ADVERTISEMENT

ಬಳ್ಳಾರಿ | ಚುನಾವಣೆ, ಗ್ಯಾರಂಟಿ ಗುಂಗು: ಅಭಿವೃದ್ಧಿಗೆ ಹಿನ್ನೆಡೆ

ಆರ್. ಹರಿಶಂಕರ್
Published 14 ಅಕ್ಟೋಬರ್ 2024, 5:20 IST
Last Updated 14 ಅಕ್ಟೋಬರ್ 2024, 5:20 IST
<div class="paragraphs"><p>ಬಳ್ಳಾರಿ </p></div>

ಬಳ್ಳಾರಿ

   

ಬಳ್ಳಾರಿ: ಸಾಧನಾ ಸಮಾವೇಶ, ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಯೋಜನೆಗಳ ಉದ್ಘಾಟನೆಗೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಡೂರು ತಾಲೂಕಿಗೆ ಇಂದು ಬರುತ್ತಿದ್ದಾರೆ. ಜಿಲ್ಲೆಯ ಕಾಂಗ್ರೆಸ್‌ ಪಾಳಯ ಹಾರ ತುರಾಯಿಗಳನ್ನು ಹಿಡಿದು ನಿಂತಿದ್ದರೆ, ಸಂಘ–ಸಂಸ್ಥೆಗಳು, ಹೋರಾಟಗಾರರು ಪ್ರಶ್ನಾವಳಿಗಳನ್ನು ಎಸೆಯುತ್ತಿದ್ದಾರೆ.

ಸಿದ್ದರಾಮಯ್ಯ ಅವರು ‘ಭಾರತ್‌ ಜೋಡೊ ಯಾತ್ರೆ’ ಮತ್ತು ವಿಧಾನಸಭಾ ಚುನಾವಣೆ ವೇಳೆ ಬಳ್ಳಾರಿಗೆ ಬಂದು ಹೋಗಿದ್ದು ಬಿಟ್ಟರೆ, ವಿಶ್ವ ಯೋಗ ದಿನದ ಅಂಗವಾಗಿ ಜೂನ್‌ 21ರಂದು ತೋರಣಗಲ್‌ನ ಜಿಂದಾಲ್‌ಗೆ ಭೇಟಿ ಕೊಟ್ಟಿದ್ದೇ ಕೊನೆ. ಅಲ್ಲಿಂದ ಇಲ್ಲಿಯ ವರೆಗೆ ಅವರು ಜಿಲ್ಲೆಗೆ ಬಂದಿಲ್ಲ. ಆದರೆ, ಈ ಜಿಲ್ಲೆಗೆ ಅವರು ನೀಡಿರುವ ವಾಗ್ದಾನ ಮಾತ್ರ ಹಾಗೇ ಉಳಿದಿದೆ.

ADVERTISEMENT

ಮುಖ್ಯಮಂತ್ರಿಯವರ ಇಂದಿನ ಭೇಟಿ ಗ್ಯಾರೆಂಟಿ ಯೋಜನೆಗಳ ಸಾಧನಾ ಸಮಾವೇಶದಂತೆ ಕಾಣುತ್ತಿದ್ದರೂ, ಇದು ಸಂಡೂರು ಉಪಚುನಾವಣಾ ಕಸರತ್ತಿನ ಆರಂಭ ಎಂಬ ಮಾತು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ. ನಾರಿಹಳ್ಳಕ್ಕೆ ಬಾಗಿನ ಅರ್ಪಿಸುತ್ತಿರುವುದೂ ಕಸರತ್ತಿನ ಒಂದು ಭಾಗ ಎಂದೂ ಹೇಳಲಾಗುತ್ತಿದೆ.

ಅಂದಹಾಗೆ, ನಾರಿಹಳ್ಳ ಜಲಾಶಯವೇನೋ ತುಂಬಿದೆ. ಅದರ ಒಡಲಿಗೆ ಸಂಡೂರಿನ ಗಣಿಗಾರಿಕೆಯ ಮಣ್ಣು ಬಂದು ಸೇರುತ್ತಿರುವ ಬಗ್ಗೆ, ನೀರು ಕೆಂಪಾಗಿ ಹರಿಯುತ್ತಿರುವ ಬಗ್ಗೆ ಮುಖ್ಯಮಂತ್ರಿ ಗಂಭೀರಾಗಿ ಯೋಚನೆ ಮಾಡಲಿ ಎನ್ನುತ್ತಾರೆ ಸಂಡೂರಿನ ಹೋರಾಟಗಾರರು. ಇತ್ತೀಚೆಗೆ ಸುರಿದ ಭಾರಿ ಮಳೆ ಸಂಡೂರಿನಲ್ಲಿ ಅವಾಂತರವನ್ನೇ ಸೃಷ್ಟಿ ಮಾಡಿತ್ತು. ಕೆಂಪನೆ ನೀರಿನಲ್ಲಿ ವಾಹನಗಳು ಮುಳುಗಿದ್ದ ದೃಶ್ಯಗಳು ಎಲ್ಲೆಡೆ ಹರಿದಾಡಿದ್ದವು. ಈಗ ಗಣಿಗಾರಿಕೆ ಕಾನೂನು ಬದ್ಧವಾಗಿ ನಡೆಯುತ್ತಿದೆಯಾದರೂ, ಈ ಅನಾಹುತಗಳಿಗೆ ಕಾರಣರಾರರು ಎಂಬ ಪ್ರಶ್ನೆಗಳನ್ನು ಅಲ್ಲಿನ ಜನ ಕೇಳುತ್ತಿದ್ದಾರೆ. ‌

ಜೀನ್ಸ್‌ ಪಾರ್ಕ್‌ ಎಲ್ಲಿ?: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ದಿಗ್ಗಜ ನಾಯಕರೆಲ್ಲರೂ ಸೇರಿ ಬಳ್ಳಾರಿ ಜಿಲ್ಲೆಗೆ ನೀಡಿದ್ದ ‘ಜೀನ್ಸ್‌ ಪಾರ್ಕ್‌’ ಭರವಸೆ ಇನ್ನೂ ಈಡೇರಿಲ್ಲ. ಈ ಮಹತ್ವಾಕಾಂಕ್ಷಿ ಯೋಜನೆ ಜಾರಿ ವಿಚಾರದಲ್ಲಿ ಏನಾದರೂ ಬೆಳವಣಿಗೆಗಳಾಗಿವೆ ಎಂಬುದಕ್ಕೆ ಯಾರಿಂದಲೂ ಉತ್ತರವಿಲ್ಲ.

ಕೈಗಾರಿಕೆ, ಪರಿಹಾರ ಎಲ್ಲಿ?: ಕುಡುತಿನಿ ಭಾಗದಲ್ಲಿ ಕೈಗಾರಿಕೆ ಉದ್ದೇಶಕ್ಕಾಗಿ ರೈತರಿಂದ ವಶಕ್ಕೆ ಪಡೆಯಲಾದ ಭೂಮಿಗೆ ಪ್ರತಿಯಾಗಿ ನ್ಯಾಯಯುತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಕುಡುತಿನಿ ಭೂಸಂತ್ರಸ್ತ ಹೋರಾಟಗಾರರು ಸರಿಸುಮಾರು ಎರಡು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಲೇ ಬರುತ್ತಿದ್ದಾರೆ. ಬಂದ್‌ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ಅವರಿಗೆ ಪರಿಹಾರ ಮಾತ್ರ ಸಿಕ್ಕಿಲ್ಲ.

ಬಳ್ಳಾರಿ ತಾಲೂಕಿನ ಕುಡುತಿನಿ, ಹರಗಿನಡೋಣಿ, ಜಾನೇಕುಂಟೆ, ವೇಣಿವೀರಪುರ, ಕೊಳಗಲ್ಲು, ಯಾರಂಗಳಿಗಿ, ಸಿದ್ದಮ್ಮನಹಳ್ಳಿ ಗ್ರಾಮಗಳಲ್ಲಿ ಕಳೆದ 14 ವರ್ಷಗಳಲ್ಲಿ ವಿವಿಧ ಕಂಪನಿಗಳಿಗಾಗಿ ಸುಮಾರು 12,500 ಎಕರೆ ಕೃಷಿ ಭೂಮಿಯನ್ನು ರೈತರಿಂದ ಕೆಐಡಿಬಿ ವಶಕ್ಕೆ ಪಡೆದಿದೆ. ಆದರೆ, ಯಾವೊಂದು ಕಂಪನಿಗಳೂ ಕಾರ್ಖಾನೆ ಆರಂಭಿಸಿಲ್ಲ.

ಭಾರತದ ನವರತ್ನ ಕಂಪನಿಗಳಲ್ಲಿ ಒಂದೆನಿಸಿಕೊಂಡಿರುವ ‘ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (ಎನ್‌ಎಂಡಿಸಿ)’ ಉಕ್ಕಿನ ಕಾರ್ಖಾನೆ ಆರಂಭಿಸುವ ಹೆಸರಲ್ಲಿ ಒಟ್ಟು 2856 ಎಕರೆ ಭೂಮಿಯನ್ನು ಪಡೆದು ದಶಕವೇ ಕಳೆದ ಹೋಗಿದೆ. ತನ್ನದೇ ಸ್ವಂತದ ಗಣಿಯನ್ನೂ ಹೊಂದಿದೆ. ಆದರೂ ಈ ವರೆಗೆ ಈ ಕಂಪನಿ ಕಾರ್ಖಾನೆ ಆರಂಭಿಸಿಲ್ಲ. ₹50 ಸಾವಿರ ಕೋಟಿ ಹೂಡಿಕೆ ಸಾಧ್ಯತೆ ಇರುವ ಈ ಯೋಜನೆ ಏನಾಗಿದೆ ಎಂಬುದರ ಬಗ್ಗೆ ಸರ್ಕಾರ ಈ ವರೆಗೆ ಏನನ್ನೂ ಹೇಳಿಲ್ಲ. ಇದರಿಂದ ಸಾವಿರಾರರು ಜನರಿಗೆ ಉದ್ಯೋಗ ಸಿಗುವ ಸಾಧ್ಯತೆಗಳಿದ್ದರೂ ಸರ್ಕಾರ ಕೇಂದ್ರದೊಂದಿಗೆ ಈ ವಿಚಾರವನ್ನು ಚರ್ಚಿಸುವ ಗೋಜಿಗೇ ಹೋಗಿಲ್ಲ ಎಂದು ಹೇಳಲಾಗಿದೆ.

ಇನ್ನು ಜಿಂದಾಲ್‌ಗೆ ನೀಡಲಾದ ಭೂಮಿಗೆ ನಿಗದಿ ಮಾಡಿರುವ ಬೆಲೆಯ ಬಗ್ಗೆ ಮತ್ತು ಭೂಮಿಯನ್ನು ಮಾರಾಟ ಮಾಡುವುದಕ್ಕೇ ಸಂಘಟನೆಗಳಿಂದ ವಿರೋಧವಿದೆ. ಪಾದಯಾತ್ರೆಗಳು ನಡೆದಿವೆ. ಈ ಪ್ರತಿಭಟನೆಗಳ ಬಗ್ಗೆಯಾಗಲಿ, ಭೂಮಿ ನೀಡುವ ನಿರ್ಧಾರದಲ್ಲಿ ಯಾವುದಾದರೂ ಬದಲಾವಣೆಯಾಗಿದೆಯೇ ಎಂಬುದರ ಬಗ್ಗೆಯಾಗಲಿ ಸರ್ಕಾರ ನಿಲುವು ಸ್ಪಷ್ಟ ಪಡಿಸಿಲ್ಲ. ಸರ್ಕಾರ ತನ್ನ ನಿಲುವು ಸ್ಪಷ್ಟ ಪಡಿಸಬೇಕು ಎಂಬ ಒತ್ತಾಯ ಇವೆ.

ಇತ್ತೀಚೆಗೆ ನಡೆದ ಕಲಬುರಗಿ ಸಚಿವ ಸಂಪುಟದಲ್ಲಿ ಬಳ್ಳಾರಿ ಜಿಲ್ಲೆ ಭಾರಿ ನಿರೀಕ್ಷೆಗಳನ್ನು ಇಟ್ಟುಕೊಂಡಿತ್ತು. ಆದರೆ, ಸಂಪುಟದ ನಿರ್ಧಾರಗಳು ಜಿಲ್ಲೆಯನ್ನು ನಿರಾಶೆಗೆ ದೂಡಿದವು. ಸಚಿವ ಸಂಪುಟ ಸಭೆಗೆ ಬಳ್ಳಾರಿ ಜಿಲ್ಲೆಯಿಂದ ಹಲವು ಮಹತ್ವದ ಪ್ರಸ್ತಾವನೆಗಳು ಸಲ್ಲಿಕೆಯಾಗಿದ್ದವು. ಇದೇ ಕಾಂಗ್ರೆಸ್‌ ಪಕ್ಷದ ವರಿಷ್ಠ ನಾಯಕ ಭರವಸೆ ನೀಡಿದ್ದ ಜೀನ್ಸ್‌ ಪಾರ್ಕ್‌ ನಿರ್ಮಾಣ, ಬಳ್ಳಾರಿಗೆ ಸ್ವಂತದ ವಿಮಾನ ನಿಲ್ದಾಣ, ಒಣ ಮೆಣಸಿನಕಾಯಿ ಮಾರುಕಟ್ಟೆ, ಕಂಪ್ಲಿ–ಕುರುಗೋಡು ತಾಲೂಕುಗಳಲ್ಲಿ ರಸ್ತೆ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳ ಬಗ್ಗೆ ಸರ್ಕಾರಕ್ಕೆ ಜಿಲ್ಲಾಡಳಿತ ಮನದಟ್ಟು ಮಾಡಿಕೊಟ್ಟಿತ್ತು. ಇದರ ಜತೆಗೆ ಇಲಾಖೆಗಳೂ ಸರ್ಕಾರಕ್ಕೆ ಪ್ರತ್ಯೇಕವಾಗಿ ಪ್ರಸ್ತಾವನೆ ಸಲ್ಲಿಸಿದ್ದವು.

ಪ್ರಸ್ತಾವನೆಗಳನ್ನೆಲ್ಲ ಪಡೆದ ಸರ್ಕಾರ ಬಳ್ಳಾರಿ ಕೋಟೆಗೆ ರೋಪ್‌-ವೇ, ಮಹಿಳಾ ಪದವಿ ಪೂರ್ವ ಕಾಲೇಜಿಗೆ ಕಟ್ಟಡ ನಿರ್ಮಾಣ, ಬಳ್ಳಾರಿಯ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ಒಂದು ಎಂಆರ್‌ಐ ಯಂತ್ರ ಬಿಟ್ಟರೆ ಬೇರೇನನ್ನೂ ಪ್ರತ್ಯೇಕವಾಗಿ ಕೊಡಲೇ ಇಲ್ಲ. ಕಲ್ಯಾಣ ಕರ್ನಾಟಕ ಪ್ರಾಂತ್ಯದಲ್ಲಿ ಬಳ್ಳಾರಿಯನ್ನು ಮರ್ಜಿಗೆಂಬಂತೆ ಕಾಣುತ್ತಿರುವುದರ ಬಗ್ಗೆ ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇವುಗಳ ಬಗ್ಗೆ ಸಿಎಂ ಉತ್ತರಿಸುವರೇ ಎಂಬ ಪ್ರಶ್ನೆಗಳು ಸದ್ಯ ಮುನ್ನೆಲೆಗೆ ಬಂದಿವೆ.

ಇಡೀ ಕರ್ನಾಟಕದಲ್ಲೇ ಬೈಪಾಸ್‌ ಇಲ್ಲದ ಮಹಾನಗರ ಪಾಲಿಕೆ ಎಂಬ ಕುಖ್ಯಾತಿ ಬಳ್ಳಾರಿ ನಗರದ್ದಾಗಿದೆ. ಇದರ ಜತೆಗೆ, ತುಂಗಭದ್ರಾ ಜಲರಾಶಿಯ ಮಗ್ಗುಲಲ್ಲೇ ಇದ್ದರೂ ಬಳ್ಳಾರಿ ನಗರಕ್ಕೆ ನಿರಂತರ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದ್ದರ ಬಗ್ಗೆ ಜನರಲ್ಲಿ ಮರುಕವಿದೆ. ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ (ಕೆಎಂಇಆರ್‌ಸಿ)ಯ ಅನುದಾನದಲ್ಲಿ ತುಂಗಭದ್ರಾ ಜಲಾಶಯದಿಂದ ನೇರ ಪೈಪ್‌ಲೈನ್‌ ಮಾಡಿ ಬಳ್ಳಾರಿ ನಗರಕ್ಕೆ ನೀರು ಪೂರೈಸುವುದಾಗಿ ಬಳ್ಳಾರಿ ನಗರ ಶಾಸಕರು ಹೇಳಿದ್ದಾರೆ. ಆದರೆ, ಯೋಜನೆಗೆ ಕೆಎಂಇಆರ್‌ಸಿ ಅನುಮತಿ ನೀಡಿದ ಬಗ್ಗೆ ಒಂದು ಸಣ್ಣ ದಾಖಲೆಯೂ ಲಭ್ಯವಿಲ್ಲ. ಒಟ್ಟಿನಲ್ಲಿ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆಯಾಗಬೇಕು ಎಂಬುದು ಇಲ್ಲಿನವರ ಒತ್ತಾಯವಾಗಿದೆ.

ಪ್ರಾಧಿಕಾರಗಳು, ಪ್ರಶಸ್ತಿಗಳು,ವಿವಿ ನಾಮನಿರ್ದೇಶಿತ ಸ್ಥಾನಗಳಿಗೆ ಬಳ್ಳಾರಿಯವರಲ್ಲದವರನ್ನು, ಆಯ್ಕೆ ಮಾಡುತ್ತಿರುವ ಬಗ್ಗೆಯೂ ಆಕ್ಷೇಪಗಳಿವೆ.

ಬುಡಾಕ್ಕೆ ಬೇಕು ಕಾಯಕಲ್ಪ

ಪ್ರತಿಷ್ಠೆ, ಪಾಲು, ಸ್ವಹಿತಾಸಕ್ತಿ ಸಂಘರ್ಷದಿಂದ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ ಬಿಡಾ ಬಡವಾಗಿದೆ. ಬಳ್ಳಾರಿಯ ಅಭಿವೃದ್ಧಿಗೆ ಜಿಲ್ಲಾಡಳಿತ, ಮಹಾನಗರ ಪಾಲಿಕೆಯೊಂದಿಗೆ ಹೆಗಲು ಕೊಟ್ಟು ನಿಲ್ಲಬೇಕಿದ್ದ ಪ್ರಾಧಿಕಾರ ಇಂದು ಕೇವಲ ಅನುಮತಿ ಮಂಜೂರಾತಿ ಪ್ರಾಧಿಕಾರವಾಗಿ ಉಳಿದಿದೆ. ಬಡಾವಣೆಗಳ ಮಂಜೂರಾತಿಗಷ್ಟೇ ಸೀಮಿತವಾಗಿರುವ ಪ್ರಾಧಿಕಾರಕ್ಕೆ ಕಾಯಕಲ್ಪ ಬೇಕು. ನಗರದ ವ್ಯವಸ್ಥಿತ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಬೇಕು. ಎಲ್ಲಕ್ಕೂ ಮುಖ್ಯವಾಗಿ ಪ್ರಾಧಿಕಾರದೊಳಗಿನ ಮುಸುಕಿನ ಗುದ್ದಾಟಗಳು ಕೊನೆಯಾಗಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ಸ್ವತಂತ್ರ ಉಸ್ತುವಾರಿ ಬೇಕು

ಬಳ್ಳಾರಿ ಜಿಲ್ಲೆಯ ಉಸ್ತುವಾರಿಯನ್ನು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಬಿ.ಝಡ್‌ ಜಮೀರ್‌ ಅಹಮದ್‌ ಅವರಿಗೆ ವಹಿಸಲಾಗಿದೆ. ಬೆಂಗಳೂರಿನವರಾದ ಅವರಿಗೆ ವಿಜಯನಗರ ಉಸ್ತುವಾರಿಯೇ ಹೊರೆಯಾಗಿತ್ತು. ಅದರ ನಡುವೆ ಬಳ್ಳಾರಿ ಉಸ್ತುವಾರಿ ವಹಿಸಿರುವುದು ಅವರಿಗೆ ಹೊರಲಾಗದಂತಾಗಿದೆ ಎಂಬ ಆರೋಪಗಳು ಜನರಿಂದ ಕೇಳಿ ಬಂದಿದೆ. ಇತ್ತೀಚೆಗೆ ನಡೆದ ಕೆಡಿಪಿ ಸಭೆ ಕೆಲವೇ ಗಂಟೆಗಳಲ್ಲಿ ಪೂರ್ಣವಾಗಿದ್ದು, ಜತೆಗೆ ಸಚಿವರು ಜಿಲ್ಲೆಯಲ್ಲಿ ಕಚೇರಿಯನ್ನೂ ಆರಂಭಿಸಿಲ್ಲದಿರುವುದು ಈ ಮಾತಿಗೆ ಪುಷ್ಟಿ ನೀಡುವಂತಿದೆ.

ಅಭಿವೃದ್ಧಿ ಎಂದರೆ ಸಂಡೂರು ಎಂದು ಹೇಳಲಾಗುವ ತಾಲೂಕಿನಲ್ಲಿ ಬಸ್ ನಿಲ್ದಾಣವೇ ಸರಿ ಇಲ್ಲ. ಕಮತೂರು ಹಳ್ಳಿಯ ಸರ್ವೇ ಸೆಟಲ್ಮೆಂಟ್ ಇನ್ನೂ ಬಗೆಹರಿದಿಲ್ಲ. ಚೋರನೂರು, ವಿಠಲಾಪುರ, ಸೋವೆನಹಳ್ಳಿ ಭಾಗದಲ್ಲಿ ಭಾರಿ ವಾಹನಗಳ ಓಡಾಟದಿಂದ ಬ್ರಿಡ್ಜ್, ರಸ್ತೆಗಳು ಹಾಳಾಗಿವೆ. ಸಂಜೆ 7 ಗಂಟೆ ಬಳಿಕ ಸೂಕ್ತ ಬಸ್ ವ್ಯವಸ್ಥೆ ಇಲ್ಲ. ಸ್ವಾತಂತ್ರ್ಯ ಸಿಕ್ಕು ಇಷ್ಟು ವರ್ಷಗಳಾದರೂ ರಾಮಗಡದಂಥ ಹಳ್ಳಿಗಳಿಗೆ ಬಸ್‌ ಹೋಗಿಲ್ಲ. ಜನ ಟಂಟಂಗಳನ್ನೇ ಅವಲಂಭಿಸಿದ್ದಾರೆ. ತೀವ್ರ ಆರೋಗ್ಯ ಸಮಸ್ಯೆ ಎದುರಾದರೆ ಬಳ್ಳಾರಿಯ ವಿಮ್ಸ್ ಕಡೆ ನೋಡಬೇಕಾಗುತ್ತದೆ. ಗಣಿಗಾರಿಕೆ ಕಾರಣದ ಅಪಘಾತಗಳು ಮಿತಿ ಮೀರಿದ್ದರೂ ಕ್ರಮ ಕೈಗೊಂಡಿಲ್ಲ. ನಿತ್ಯ ಓಡಾಡುವ 8 ಸಾವಿರ ಗಣಿ ಲಾರಿಗಳಿಂದಾಗಿ ಇಡೀ ಸಂಡೂರಿನ ಮೇಲೆ ಧೂಳು ಕುಳಿತಿದೆ. ತಾಲೂಕು ಕೇಂದ್ರದಲ್ಲಿ ಇರಬೇಕಿದ್ದ ಡಿವೈಎಸ್ಪಿ ಕಚೇರಿ ಹೋಬಳಿ ಕೇಂದ್ರದಲ್ಲಿದೆ. ಇದನ್ನು ಅಭಿವೃದ್ಧಿ ಎನ್ನಲಾದೀತೆ?
ಶ್ರೀಶೈಲ ಅಲದಹಳ್ಳಿ, ಜನಸಂಗ್ರಾಮ ಪರಿಷತ್, ರಾಜ್ಯ ಉಪಾಧ್ಯಕ್ಷರು
ಆರ್ಸೆಲ್ಲರ್‌ ಮಿತ್ತಲ್‌, ಬ್ರಹ್ಮಿಣಿ ತಲಾ 5 ಸಾವಿರ ಎಕರೆ ಮತ್ತು ಎನ್‌ಎಂಡಿಸಿ 2856 ಎಕರೆ ಭೂಮಿಯನ್ನು ಕುಡುತಿನಿ ಭಾಗದಲ್ಲಿ ಪಡೆದುಕೊಂಡಿವೆ. ಇದರ ಪರಿಹಾರ ನಿಗದಿಯಲ್ಲಿ ಮಾನದಂಡಗಳನ್ನು ಅನುರಿಸಿಲ್ಲ. ಹೀಗಾಗಿ ರೈತರಿಗೆ ₹13 ಸಾವಿರ ಕೋಟಿಯಷ್ಟು ನಷ್ಟವಾಗಿದೆ. ಇದರ ಸೂಕ್ತ ಪರಿಹಾರ ಸಿಗಬೇಕು. ಕಾರ್ಖಾನೆ ಆರಂಭವಾಗದೇ ಇರುವುದರಿಂದ ಸ್ಥಳೀಯರಿಗೆ ಉದ್ಯೋಗ ನಷ್ಟವಾಗಿದೆ. ಇದೆಲ್ಲದರ ಪರಿಹಾರವನ್ನು ಸರ್ಕಾರ ಕೊಡಬೇಕು.
ಯು. ಬಸವರಾಜು, ಪ್ರಾಂತ ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ
ಚುನಾವಣೆಗೆ ಮೊದಲು ನೀಡಿದ ವಾಗ್ದಾನ ಗಳೇನು, ಈಗ ಯಾವುದು ಈಡೇರಿದೆ. ಉಳಿದವನ್ನು ಯಾವಾಗ ಈಡೇರಿಸುತ್ತೀರಿ ಎಂಬುದರ ಕಾಲಮಿತಿಯ ಒಂದು ವರದಿ ಕೊಡಿ. ಆಗ ಮಾತ್ರ ಮುಂದಿನ ಚುನಾವಣೆಯಲ್ಲಿ ಜನ ನಿಮ್ಮನ್ನು ನಂಬಲು ಸಾಧ್ಯ.
ಪನ್ನ ರಾಜ್‌, ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಜಿಲ್ಲಾ ಅಧ್ಯಕ್ಷ
ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್‌ ಅವರಿಗೆ ಬಳ್ಳಾರಿ ಬಗ್ಗೆ ವಿಶೇಷ ಒಲವಿದೆ. ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ನಿರ್ಧಾರಗಳನ್ನು ಸರ್ಕಾರ ಈಗಾಗಲೇ ಕೈಗೊಂಡಿದೆ. ಸಂಡೂರಿನಲ್ಲಿ ನಡೆಯುತ್ತಿರುವುದು ರಾಜಕೀಯ ಕಾರ್ಯಕ್ರಮವಲ್ಲ, ಸಾಧನೆಯ ಕಾರ್ಯಕ್ರಮ
ವೆಂಕಟೇಶ ಹೆಗಡೆ, ಕೆಪಿಸಿಸಿ ವಕ್ತಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.