ADVERTISEMENT

25,000 ರಾಸುಗಳಿಗೆ ವಿಮೆ ಗುರಿ: ರಾಬಕೊವಿಯಿಂದ ₹2.37 ಕೋಟಿ ಮೀಸಲು

ಆರ್. ಹರಿಶಂಕರ್
Published 14 ಜೂನ್ 2024, 5:52 IST
Last Updated 14 ಜೂನ್ 2024, 5:52 IST
ಪೀರ್ಯ ನಾಯಕ್‌, ವ್ಯವಸ್ಥಾಪಕ ನಿರ್ದೇಶಕ, ರಾಬಕೊವಿ  
ಪೀರ್ಯ ನಾಯಕ್‌, ವ್ಯವಸ್ಥಾಪಕ ನಿರ್ದೇಶಕ, ರಾಬಕೊವಿ     

ಬಳ್ಳಾರಿ: ರಾಯಚೂರು, ಬಳ್ಳಾರಿ ಕೊಪ್ಪಳ, ವಿಜಯನಗರ ಹಾಲು ಒಕ್ಕೂಟವು (ರಾಬಕೊವಿ) ಈ ವರ್ಷ 25 ಸಾವಿರ ರಾಸುಗಳಿಗೆ ವಿಮೆ ಮಾಡಿಸುವ ಗುರಿ ಹಾಕಿಕೊಂಡಿದೆ. ಇದಕ್ಕಾಗಿ ₹2.37 ಕೋಟಿಯನ್ನು ಒಕ್ಕೂಟ ಮೀಸಲಿಟ್ಟಿದೆ. ಒಕ್ಕೂಟ ಕಳೆದ ವರ್ಷವೂ ಇಷ್ಟೇ ಪ್ರಮಾಣದ ವಿಮೆ ಗುರಿಯನ್ನು ಹಾಕಿಕೊಂಡಿತ್ತು.  

ಒಕ್ಕೂಟದ ವ್ಯಾಪ್ತಿಗೆ ಒಳಪಡುವ ನಾಲ್ಕು ಜಿಲ್ಲೆಗಳ ಪೈಕಿ ವಿಜಯನಗರ ಜಿಲ್ಲೆಯಲ್ಲಿ ಹೆಚ್ಚಿನ ಹಾಲಿನ ಸಂಘಗಳಿವೆ. ಹೀಗಾಗಿ ಈ ಜಿಲ್ಲೆಯಲ್ಲಿ 11,400 ಸಾವಿರ ರಾಸುಗಳಿಗೆ ವಿಮೆ ಮಾಡಿಸುವ ಗುರಿ ಇದೆ. ಕೊಪ್ಪಳದಲ್ಲಿ 8,000 ರಾಸುಗಳಿಗೆ, ರಾಯಚೂರಿನಲ್ಲಿ 3,750 ಮತ್ತು ಬಳ್ಳಾರಿಯಲ್ಲಿ 1,900 ರಾಸುಗಳಿಗೆ ವಿಮೆ ಮಾಡಿಸುವ ಗುರಿ ಹೊಂದಲಾಗಿದೆ.  

2023–24ನೇ ಸಾಲಿನಲ್ಲಿ ಒಕ್ಕೂಟದ ವ್ಯಾಪ್ತಿಯ ವಿಜಯನಗರದಲ್ಲಿ 8,000, ಕೊಪ್ಪಳದಲ್ಲಿ 3,250, ರಾಯಚೂರಿನಲ್ಲಿ 1,005, ಬಳ್ಳಾರಿಯಲ್ಲಿ 330 ಸೇರಿ ಒಟ್ಟು 12,549 ರಾಸುಗಳಿಗೆ ವಿಮೆ ಮಾಡಿಸಲಾಗಿತ್ತು. 60:40 ಅನುಪಾತದಲ್ಲಿ ವಿಮೆ ಪ್ರೀಮಿಯಮ್‌ ಪಾವತಿ ಮಾಡಲಾಗಿತ್ತು. ಅದರಂತೆ ಒಕ್ಕೂಟ ₹1.03 ಕೋಟಿ ಕೊಟ್ಟಿದ್ದರೆ, ಒಟ್ಟಾರೆ ರೈತರು ₹8 ಲಕ್ಷ ಪಾವತಿ ಮಾಡಿದ್ದರು. 

ADVERTISEMENT

ಈ ಬಾರಿ ವಿಮೆ ಪ್ರೀಮಿಯಂ ಮೊತ್ತವನ್ನು ಶೇ 4.72ಕ್ಕೆ ನಿಗದಿ ಮಾಡಲಾಗಿದೆ. ಅಂದರೆ 60 ಸಾವಿರದ ಒಂದು ಹಸು/ಎಮ್ಮೆಗೆ ರೈತರು ₹2,832 ಪ್ರೀಮಿಯಂ ಆಗಲಿದೆ ಎಂದು ಒಕ್ಕೂಟ ತಿಳಿಸಿದೆ. 

ಕಳೆದ ವರ್ಷ ಹೆಚ್ಚಿದ್ದ ರಾಸುಗಳ ಸಾವು: ರಾಜ್ಯದಲ್ಲಿ ಕಳೆದ ವರ್ಷ ರಾಸುಗಳನ್ನು ಚರ್ಮಗಂಟು ರೋಗ ತೀವ್ರವಾಗಿ ಬಾಧಿಸಿತು. ರೋಗದಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಧಿಕ ಪ್ರಮಾಣದಲ್ಲಿ ರಾಸುಗಳು ಮೃತಪಟ್ಟಿದ್ದವು. ಕೃಷಿ ಜತೆಗೆ ಹೈನುಗಾರಿಕೆಯನ್ನು ಉಪಕಸುಬಾಗಿಸಿಕೊಂಡಿರುವ ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯನಗರದಲ್ಲಿ ಜನ ಈ ಚರ್ಮಗಂಟು ರೋಗದಿಂದ ತತ್ತರಿಸಿದರು. ರಾಸುಗಳ ಸಾವಿನ ಪ್ರಮಾಣ ಸಹ ಹೆಚ್ಚಿತ್ತು. ಕಳೆದ ವರ್ಷಕ್ಕೆ ಹೋಲಿಸಿದೆ ಈ ಬಾರಿ ರೋಗ ರಾಸುಗಳನ್ನು ಕಾಡುತ್ತಿಲ್ಲ. ಆದ್ದರಿಂದ ‌ರಾಸುಗಳ ಮರಣ ಪ್ರಮಾಣ ಕಡಿಮೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ   

ಹಣ ಮೀಸಲು: ರಾಸುಗಳು ಅನಾರೋಗ್ಯದಿಂದ ಅಥವಾ ಇತ್ಯಾದಿ ಕಾರಣದಿಂದ ಮೃತಪಟ್ಟರೆ ರೈತರು ತೀವ್ರ ನಷ್ಟ ಅನುಭವಿಸುತ್ತಾರೆ. ರೈತರು ನಷ್ಟಕ್ಕೆ ಒಳಗಾಗಬಾರದು ಎಂದು ರಾಬಕೊವಿ ರಾಸುಗಳಿಗೆ  ವಿಮೆ  ಮಾಡಿಸುತ್ತಿದೆ. ಪ್ರತಿ ವರ್ಷ ವಿಮೆಗಾಗಿಯೇ ಇಂತಿಷ್ಟು ಹಣವನ್ನು ಒಕ್ಕೂಟ ಮೀಸಲಿಡುತ್ತಿದೆ. ಕಳೆದ ವರ್ಷ ವಿಮೆಗಾಗಿಯೇ ₹ 2.37 ಕೋಟಿ ಮೀಸಲಿಡಲಾಗಿತ್ತು. ₹ 1.03 ಕೋಟಿಯನ್ನು ಒಕ್ಕೂಟ ನೀಡಿದ್ದರೆ, ಉಳಿದ ₹ 80 ಲಕ್ಷವನ್ನು ರೈತರು ಭರಿಸಿದ್ದರು.

ಹಾಲು ಕೊಡುವ ರಾಸುಗಳ ಸಾವಿನಿಂದ ರೈತರ ಆರ್ಥಿಕ ಮೂಲಗಳಿಗೆ ಪೆಟ್ಟು ಬೀಳುತ್ತದೆ. ಈ ಹೊರೆಯನ್ನು ತಪ್ಪಿಸುವ ಉದ್ದೇಶದಿಂದ ಕೋಚಿಮುಲ್ ರಾಸುಗಳಿಗೆ ವಿಮೆ ಮಾಡಿಸಲು ಕ್ರಮವಹಿಸುತ್ತಿದೆ. ಇದರಿಂದ ಹೈನುಗಾರರಿಗೆ ಅನುಕೂಲವಾಗಲಿದೆ ಎಂದು ರಾಬಕೊವಿ ಶೇಖರಣೆ ಮತ್ತು ತಾಂತ್ರಿಕ ವಿಭಾಗದ ವ್ಯವಸ್ಥಾಪಕ ಡಾ. ಮಹೇಶ್‌ ಲಕ್ಕಣ್ಣವರ್ ಅಭಿಪ್ರಾಯಪಟ್ಟಿದ್ದಾರೆ.

ಪೀರ್ಯ ನಾಯಕ್‌

803 ರಾಸುಗಳ ಸಾವು 2022–23ನೇ ಸಾಲಿನಲ್ಲಿ ಒಕ್ಕೂಟ ವ್ಯಾಪ್ತಿಯ 4 ಜಿಲ್ಲೆಗಳಲ್ಲಿ 803 ರಾಸುಗಳು ಮೃತಪಟ್ಟಿದ್ದವು. ಈ ಪೈಕಿ 635 ರಾಸುಗಳ ಮಾಲೀಕರಿಗೆ  ವಿಮೆ ಪರಿಹಾರವಾಗಿ ಒಟ್ಟು ₹3.49 ಕೋಟಿ ಬಂದಿದೆ. ಇನ್ನು 168 ರಾಸುಗಳ ಮಾಲೀಕರಿಗೆ ಹಣ ಬಿಡುಗಡೆಯಾಗಬೇಕು. ರಾಸುಗಳು ಮೃತಪಟ್ಟ ನಂತರ ವಿಮೆ ಬರಲು  3 ತಿಂಗಳು ಬೇಕು. ಹಿಗಾಗಿಯೇ ವಿಳಂಬವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನೆರವಾಗುವ ವಿಮೆ ರಾಸುಗಳು ಹಠಾತ್‌ ಸಾವಿಗೀಡಾದರೆ ಹೈನುಗಾರರಿಗೆ ನಷ್ಟವಾಗುತ್ತದೆ. ಪ್ರಸ್ತುತ ಹಸು/ ಎಮ್ಮೆ ಬೆಲೆ ಸರಾಸರಿ 50 ರಿಂದ 1 ಲಕ್ಷವಿದೆ. ಇಷ್ಟು ನಷ್ಟವನ್ನು ಹೈನುಗಾರರು ತಡೆಯಲಾರರು. ಇದರಿಂದ ಪಾರಾಗಲು ವಿಮೆ ಮಾಡಿಸಿಕೊಳ್ಳಬೇಕು. ಇನ್ನೊಂದು ಹಸು ತೊಗೆದುಕೊಳ್ಳಲು ಆರ್ಥಿಕವಾಗಿ ಅವರಿಗೆ ಶಕ್ತಿ ತುಂಬ ವಿಮೆ ಸಹಕಾರಿ. ರೈತರು ಆರ್ಥಿಕವಾಗಿ ಕುಸಿಯಬಾರದು ಎಂಬುದು ಒಕ್ಕೂಟದ ಉದ್ದೇಶ.

–ಜಿ. ಪೀರ್ಯ ನಾಯಕ್‌ ವ್ಯವಸ್ಥಾಪಕ ನಿರ್ದೇಶಕರು ರಾಬಕೊವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.