ಬಳ್ಳಾರಿ: ಲೋಕಸಭಾ ಚುನಾವಣೆಯ ಫಲಿತಾಂಶ ಜೂನ್ 4ರಂದು ಹೊರಬಿತ್ತು. ಫಲಿತಾಂಶ ಬಂದು ಮೂರೂವರೆ ತಿಂಗಳು ಕಳೆದರೂ ಬಳ್ಳಾರಿ ಲೋಕಸಭಾ ಕ್ಷೇತ್ರದ ಸಂಸದ ಇ. ತುಕಾರಾಂ ಅವರು ಈ ವರೆಗೆ ಜಿಲ್ಲಾ ಕೇಂದ್ರದಲ್ಲಿ ‘ಸಂಸದರ ಕಚೇರಿ’ಯನ್ನೇ ಆರಂಭಿಸಿಲ್ಲ.
ಹೀಗಾಗಿ ಜಿಲ್ಲೆಗೆ ಸಂಬಂಧಿಸಿದ ದೂರು ದುಮ್ಮಾನಗಳನ್ನು ಯಾರ ಬಳಿ ಹೇಳಿಕೊಳ್ಳಬೇಕು ಎಂಬುದೇ ತಿಳಿಯದೇ ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ.
ಜನರ ಅನುಕೂಲಕ್ಕಾಗಿ ಜಿಲ್ಲಾಡಳಿತವೇ ಆಯಾ ಜಿಲ್ಲೆಗಳಲ್ಲಿ ಸಂಸದರ ಕಚೇರಿ ವ್ಯವಸ್ಥೆ ಮಾಡುತ್ತದೆ. ಅದೇ ರೀತಿ ಜಿಲ್ಲೆಯಲ್ಲೂ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲೇ ಸಂಸದರಿಗೆಂದು ಕೊಠಡಿ ಇದೆ. ಅದನ್ನು ಉದ್ಘಾಟಿಸಿಲ್ಲ. ಸಂಸದರ ಕಚೇರಿ ಎದುರು ಹಿಂದಿನ ಸಂಸದರ ಹೆಸರಲ್ಲೇ ನಾಮಫಲಕವೂ ಇದೆ. ಕನಿಷ್ಠ ಅದನ್ನು ಬದಲಾಯಿಸುವ ಗೋಜಿಗೂ ಹೊಸ ಸಂಸದರಾಗಲಿ, ಜಿಲ್ಲಾಡಳಿತವಾಗಲಿ ಹೋಗಿಲ್ಲ.
ಹಿಂದಿನ ಸಂಸದರ ಕಚೇರಿಯನ್ನು ತುಕಾರಾಂ ಬಳಕೆಗೆ ನಿರಾಕರಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಉಪ ವಿಭಾಗಾಧಿಕಾರಿ ಕಚೇರಿ ಬಳಿ ಹೊಸದೊಂದು ಕಚೇರಿಯನ್ನೂ ತೋರಿಸಲಾಗಿದೆ. ಅಲ್ಲಿಯೂ ಕಚೇರಿ ಆರಂಭವಾಗಿಲ್ಲ.
ಕಾಂಗ್ರೆಸ್‌ನ ಇ. ತುಕಾರಾಂ ಅವರು ಸಂಸದರಾಗುವುದಕ್ಕೂ ಮೊದಲು ಬಿಜೆಪಿಯ ದೇವೇಂದ್ರಪ್ಪ ಅವರು ಸಂಸದರಾಗಿದ್ದರು. ಅದಕ್ಕೂ ಹಿಂದೆ ಉಗ್ರಪ್ಪ ಅಲ್ಪಾವಧಿಗೆ ಸಂಸದರಾಗಿದ್ದರು. ಉಗ್ರಪ್ಪ ನಿಯಮಿತವಾಗಿ ಕಚೇರಿಗೆ ಬರುತ್ತಿದ್ದರು. ದೇವೇಂದ್ರಪ್ಪ ಆಗೊಮ್ಮೆ ಈಗೊಮ್ಮೆ ಕಚೇರಿಗೆ ಬರುತ್ತಿದ್ದರು. ಆದರೆ, ಇ. ತುಕಾರಾಂ ಅವರು ಗೆದ್ದು ಮೂರು ತಿಂಗಳಿಗಿಂತಲೂ ಅಧಿಕ ಸಮಯವಾದರೂ ಇನ್ನೂ ಇತ್ತ ಮುಖ ಮಾಡಿಲ್ಲ ಎಂದು ನಾಗರಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಹೊಸ ಸಂಸದರು ಶಿಷ್ಟಾಚಾರದ ಪ್ರಕಾರ ಸರ್ಕಾರಿ ಸಭೆ, ಸಮಾರಂಭಗಳಿಗೆ ಮಾತ್ರವೇ ಬಳ್ಳಾರಿ ನಗರಕ್ಕೆ ಬರುವಂತಾಗಿದೆ. ಆದರೆ, ಆ ಶಿಷ್ಟಾಚಾರದ ಸವಲತ್ತು ಕೊಟ್ಟ, ಅಧಿಕಾರ ಕೊಟ್ಟ ಜನರ ಕಷ್ಟಕ್ಕೆ ಸ್ಪಂದಿಸಲು ಕಚೇರಿಯನ್ನು ಮಾತ್ರ ಆರಂಭಿಸಲು ಮನಸ್ಸು ಮಾಡದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
‘ಜನಪ್ರತಿನಿಧಿಗಳೆನಿಸಿಕೊಂಡವರ ಮನೆ ಮುಂದೆ ನಿತ್ಯ ನೂರಾರು ಜನ ನೆರೆದಿರುತ್ತಾರೆ. ಅಲ್ಲಿನ ಶೇ 90ರಷ್ಟು ಜನ ಅವರ ಹಿಂಬಾಲಕರೇ ಆಗಿರುತ್ತಾರೆ. ಪಕ್ಷದ ಮುಖಂಡರೇ ಅವರ ಸುತ್ತಮುತ್ತ ಸುತ್ತುವರಿದಿರುತ್ತಾರೆ. ಜತೆಗೆ ಜನರನ್ನು ತಡೆಯಲು ಗನ್‌ಮ್ಯಾನುಗಳಿರುತ್ತಾರೆ. ಈಗಂತೂ ಪಂಜಾಬಿ ಬೌನ್ಸರ್‌ಗಳು ಜನಪ್ರತಿನಿಧಿಗಳ ಸುತ್ತಮುತ್ತ ನಿಂತಿರುತ್ತಾರೆ. ಇಂಥ ಸನ್ನಿವೇಶ ಇರುವ ಕಡೆ ಹೇಗೆ ನಮ್ಮ ಅಹವಾಲು ಸಲ್ಲಿಸಲು ಸಾಧ್ಯ?’ ಎನ್ನುತ್ತಾರೆ ಸಾರ್ವಜನಿಕರು.
‘ಇತ್ತೀಚೆಗಂತೂ ಜನಪ್ರತಿನಿಧಿಗಳ ಬಳಿ ಹೋಗಿ ಗೋಳು ಹೇಳಿಕೊಳ್ಳುವುದಕ್ಕೆ ಅವಕಾಶ ಇಲ್ಲ ಎಂಬಂತಾಗಿದೆ. ಸಂಸದರು ನಮ್ಮ ತಾಲ್ಲೂಕಿಗೆ ಬಂದು ಮಳೆ, ಬೆಳೆ, ಬರದ ಬಗ್ಗೆ ಕೇಳುವುದೇ ಇಲ್ಲ. ದೂರವಾಣಿ ಕರೆ ಮಾಡಿದರೆ ನಿರ್ದಾಕ್ಷಿಣ್ಯವಾಗಿ ಕಡಿತಗೊಳಿಸುತ್ತಾರೆ. ಮನೆ ಬಳಿಯಂತೂ ದಿನಗಟ್ಟಲೇ ನಿಂತರೂ ಭೇಟಿಗೆ ಅವಕಾಶವಾಗುವುದಿಲ್ಲ‘ ಎನ್ನುತ್ತಾರೆ ಮೋಕಾ ಗ್ರಾಮದ ರೈತ ಹುಲುಗಣ್ಣ.
‘ನಮ್ಮ ತಂದೆಯವರನ್ನು (ಇ. ತುಕಾರಾಂ) ಯಾವುದೇ ಸಮಯದಲ್ಲಿ, ಯಾರೇ ಬಂದು ಭೇಟಿ ಮಾಡಿ, ಅಹವಾಲು ಸಲ್ಲಿಸಬಹುದು. ಬಹುತೇಕರು ಮನೆಗೇ ಬಂದು ಅವರನ್ನು ಕಂಡು ಅಹವಾಲು ನೀಡುತ್ತಿದ್ದಾರೆ. ಹೀಗಾಗಿ ಕಚೇರಿಯ ಅಗತ್ಯತೆ ತೀರ ಅನಿವಾರ್ಯವೆಂದು ಅನಿಸಿಲ್ಲ. ಕೆಲ ಕ್ಷೇತ್ರಗಳ ಜನರಿಗೆ ಸ್ವಲ್ಪ ಸಮಸ್ಯೆಯಾಗುತ್ತಿರುವುದು ನಿಜ. ಆದರೆ, ನಾವು ಕಾರ್ಯಕ್ರಮಗಳ ಮೂಲಕ ಅವರನ್ನು ತಲುಪುವ ಕೆಲಸ ಮಾಡುತ್ತಿದ್ದೇವೆ. ಎಲ್ಲ ತಾಲೂಕಿಗೂ ಒಂದೊಂದು ಕಾರ್ಯಕ್ರಮ ಕೊಟ್ಟು ನಮ್ಮನ್ನು ನಾವು ಸಾಬೀತು ಮಾಡಿಕೊಳ್ಳುತ್ತಿದ್ದೇವೆ’ ಎನ್ನುತ್ತಾರೆ ಸಂಸದ ತುಕಾರಾಂ ಅವರ ಪುತ್ರ ರಘು.
ಕಚೇರಿಯಲ್ಲ... ಮನೆ ಮಾಡ್ತೀವಿ
ಬಳ್ಳಾರಿಯಲ್ಲಿ ಕಚೇರಿಯಲ್ಲ... ಒಂದು ಮನೆಯನ್ನೇ ಮಾಡಲು ಬಯಸಿದ್ದೇವೆ. ಜನರು, ಕಾರ್ಯಕರ್ತರನ್ನು ಭೇಟಿಯಾಗಲು ಅನುಕೂಲಕರವಾದ ಮನೆ ಬಳ್ಳಾರಿಯಲ್ಲಿ ಇನ್ನೂ ಸಿಕ್ಕಿಲ್ಲ. ಅದಕ್ಕಾಗಿ ಹುಡುಕಾಟ ನಡೆಯುತ್ತಿದೆ. ಸಂಡೂರು, ವಿಜಯನಗರ, ಕಂಪ್ಲಿ ಭಾಗದ ಜನ ಸಂಡೂರಿನ ನಮ್ಮ ಮನೆಗೇ ಬಂದು ಸಂಸದರನ್ನು ಭೇಟಿಯಾಗುತ್ತಾರೆ. ಬಳ್ಳಾರಿ ಗ್ರಾಮೀಣ, ನಗರದ ಜನರಿಗೆ ಸ್ವಲ್ಪ ಸಮಸ್ಯೆಯಾಗುತ್ತಿದೆ. ಅದಕ್ಕಾಗಿಯೇ ನಾವು ಮನೆಯನ್ನೂ ಮಾಡುವ ಉದ್ದೇಶ ಹೊಂದಿದ್ದೇವೆ ಎಂದು ಸಂಸದ ಇ. ತುಕಾರಾಂ ಅವರ ಪುತ್ರ ರಘು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಪ್ರಶ್ನೆ ಮೂಡಿಸಿದ ಸಂಸದರ ನಡೆ
ಕಚೇರಿ ಆರಂಭಿಸದೇ ಇರುವ ಬಗ್ಗೆ, ಜನರ ಸಮಸ್ಯೆಗಳ ಬಗ್ಗೆ ಸಂಸದರಿಂದ ಖುದ್ದು ಪ್ರತಿಕ್ರಿಯೆ ಪಡೆಯುವ ‘ಪ್ರಜಾವಾಣಿ’ ಪ್ರತಿನಿಧಿ ಪ್ರಯತ್ನಗಳು ಯಶಸ್ವಿಯೇ ಆಗಲಿಲ್ಲ. ಹಲವು ಕರೆಗಳನ್ನು ಮಾಡಿದರೂ ಅವರು ಒಂದು ಬಾರಿಯೂ ಸ್ವೀಕರಿಸಲಿಲ್ಲ.
ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ಸಾರ್ವಜನಿಕರಿಗೆ ಸಂಸದರು ಸಿಗುತ್ತಿಲ್ಲ. ತುಕಾರಾಂ ಅವರು ಗೆದ್ದು ಮೂರು ತಿಂಗಳಿಗೂ ಹೆಚ್ಚು ಸಮಯವಾಗಿದೆ. ಗೆದ್ದಾಗ ಅವರ ಮೇಲೆ ಅಪಾರವಾದ ನಿರೀಕ್ಷೆಗಳಿದ್ದವು. ಅವುಗಳನ್ನು ಈಡೇರಿಸಬೇಕಿದ್ದರೆ ಸಂಸದರು ಮೊದಲು ಕಚೇರಿ ಆರಂಭಿಸಬೇಕು.–ರೆಕ್ಕಲ ವೆಂಕಟರೆಡ್ಡಿ, ಸಾಮಾಜಿಕ ಕಾರ್ಯಕರ್ತ, ಬಳ್ಳಾರಿ
ಅಹವಾಲುಗಳನ್ನು ಕೊಡಬೇಕಿದ್ದರೆ ಎಲ್ಲಿಗೆ ಹೋಗಬೇಕು? ನಗರದಲ್ಲಿ ಸಮಸ್ಯೆಗಳಿವೆ. ಆಸ್ಪತ್ರೆಗಳಲ್ಲಿ ಶುಚಿತ್ವ ಇಲ್ಲ. ಗಡಿ ಪ್ರದೇಶದಲ್ಲಿ ಅಭಿವೃದ್ಧಿ ಆಗಿಲ್ಲ. ಅಭಿವೃದ್ಧಿ ಕಾರ್ಯಗಳು ಕುಂಟುತ್ತಿವೆ. ಇದೆಲ್ಲದರ ಪರಿಹಾರಕ್ಕಾಗಿ ಜನ ಸಂಪರ್ಕ ಕಚೇರಿಯನ್ನು ಸಂಸದರು ತೆಗೆಯಲೇಬೇಕಾಗುತ್ತದೆ.–ವಿರೂಪಾಕ್ಷ,ರಾಣಿತೋಟ, ಬಳ್ಳಾರಿ
ಸಂಸದರು ಇರುವುದು ಜನಸೇವೆ ಮಾಡಲು. ತುಕಾರಾಂ ಅವರಿಗೆ ಜನಪರ ಕಾಳಹಿ ಇದ್ದಿದ್ದರೆ ಕೂಡಲೇ ಕಚೇರಿ ತೆರೆಯಬೇಕಿತ್ತು. ಸಭೆ ಸರಂಭಗಳಲ್ಲಿ ಅಧಿಕಾರಿಗಳನ್ನು ತರಾಟೆ ತಗೆದುಕೊಳ್ಳುವುದಲ್ಲ. ಮೊದಲು ತಾವು ಸರಿಯಾಗಿರಬೇಕು. ಸಂಡೂರು ಮಾಡಲ್ ಎನ್ನುತ್ತಾರೆ. ಸಂಡೂರಲ್ಲಿ ಬಸ್ ನಿಲ್ದಾಣವೇ ಸರಿ, ಆಸ್ಪತ್ರೆಗಳೇ ನಾರುತ್ತಿವೆ.–ಶ್ರೀಶೈಲ ಆಲದಹಳ್ಳಿ, ಸಂಡೂರು
ಹಳೇ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹೊಸದೊಂದು ಕಚೇರಿಯನ್ನು ತುಕಾರಾಂ ಅವರಿಗೆ ನೀಡಲಾಗಿದೆ. ಅದರ ಶುದ್ಧೀಕರಣ ಕಾರ್ಯ ನಡೆಯುತ್ತಿದೆ. ಬಹುತೇಕ ದಸರಾ ಹಬ್ಬದ ಹೊತ್ತಿಗೆ ಸಂಸದರು ಜಿಲ್ಲಾ ಕೇಂದ್ರ ಬಳ್ಳಾರಿ ನಗರದಲ್ಲಿ ಹೊಸ ಕಚೇರಿಯನ್ನು ತೆರೆಯಲಿದ್ದಾರೆ.–ಅಲ್ಲಂ ಪ್ರಶಾಂತ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.