ADVERTISEMENT

ಬಳ್ಳಾರಿ | ನನ್ನ ಸಮುದಾಯದ ಹಣ ತಿಂದಿಲ್ಲ: ಕಣ್ಣೀರಿಟ್ಟ ನಾಗೇಂದ್ರ 

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 0:58 IST
Last Updated 18 ಅಕ್ಟೋಬರ್ 2024, 0:58 IST
ಬಳ್ಳಾರಿಯಲ್ಲಿ ಕಣ್ಣೀರು ಹಾಕುತ್ತ ಭಾಷಣ ಮಾಡಿದ ಶಾಸಕ ಬಿ.ನಾಗೇಂದ್ರ ಅವರನ್ನು ಶಾಸಕ ಭರತ್‌ ರೆಡ್ಡಿ, ಸೋದರ ವೆಂಕಟೇಶ್‌ ಪ್ರಸಾದ್‌ ಮತ್ತಿತರರು ಸಂತೈಸಿದರು
ಬಳ್ಳಾರಿಯಲ್ಲಿ ಕಣ್ಣೀರು ಹಾಕುತ್ತ ಭಾಷಣ ಮಾಡಿದ ಶಾಸಕ ಬಿ.ನಾಗೇಂದ್ರ ಅವರನ್ನು ಶಾಸಕ ಭರತ್‌ ರೆಡ್ಡಿ, ಸೋದರ ವೆಂಕಟೇಶ್‌ ಪ್ರಸಾದ್‌ ಮತ್ತಿತರರು ಸಂತೈಸಿದರು   

ಬಳ್ಳಾರಿ: ‘ನನ್ನ ಸಮಾಜದ (ವಾಲ್ಮೀಕಿ ಸಮುದಾಯ) ಹಣ ತಿನ್ನುವ ನೀಚ ಕೆಲಸ ಮಾಡದಿದ್ದರೂ ನನ್ನ ಮೇಲೆ ಆರೋಪ ಹೊರಿಸಿದ್ದಾರೆ. ನನ್ನನ್ನು ಜೈಲಿಗಟ್ಟಿದವರನ್ನು ಬಳ್ಳಾರಿ ಜಿಲ್ಲೆಯಿಂದ ಆಚೆಗಟ್ಟುವೆ’ ಎಂದು ಶಾಸಕ ಬಿ. ನಾಗೇಂದ್ರ ಹೇಳಿದರು. 

ಜಿಲ್ಲಾಡಳಿತ ಗುರುವಾರ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅಳುತ್ತ ಮಾತನಾಡಿದ ಅವರು,‘ವಾಲ್ಮೀಕಿಯೇ ಜಾಮೀನು ಕೊಟ್ಟು ಇಂಥ ದಿನ ಬಳ್ಳಾರಿ ಜಿಲ್ಲೆಗೆ ಕಳುಹಿಸಿದ್ದಾನೆ. ವಾಲ್ಮೀಕಿ ನಿಗಮದ ಹಣ ತಿಂದ ಆರೋಪ ವ್ಯಕ್ತವಾದಾಗ, ರಾಜಕೀಯ ತೊರೆಯಲು ಮತ್ತು ಜಿಲ್ಲೆಗೂ ಬಾರದಿರಲು ನಿರ್ಧರಿಸಿದ್ದೆ. ಆದರೆ, ನನ್ನನ್ನು ನಾನು ಸಾಬೀತುಪಡಿಸಿಕೊಳ್ಳಲು ಇಲ್ಲಿಗೆ ಬಂದಿರುವೆ’ ಎಂದರು. 

‘ಬೇರೇನೆ ಆರೋಪಗಳಿದ್ದರೂ ಧೈರ್ಯವಾಗಿರುತ್ತಿದ್ದೆ. ನನ್ನ ಸಮಾಜದ ಹಣ ತಿಂದೆ ಎಂದು ಆರೋಪಿಸಿದ್ದು ತುಂಬಾ ನೋವುಂಟು ಮಾಡಿದೆ. ನಿಗಮದಲ್ಲಿ ಏನಾಗಿದೆ ಎಂಬುದು ನನಗೆ ಗೊತ್ತು. ಬಿಜೆಪಿಯವರಿಗೂ ಪರಪ್ಪನ ಅಗ್ರಹಾರಕ್ಕೆ ಹೋಗುವ ಕಾಲ ಬರುತ್ತದೆ. ಜೈಲಿನ ಗೋಡೆ ಮೇಲೆ ಬಿಜೆಪಿಯವರ ಹೆಸರು ಬರೆದಿಟ್ಟು ಬಂದಿದ್ದೇನೆ. ಅವರೆಲ್ಲರೂ ಜೈಲಿಗೆ ಹೋಗುತ್ತಾರೆ’ ಎಂದರು. 

ADVERTISEMENT

‘ಹಗರಣ ನಡೆದ ಮೂರು ತಿಂಗಳಲ್ಲಿ ಹಣ ಸಂಪೂರ್ಣ ವಾಪಸ್‌ ಬಂದಿದೆ.  ಮುಖ್ಯಮಂತ್ರಿ ವಿರುದ್ಧವೂ ಷಡ್ಯಂತ್ರ ನಡೆದಿದೆ. ಹಿಂದುಳಿದ ವರ್ಗದವರು ಎಂಬ ಕಾರಣಕ್ಕೆ ಕಾಟ ಕೊಡುತ್ತಾರೆ. ಬಿಜೆಪಿ ಕ್ಷುಲ್ಲಕ ರಾಜಕೀಯ ಮಾಡುತ್ತಿದೆ’ ಎಂದರು.

‘ಮತ್ತೆ ಸಚಿವ ಸ್ಥಾನ ಕೊಡುವುದು ಪಕ್ಷ ಮತ್ತು ನಾಯಕರಿಗೆ ಬಿಟ್ಟ ನಿರ್ಧಾರ’ ಎಂದರು. 

ಜಿಲ್ಲಾಡಳಿತ ಭವನದ ಆವರಣಕ್ಕೆ ನುಗ್ಗಲು ಯತ್ನ: ವಶ

ಚಾಮರಾಜನಗರ: ಜಿಲ್ಲಾಡಳಿತ ಭವನದ ಆವರಣದಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲೆತ್ನಿಸಿದ ನಾಯಕ ಸಮಾಜದ ಹಲವು ಮುಖಂಡರನ್ನು ಪೊಲೀಸರು ಗುರುವಾರ ವಶಕ್ಕೆ ಪಡೆದುಕೊಂಡರು.

ಜಿಲ್ಲಾಡಳಿತ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿಯನ್ನು ಬಹಿಷ್ಕರಿಸಿ, ಪ್ರತ್ಯೇಕವಾಗಿ ಜಯಂತಿ ಆಚರಿಸಿದ ಮುಖಂಡರು ಜಿಲ್ಲಾಡಳಿತ ಭವನದ ಆವರಣದೊಳಗೆ ನುಗ್ಗಲು ಯತ್ನಿಸಿದಾಗ ಪೊಲೀಸರು ತಡೆದು ಲಾಠಿ ಬೀಸಿ ಉದ್ರಿಕ್ತರ ಗುಂಪನ್ನು ಚದುರಿಸಿದರು.

ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಕಾರರ ಮಧ್ಯೆ ತಳ್ಳಾಟ ನಡೆದು ಗೊಂದಲದ ಸನ್ನಿವೇಶ ನಿರ್ಮಾಣವಾಯಿತು. ಪ್ರತಿಭಟನಕಾರರನ್ನು ವಶಕ್ಕೆ ಪಡೆದ ಪೊಲೀಸರು ಬಸ್‌ ಹಾಗೂ ಡಿಎಆರ್ ವಾಹನಗಳಲ್ಲಿ ಠಾಣೆಗೆ ಕರೆದೊಯ್ದರು.

ಇದೇ ವೇಳೆ ಸಭೆ ನಡೆಸಿದ ಸಮಾಜದ ಮುಖಂಡರು, ಎರಡು ತಿಂಗಳೊಳಗೆ ಸರ್ಕಾರ ವಾಲ್ಮೀಕಿ ಪುತ್ಥಳಿ ನಿರ್ಮಿಸದಿದ್ದರೆ ಹೋರಾಟ ತೀವ್ರಗೊಳಿಸುವ ಒಮ್ಮತದ ನಿರ್ಣಯ ಕೈಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.