ADVERTISEMENT

ಜೋಳದ ಕಣಜವಾದ ಭತ್ತದ ನಾಡು 'ಸಿರುಗುಪ್ಪ'

ಬರದಲ್ಲೂ ಸಂತಸಗೊಂಡ ರೈತರು: ಭತ್ತದ ನಾಡಲ್ಲಿ ಈಗ ಜೋಳದ ಘಮಲು

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2023, 5:46 IST
Last Updated 28 ಡಿಸೆಂಬರ್ 2023, 5:46 IST
ತೆಕ್ಕಲಕೋಟೆ ರೈತ ನರಸಿಂಹ ಸಾಗುವಳಿ ಜಮೀನಿನಲ್ಲಿ ನಳನಳಿಸುತ್ತಿರುವ ಬಿಳಿ ಜೋಳ
ತೆಕ್ಕಲಕೋಟೆ ರೈತ ನರಸಿಂಹ ಸಾಗುವಳಿ ಜಮೀನಿನಲ್ಲಿ ನಳನಳಿಸುತ್ತಿರುವ ಬಿಳಿ ಜೋಳ   

ತೆಕ್ಕಲಕೋಟೆ: ಭತ್ತದ ನಾಡು ಸಿರುಗುಪ್ಪ ತಾಲ್ಲೂಕಿಗೆ ಈ ಬಾರಿ ಮುಂಗಾರು ಕೈಕೊಟ್ಟು ಬರ ಬಂದ ಹಿನ್ನೆಲೆಯಲ್ಲಿ ಅನಿವಾರ್ಯ ಎಂದು ಬೆಳೆದಿರುವ ಜೋಳ ರೈತರ ಹೊಲಗಳು ನಳನಳಿಸುತ್ತಿದ್ದು, ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದಾರೆ.

ತಾಲ್ಲೂಕಿನ ಕೆಲ ಹೋಬಳಿಗಳಲ್ಲಿ ಜೋಳದ ಸುಗ್ಗಿ ಆರಂಭವಾಗಿದೆ. ಮಳೆ ಕೊರತೆಯಿಂದಾಗಿ ಮೊದಲು ನಾಟಿ ಮಾಡಿದ್ದ ಭತ್ತ, ಮೆಣಸಿನ ಕಾಯಿ ಬೆಳೆ ನಾಶ ಮಾಡಿ ನಂತರ ಜೋಳ ಬಿತ್ತಿದ್ದ ರೈತರಿಗೆ ಬರದ ಮಧ್ಯೆಯೂ ಮುತ್ತಿನಂಥ ಬಿಳಿ ಜೋಳದ ಬೆಳೆ ಕೈಗೆ ಬಂದಿರುವುದು ರೈತರಿಗೆ ಸಂತಸ ತಂದಿದೆ.

ತಾಲ್ಲೂಕಿನ ಬಹುತೇಕ ನೀರಾವರಿ ಪ್ರದೇಶದ ಕರೂರು, ಬಲಕುಂದಿ, ಮೈಲಾಪುರ, ತಾಳೂರು, ಊಳೂರು, ಉತ್ತನೂರು, ಶಾಲಿಗನೂರು, ಬಗ್ಗೂರು, ಕರ್ಚಿಗನೂರು, ಮುದೇನೂರು, ಕೆ. ಬೆಳಗಲ್ಲು, ತೆಕ್ಕಲಕೋಟೆ ಸೇರಿದಂತೆ ವೇದಾವತಿ ನದಿ (ಹಗರಿ) ಪಾತ್ರ ಹಾಗೂ ಒಣ ಬೇಸಾಯದ ನೆಲದಲ್ಲಿ ಬಿತ್ತಿದ್ದ ಜೋಳ ಉತ್ತಮ ಫಸಲಾಗಿದೆ.

ADVERTISEMENT

ಈ ನಡುವೆ ತೆನೆಗಟ್ಟಿ ಇರುವ ಎರೆ ನೆಲದಲ್ಲಿ ಹಿಂಡು-ಹಿಂಡು ಗಿಣಿ ಮತ್ತಿತರ ಹಕ್ಕಿಗಳ ಕಾಟ ಹೆಚ್ಚಾಗಿದೆ. ನಸುಕಿಗೆ ಎದ್ದು ಹೊಲಕ್ಕೆ ಹೋಗಿ ರೈತರು ಹಕ್ಕಿಗಳನ್ನು ಓಡಿಸಿ ತೆನೆ ರಕ್ಷಿಸಿಕೊಳ್ಳುತ್ತಿದ್ದಾರೆ.

ಬರದಿಂದ ಮೇವಿಲ್ಲದೆ ದನಗಳಿಗೆ ಹೇಗೋ? ಎಂದು ಕಂಗೆಟ್ಟಿದ್ದ ರೈತರಿಗೆ ಜೋಳದ ದಂಟು ವರದಾನವಾಗಿದೆ. ದನಕರು ಇಲ್ಲದ ರೈತರು ಸಪ್ಪೆ ಮಾರಾಟ ಮಾಡಲು ಮುಂದಾಗಿದ್ದಾರೆ. ಒಟ್ಟಾರೆ ಬರದಲ್ಲೂ ಬಂದ ಜೋಳ ಸುಗ್ಗಿ ಸಂತಸ ತಂದಿದೆ.

ಮಳೆಯಾಶ್ರಿತ ಭೂಮಿಯಲ್ಲಿ ಜೋಳ ಬೆಳೆದಿರುವ ತೆಕ್ಕಲಕೋಟೆ ರೈತ ನರಸಿಂಹ 'ಮೊದಲು ಮೆಣಸಿನ ಕಾಯಿ ಹಾಕಿದ್ದೆ ಸಾರ್, ಮಳೆ ಕೈಕೊಡ್ತು ಬೆಳೆ ಕೆಡಿಸಿ ಮತ್ತೆ ಜೋಳ ಬಿತ್ತಿದೆ. ಈಗ ಜೋಳ ಕೈ ಹಿಡಿಯಬಹುದು' ಎಂದು ಹೇಳಿದರು.

ತೆಕ್ಕಲಕೋಟೆ ರೈತ ನರಸಿಂಹ ಸಾಗುವಳಿ ಜಮೀನಿನಲ್ಲಿ ನಳನಳಿಸುತ್ತಿರುವ ಬಿಳಿ ಜೋಳ
ಮಳೆಯ ಕೊರತೆಯಿಂದಾಗಿ ನೀರಾವರಿ ಆಶ್ರಿತ ಪ್ರದೇಶದಲ್ಲಿಯೂ ರೈತರು ನಿಗಧಿತ ಗುರಿಗಿಂತ ಹೆಚ್ಚು ಅಂದರೆ ಹತ್ತು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬಿತ್ತನೆಯಾಗಿದ್ದು ಉತ್ತಮ ಫಸಲು ಬರುವ ನಿರೀಕ್ಷೆ ಇದೆ
–ಎಸ್. ಬಿ ಪಾಟೀಲ ಕೃಷಿ ಸಹಾಯಕ ನಿರ್ದೇಶಕ ಸಿರುಗುಪ್ಪ
ವಿವಿಧ ತಳಿ ಜೋಳ ಜೋಳ ಬಿತ್ತನೆಯ ಗುರಿ
3972 ಹೆಕ್ಟೇರ್ ಇದ್ದದ್ದು ಈ ಬಾರಿ ಗುರಿ ಮೀರಿ 9956 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದ್ದು ಸಿರುಗುಪ್ಪ ಜೋಳದ ಕಣಜವಾಗಿ ಮಾರ್ಪಟ್ಟಿದೆ. ಜೋಳದ ತಳಿಗಳಾದ ಹೈಟೆಕ್ 3201 ಹೈಟೆಕ್ 3206 ಮಹಾಲಕ್ಷಿ 296 ಗೋಲ್ಡ್ ಪ್ರಧಾನ ಸಿ ಎಸ್ ಎಚ್ 14 ಹಾಗೂ ಎಂ 35-1 ತಳಿ ಬಿತ್ತನೆಯಾಗಿದೆ ಜೋಳ ಬೆಂಬಲ ಬೆಲೆ: ಬಿಳಿಜೋಳ-ಹೈಬ್ರಿಡ್ ಪ್ರತಿ ಕ್ವಿಂಟಲ್‍ಗೆ ದರ ₹3180 ರೂ. ಬಿಳಿಜೋಳ-ಮಾಲ್ದಂಡಿ ಪ್ರತಿ ಕ್ವಿಂಟಲ್‍ಗೆ ದರ ₹3225 ಇದೆ ಆದರೆ ವರ್ತಕರು ₹ 3500 ರಿಂದ ₹3600 ಕ್ಕೆ ಖರೀದಿ ಮಾಡುತ್ತಿದ್ದು ರೈತರು ಇನ್ನೂ ಹೆಚ್ಚಿನ ಬೆಲೆಯ ನಿರೀಕ್ಷೆಯಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.