ಬಳ್ಳಾರಿ: ಜೈಲುಗಳಲ್ಲಿ ಧೂಮಪಾನಕ್ಕೆ ಅವಕಾಶ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಸ್ಪಷ್ಟಪಡಿಸಬೇಕಿದ್ದ ‘ಕರ್ನಾಟಕ ಕಾರಾಗೃಹಗಳು ಮತ್ತು ಸುಧಾರಣಾ ಸೇವೆಗಳ ಕೈಪಿಡಿ - 2021’ ದ್ವಂದ್ವದಿಂದ ಕೂಡಿದೆ. ಇದು ಜೈಲು ಅಧಿಕಾರಿಗಳನ್ನು ಒಂದೆಡೆ ಗೊಂದಲಕ್ಕೆ ದೂಡಿದ್ದರೆ, ಇನ್ನೊಂದೆಡೆ ದಂಧೆಗೆ ಅವಕಾಶ ಮಾಡಿಕೊಟ್ಟಿದೆ.
1978ರ ಕಾರಾಗೃಹಗಳ ಕೈಪಿಡಿಯಲ್ಲಿ ಕೈದಿಗಳು ಧೂಮಪಾನ ಮಾಡಲು ಅನುಮತಿ ಇತ್ತು. ಅದು 2021ರಲ್ಲಿ ಪರಿಷ್ಕರಣೆ ಆಗಿದೆ. ಅದರ ಪ್ರಕಾರ, ಎಲ್ಲಾ ಜೈಲುಗಳಲ್ಲಿ ಧೂಮಪಾನ ನಿಷಿದ್ಧ. ಜೈಲಿನ ಸುತ್ತ ಮತ್ತು ಆವರಣದಲ್ಲಿ ಯಾವುದೇ ಅಧಿಕಾರಿ ಅಥವಾ ಸಿಬ್ಬಂದಿ, ಸಂದರ್ಶಕರು ಧೂಮಪಾನ ಮಾಡಲು ಅನುಮತಿ ಇಲ್ಲ. ತಂಬಾಕು (ಬಿಡಿ, ಸಿಗರೇಟು) ನಿಷೇಧಿತ ವಸ್ತು. ಅದನ್ನು ಜೈಲಿನ ಒಳಗೆ ತರಲು ಅವಕಾಶವಿಲ್ಲ ಎಂದು ಸೂಚಿಸಲಾಗಿದೆ.
ಆದರೆ, ಕೈದಿಗಳ ಅಪರಾಧದ ಬಗ್ಗೆ ವಿವರಿಸುವ ಖಂಡಿಕೆಯಲ್ಲಿ ‘ಗುರುತಿಸಲಾದ ಧೂಮಪಾನ ವಲಯ (ಸ್ಮೋಕಿಂಗ್ ಝೋನ್) ಹೊರತುಪಡಿಸಿ ಬೇರೆ ಯಾವುದೇ ಸ್ಥಳ ಅಥವಾ ಸಮಯದಲ್ಲಿ ಧೂಮಪಾನ ಮಾಡಿದರೆ ಅದು ಅಪರಾಧ ಎಂದು ಉಲ್ಲೇಖಿಸಲಾಗಿದೆ. ಇದು ಜೈಲಿನೊಳಗೆ ಸಿಗರೇಟು ತರಲು, ಧೂಮಪಾನ ಮಾಡಲು ದಾರಿ ಮಾಡಿಕೊಟ್ಟಿದೆ. ಇದನ್ನು ತಡೆಯಬೇಕೇ ಅಥವಾ ಬೇಡವೇ ಎಂಬ ಗೊಂದಲ ಅಧಿಕಾರಿಗಳಲ್ಲಿ ಇದೆ.
ಕಾನೂನು–ಸುವ್ಯವಸ್ಥೆ ಭಯ: ಜೈಲಿನ ಶೇ 80ಕ್ಕೂ ಹೆಚ್ಚಿನ ಕೈದಿಗಳಲ್ಲಿ ಧೂಮಪಾನದ ಚಟವಿದೆ. ಏಕಾಏಕಿ ಧೂಮಪಾನ ನಿಷೇಧಿಸಿದರೆ, ಜೈಲಿನಲ್ಲಿ ದುಷ್ಪರಿಣಾಮ ಬೀರಬಹುದು ಅಥವಾ ಕಾನೂನು– ಸುವ್ಯವಸ್ಥೆಗೆ ಧಕ್ಕೆ ಆಗಬಹುದು ಎಂಬ ಆತಂಕ ಅಧಿಕಾರಿಗಳಲ್ಲಿದೆ.
‘ಜೈಲಿಗೆ ಬರುವವರು ಧೂಮಪಾನ, ಮದ್ಯಪಾನಕ್ಕೆ ದಾಸರಾಗಿರುತ್ತಾರೆ. ಜೈಲಿನಲ್ಲಿ ಅದಕ್ಕಾಗಿ ತಡಕಾಡುತ್ತಾರೆ. ಏಕಾಏಕಿ ತಡೆದರೆ ತಮ್ಮ ಕೂದಲು, ಉಗುರುಗಳನ್ನು ಸುಟ್ಟು ಅದನ್ನೇ ಸೇದುತ್ತಾರೆ. ಹಲ್ಲಿ ಬಾಲ ಕಿತ್ತು ಮೂಸುತ್ತಾರೆ. ಆಸ್ಪತ್ರೆಗೆ ಹೋಗಿ, ಮತ್ತೇರಿಸುವ ಪದಾರ್ಥಗಳನ್ನು ತಂದು ಅದರ ಮೂಲಕ ತಮ್ಮ ಆಸೆ ತಣಿಸಿಕೊಳ್ಳುತ್ತಾರೆ. ಇವೆಲ್ಲವನ್ನೂ ತಡೆದಾಗ ಆತ್ಮಹತ್ಯೆಗೆ ಮುಂದಾಗುತ್ತಾರೆ’ ಎಂದು ಜೈಲಿನ ಅಧಿಕಾರಿಯೊಬ್ಬರು ತಿಳಿಸಿದರು.
ನಡೆಯದ ಶಿಬಿರ: ಕೈದಿಗಳನ್ನು ಧೂಮಪಾನದಿಂದ ವಿಮುಕ್ತಿ ಮಾಡಬೇಕಿದ್ದರೆ, ಜೈಲುಗಳಲ್ಲಿ ಚಟ ಬಿಡಿಸುವ ಶಿಬಿರಗಳನ್ನು ನಡೆಸಬೇಕು. ಆದರೆ, ಇದು ತ್ರಾಸದಾಯಕ ಹಾಗೂ ನಿರಂತರವಾಗಿ ಮಾಡಬೇಕಾದ ಕೆಲಸ. ಅದಕ್ಕಾಗಿ ಬಹುತೇಕ ಕಾರಾಗೃಹಗಳಲ್ಲಿ ಈ ರೀತಿಯ ಶಿಬಿರಗಳು ನಡೆಯುವುದಿಲ್ಲ ಎಂದು ಮೂಲಗಳು ಹೇಳುತ್ತವೆ.
ಇಕ್ಕಟ್ಟಿನಲ್ಲಿ ಸಿಲುಕುವುದೇ ಬೇಡವೆಂದು ಕೆಲ ಅಧಿಕಾರಿಗಳು ಜೈಲು ಆವರಣಕ್ಕೆ ಅಕ್ರಮವಾಗಿ ಸಿಗರೇಟು ತರಿಸಿ ಕೈದಿಗಳಿಗೆ ಹೆಚ್ಚಿನ ಬೆಲೆಗೆ ಮಾರುತ್ತಾರೆ. ₹18ರ ಸಿಗರೇಟು ₹50ಕ್ಕೆ ಮಾರುತ್ತಾರೆ. ಕಾರಾಗೃಹಗಳಲ್ಲಿ ಧೂಮಪಾನ ನಿಷೇಧದಿಂದ ಫಲವಿಲ್ಲ ಎಂದು ಕೆಲ ಅಧಿಕಾರಿಗಳು ಹೇಳಿದರೆ, ಇನ್ನೂ ಕೆಲವರು ನಿಷೇಧಿಸಬೇಕು ಎಂದು ವಾದಿಸುತ್ತಾರೆ.
ಬಹುತೇಕ ಕೈದಿಗಳಲ್ಲಿ ಧೂಮಪಾನದ ಚಟವಿದೆ. ಕಾರಾಗೃಹಗಳಲ್ಲಿ ಅದಕ್ಕೆ ಅವಕಾಶ ಇಲ್ಲ. ಗೊಂದಲವೂ ಇಲ್ಲ. ಚಟ ಬಿಡಿಸಲು ಶಿಬಿರ ನಡೆಸಲಾಗುತ್ತದೆ.–ಟಿ.ಪಿ ಶೇಷ, ಕಾರಾಗೃಹ ಇಲಾಖೆ ಡಿಐಜಿ, ಉತ್ತರ ವಲಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.