ಬಳ್ಳಾರಿ: ಬಳ್ಳಾರಿ ಪಾಲಿಕೆಯ 23ನೇ ಮೇಯರ್ ಮತ್ತು ಉಪ ಮೇಯರ್ ಚುನಾವಣೆ ಇದೇ 28ಕ್ಕೆ ನಿಗದಿಯಾಗಿದೆ.
ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರೆ, ಉಪ ಮೇಯರ್ ಸ್ಥಾನ ಬಿಸಿಎ ಮಹಿಳೆಗೆ ಮೀಸಲಾಗಿದೆ.
ಕಲಬುರಗಿ ವಿಭಾದ ಪ್ರಾದೇಶಿಕ ಆಯುಕ್ತರ ಅಧ್ಯಕ್ಷೆತೆಯಲ್ಲಿ 28ರಂದು ಚುನಾವಣೆ ನಡೆಯಲಿದೆ. ಆ ದಿನ ಬೆಳಗ್ಗೆ 10.30ರ ಒಳಗಾಗಿ ನಾಮಪತ್ರ ಸಲ್ಲಿಸಲು ಅವಕಾಶವಿರಲಿದೆ. ನಾಮಪತ್ರ ಪರಿಶೀಲನೆ, ಹಿಂತೆಗೆತ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮಧ್ಯಾಹ್ನ 12.30ಕ್ಕೆ ಚುನಾವಣೆ ನಡೆಯಲಿದೆ.
ಇದರ ನಂತರ ಉಪ ಮೇಯರ್ ಹಾಗೂ ಸ್ಥಾಯಿ ಸಮಿತಿ ಸದಸ್ಯ ಸ್ಥಾನಗಳಿಗೂ ಚುನಾವಣೆ ನಡೆಯಲಿದೆ.
ಸದ್ಯ 39 ಸದಸ್ಯಬಲದ ಪಾಲಿಕೆಯಲ್ಲಿ ಕಾಂಗ್ರೆಸ್ 21 , ಬಿಜೆಪಿ 13 ಸದಸ್ಯರನ್ನು ಹೊಂದಿದೆ. ಪಕ್ಷೇತರರಾಗಿ ಆಯ್ಕೆಯಾಗಿದ್ದ 5 ಸದಸ್ಯರೂ ಕಾಂಗ್ರೆಸ್ ಸೇರಿದ್ದು, ಅದರ ಬಲ 26ಕ್ಕೆ ಏರಿದೆ.
ಇದರ ಜತೆಗೆ ಪಾಲಿಕೆ ವ್ಯಾಪ್ತಿಯ ವಿಧಾನಸಭಾ ಸದಸ್ಯರಾದ ಭರತ್ ರೆಡ್ಡಿ, ಸಚಿವ ಬಿ. ನಾಗೇಂದ್ರ, ಲೋಕಸಭಾ ಸದಸ್ಯ ದೇವೇಂದ್ರಪ್ಪ, ರಾಜ್ಯಸಭಾ ಸದಸ್ಯ ಸೈಯದ್ ನಾಸಿರ್ ಹುಸೇನ್, ಪರಿಷತ್ ಬಿಜೆಪಿ ಸದಸ್ಯ ವೈ. ಎಂ ಸತೀಶ್ ಮೇಯರ್ ಚುನಾವಣೆಯಲ್ಲಿ ಮತಚಲಾಯಿಸಲಿದ್ದಾರೆ.
ಮೂವರು ಆಕಾಂಕ್ಷಿಗಳು: ಸದ್ಯ ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ನಂದೀಶ್, ಗಾದೆಪ್ಪ, ಪ್ರಬಂಜನ್ ಅವರ ಹೆಸರುಗಳು ಪ್ರಬಲವಾಗಿ ಕೇಳಿ ಬರುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.