಗಾಂಧಿ ಭವನದಲ್ಲಿ ಜನ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.

‘ನಗರದಲ್ಲಿ ಸೊಳ್ಳೆ ನಿಯಂತ್ರಣಕ್ಕಾಗಿ ಫಾಗಿಂಗ್ ಮಾಡುತ್ತಿಲ್ಲ, ಧೂಳು ತುಂಬಿದ ರಸ್ತೆಗಳು ಹೆಚ್ಚುತ್ತಿವೆ, ಶುದ್ಧ ಕುಡಿಯುವ ನೀರಿಲ್ಲ. ಇಂಥ ಹಲವು ಸಮಸ್ಯೆಗಳು ಜನರ ಆರೋಗ್ಯದೊಂದಿಗೆ ತಳಕುಹಾಕಿಕೊಂಡಿವೆ. ಇದರಿಂದ ಅನಾರೋಗ್ಯ ಹೆಚ್ಚುತ್ತಿದೆ’ ಎಂದರು. 

ADVERTISEMENT

ಡಾ.ಗೋವರ್ಧನ್ ರೆಡ್ಡಿ ಮಾತನಾಡಿ, ‘ಬಳ್ಳಾರಿ ಇನ್ನೂ ಮೂಲ ಸೌಲಭ್ಯಗಳಿಲ್ಲದೆ ಸೊರಗುತ್ತಿದೆ. ನಗರದ ರಸ್ತೆಗಳು ಅವೈಜ್ಞಾನಿಕವಾಗಿವೆ. ಅಲ್ಪ ಮಳೆ ಬಂದರೂ ಮನೆಗಳಿಗೆ ನೀರು ನುಗ್ಗುತ್ತಿದೆ. ಒಳಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಇಲ್ಲಿ ಎಲ್ಲವೂ ಅಸ್ತವ್ಯಸ್ತ. ಇದರ ವಿರುದ್ಧ ಜನ ಧ್ವನಿ ಎತ್ತಬೇಕು’ ಎಂದರು. 

ಬಿಎನ್ಎಚ್ಎಸ್‌ ಜಿಲ್ಲಾ ಸಂಚಾಲಕ ಸೋಮಶೇಖರ್ ಗೌಡ ಮಾತನಾಡಿ, ‘ಕೋಟ್ಯಂತರ ರೂಪಾಯಿ ತೆರಿಗೆ ಹಣ ಕಟ್ಟಿಸಿಕೊಳ್ಳುತ್ತಿರುವ ಪಾಲಿಕೆ ಜನರಿಗೆ ಮೂಲ ಸೌಲಭ್ಯಗಳನ್ನು ಒದಗಿಸುವ ಬದಲು, ದುಂದುವೆಚ್ಚ ಮಾಡುತ್ತಿದೆ. ಜನತೆ ಇದನ್ನೆಲ್ಲ ಮೂಕ ಪ್ರೇಕ್ಷಕರಾಗಿ ನೋಡುತ್ತಾ ಕುಳಿತುಕೊಳ್ಳಬಾರದು‘ ಎಂದರು. 

ಸಂಘಟನೆಯ ತಾಂತ್ರಿಕ ಸಲಹೆಗಾರ ಉದ್ದೀಹಾಳ್ ಮತ್ತು ಮುರ್ತುಜಾ ಸಾಬ್ , ಕಾರ್ಯಕಾರಿ ಸಮಿತಿ ಸದಸ್ಯ ಡಾ.ಎನ್.ಪ್ರಮೋದ್ ಮಾತನಾಡಿದರು. ಸಮಿತಿಯ ಸಲಹೆಗಾರರಾಗಿ ಡಾ.ಯೋಗಾನಂದ ರೆಡ್ಡಿ, ನರಸಣ್ಣ, ಶಾಮಸುಂದರ್, ಗುರುರಾಜ್, ಸಂಚಾಲಕ ಆರ್. ಸೋಮಶೇಖರ್ ಗೌಡ ಸೇರಿದಂತೆ ಒಟ್ಟು 17 ಸದಸ್ಯರುಗಳ ಹೊಸ ಸಮಿತಿ ರಚಿಸಲಾಯಿತು.

ಸಮಿತಿ ಸದಸ್ಯರು ಸೇರಿದಂತೆ ವಿವಿಧ ಬಡಾವಣೆಗಳ ನಾಗರಿಕರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.