ADVERTISEMENT

ಬಳ್ಳಾರಿ–ವಿಜಯನಗರ ವಿಧಾನ ಪರಿಷತ್‌: ಕೊಂಡಯ್ಯಗೆ ಸವಾಲೊಡ್ಡಿರುವ ಏಚರೆಡ್ಡಿ ಸತೀಶ್‌!

ಬಳ್ಳಾರಿ–ವಿಜಯನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2021, 20:15 IST
Last Updated 4 ಡಿಸೆಂಬರ್ 2021, 20:15 IST
ಕೆ.ಸಿ.ಕೊಂಡಯ್ಯ ಮತ್ತು ಏಚರೆಡ್ಡಿ ಸತೀಶ್‌
ಕೆ.ಸಿ.ಕೊಂಡಯ್ಯ ಮತ್ತು ಏಚರೆಡ್ಡಿ ಸತೀಶ್‌   

ಬಳ್ಳಾರಿ: ಬಳ್ಳಾರಿ– ವಿಜಯನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾವಣೆಯಲ್ಲಿ ಅನುಭವಿ ರಾಜಕಾರಣಿ ಕಾಂಗ್ರೆಸ್‌ನ ಕೆ.ಸಿ.ಕೊಂಡಯ್ಯ ಅವರಿಗೆ ರಾಜಕಾರಣಕ್ಕೆ ಹೊಸಬರಾಗಿರುವ ಬಿಜೆಪಿಯ ಏಚರೆಡ್ಡಿ ಸತೀಶ್‌ ಸವಾಲೊಡ್ಡಿದ್ದಾರೆ. ಇದೊಂದು ರೀತಿ, ಉತ್ತಮ ಫಾರ್ಮ್‌ನಲ್ಲಿರುವ ಬ್ಯಾಟ್ಸ್‌ಮನ್‌ಗೆ ಹೊಸ ಬೌಲರ್ ಚೆಂಡು ಎಸೆದಂತೆ. ಬ್ಯಾಟ್ಸ್‌ಮನ್‌ ಸಿಕ್ಸರ್‌ ಬಾರಿಸುವರೋ ಅಥವಾ ಬೌಲ್ಡ್‌ ಆಗುವರೋ ಎಂಬುದೇ ಕುತೂಹಲದ ಪ್ರಶ್ನೆ.

ಜಿಲ್ಲೆಯ ರಾಜಕಾರಣ ಎರಡು ದಶಕಗಳಲ್ಲಿ ಭಾರಿ ಬದಲಾವಣೆ ಕಂಡಿದೆ. 2008ರಲ್ಲಿ ರೆಡ್ಡಿಗಳ ಪ್ರಾಬಲ್ಯವಿತ್ತು. ಅಕ್ರಮ ಗಣಿಗಾರಿಕೆ ಆರೋಪ ಜನಾರ್ದನ ರೆಡ್ಡಿ ಮೇಲೆ ಬಂದ ಬಳಿಕ ಬಿಜೆಪಿ ಹಿಡಿತ ಕೈತಪ್ಪಿತು. ಈಗ ಜಿಲ್ಲೆಯಲ್ಲಿ ಐವರು ಕಾಂಗ್ರೆಸ್‌ ಮತ್ತು ಐವರು ಬಿಜೆಪಿ ಶಾಸಕರಿದ್ದು, ಸಮಬಲ ಹೊಂದಿವೆ. ಇದರಿಂದಾಗಿ ಯಾರು ಗೆಲ್ಲುತ್ತಾರೆ, ಯಾರು ಸೋಲುತ್ತಾರೆ ಎಂದು ಮೇಲ್ನೋಟಕ್ಕೆ ಹೇಳುವುದು ಕಷ್ಟ.

ಆರು ತಿಂಗಳಿಂದ ಕೊಂಡಯ್ಯ ಪ್ರಚಾರದಲ್ಲಿ ತೊಡಗಿದ್ದಾರೆ. ಮತದಾರರ ವೈಯಕ್ತಿಕ ಸಂಪರ್ಕದಲ್ಲಿದ್ದಾರೆ. ಇದು ಅವರಿಗೆ ಪ್ಲಸ್‌ ಪಾಯಿಂಟ್‌. ಜಾತಿ ಹಿನ್ನೆಲೆ ನೋಡಿದರೆ ಕೊಂಡಯ್ಯ ಅತೀ ಸಣ್ಣ ‘ನೇಕಾರ ಪದ್ಮಸಾಲಿ’ ಸಮಾಜಕ್ಕೆ ಸೇರಿದವರು. ಜಿಲ್ಲೆಯಲ್ಲಿ ದಲಿತರು, ವಾಲ್ಮೀಕಿ, ಲಿಂಗಾಯತ, ಕುರುಬರ ಪ್ರಾಬಲ್ಯವಿದೆ. ಕೊಂಡಯ್ಯ ಅವರಿಗೆ ಜಾತಿ ಬಲವಿಲ್ಲದಿದ್ದರೂ ಪ್ರಭಾವಿ ನಾಯಕರಾಗಿದ್ದಾರೆ.

ADVERTISEMENT

‘ಚುನಾವಣೆ ಅಖಾಡ’ದ ಹತ್ತಿರ ನಿಂತು ನೋಡಿದರೆ ಕೊಂಡಯ್ಯ ಸ್ಪರ್ಧೆಯಲ್ಲಿ ಮುಂದಿರುವಂತೆ ಕಂಡರೂ ಪ‌ಕ್ಷದ ಕೆಲ ಶಾಸಕರು ಅವರಿಗೆ ವಿರುದ್ಧವಾಗಿರುವಂತಿದೆ. ಆರಂಭದಲ್ಲೇ ಅವರಿಗೆಟಿಕೆಟ್‌ ಕೊಡಬಾರದೆಂದು ಪಟ್ಟು ಹಿಡಿದಿದ್ದರು. ಈ ವಿರೋಧ ಬದಿಗೊತ್ತಿ ಹೈಕಮಾಂಡ್‌ ಟಿಕೆಟ್‌ ನೀಡಿದೆ. ‘ಕೊಂಡಯ್ಯ ಅವರನ್ನು ಬಿಟ್ಟು ಬೇರೆ ಯಾರಿಗೆ ಟಿಕೆಟ್‌ ಕೊಟ್ಟರೂ ಗೆಲ್ಲುವುದು ಕಷ್ಟ’ ಎಂಬ ಕಾರಣಕ್ಕೆ ಮತ್ತೆ ಕಣಕ್ಕಿಳಿಸಲಾಗಿದೆ.

ಕೊಂಡಯ್ಯ ಪರ ಶಾಸಕರು ಪ್ರಚಾರ ಮಾಡುತ್ತಿದ್ದಾರೆ. ‘ಕೊಂಡಯ್ಯನವರನ್ನು ವಿರೋಧಿಸಿದರೆ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಭವಿಷ್ಯಕ್ಕೆ ತೊಂದರೆ ಎಂಬ ಅರಿವು ಅವರಿಗಿದೆ. ಅಕಸ್ಮಾತ್‌, ಅವರು ಒಳ ಏಟು ಕೊಟ್ಟರೆ ಕೊಂಡಯ್ಯ ಗೆಲುವು ಕಷ್ಟ ಆಗಬಹುದು’ ಎಂದು ಅವರ ಬೆಂಬಲಿಗರು ಹೇಳುತ್ತಾರೆ.

ಬಿಜೆಪಿ ಅಭ್ಯರ್ಥಿ ಸತೀಶ್‌ ಗಣಿ ಉದ್ಯಮಿ. ರಾಜಕೀಯಕ್ಕೆ ಹೊಸಬರು. ಜಿಲ್ಲೆಯ ಜನರಿಗೆ ಅವರ ಮನೆತನದ ಪರಿಚಯವಿದೆ. ಸತೀಶ್‌ ಅವರ ಅಜ್ಜ ವೈ.ಮಹಾಬಲೇಶ್ವರಪ್ಪ ವೀರಶೈವ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದಾರೆ. ಗಡಿಗಳಲ್ಲಿ ಶಾಲೆಗಳನ್ನು ನಿರ್ಮಿಸಿದ್ದಾರೆ. ರಾಜಕೀಯಕ್ಕೆ ಹೊಸಬರು ಎನ್ನುವುದು ಅವರ ಮೈನಸ್‌ ಪಾಯಿಂಟ್‌.

ಲಿಂಗಾಯತ ಸಮುದಾಯದ ಸತೀಶ್‌ ವಿವಾದಾತೀತ ವ್ಯಕ್ತಿ. ಟಿಕೆಟ್‌ ಘೋಷಣೆಯಾದ ಬಳಿಕವಷ್ಟೆ ಪ್ರಚಾರ ಆರಂಭಿಸಿದ್ದಾರೆ. ಅವರ ಪರ ಪಕ್ಷದ ದೊಡ್ಡ ಪಡೆ ಪ್ರಚಾರ ಮಾಡುತ್ತಿದೆ. ‘ಶ್ರೀಮಂತ ಕುಳ’ವಾಗಿರುವುದರಿಂದ ಸಾಕಷ್ಟು ಹಣ ಖರ್ಚು ಮಾಡಬಹುದು ಎಂದು ಬಿಜೆಪಿ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.

ಆನಂದ್‌ಸಿಂಗ್‌, ರಾಮುಲು ಸೇರಿ ಎಲ್ಲ ನಾಯಕರು ಸತೀಶ್‌ ಪರ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವುದು ಅವರಿಗೆ ‍ಪ್ಲಸ್‌ ಪಾಯಿಂಟ್‌. ಮತಯಾಚನೆಗೆ ಅದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ಈ ಅಂಶಗಳು ಕೊಂಡಯ್ಯನವರ ನಿದ್ದೆಗೆಡಿಸಿವೆ ಎಂದರೂ ತಪ್ಪಲ್ಲ.

‘ಅಭ್ಯರ್ಥಿಗಳ ಸಾಧನೆ ಎಷ್ಟೇ ದೊಡ್ಡದಿದ್ದರೂ ಹಣ ಬಿಚ್ಚದಿದ್ದರೆ ಕೆಲಸ ಆಗುವುದಿಲ್ಲ’ ಎಂಬ ವಾತಾವರಣ ಈ ಚುನಾವಣೆಯಲ್ಲೂ ಕಂಡುಬರುತ್ತಿದೆ.

* ಸ್ಥಳೀಯ ಸಂಸ್ಥೆಗಳ ಮತದಾರರು ಬದಲಾವಣೆ ಬಯಸಿದ್ದಾರೆ. ಹೀಗಾಗಿ, ಈ ಸಲದ ಚುನಾವಣೆಯಲ್ಲಿ ನನ್ನನ್ನೇ ಬೆಂಬಲಿಸಲಿದ್ದಾರೆ

-ವೈ.ಎಂ. ಸತೀಶ್‌, ಬಿಜೆಪಿ ಅಭ್ಯರ್ಥಿ

* ಗ್ರಾಮ ಪಂಚಾಯತಿ ಸದಸ್ಯರ ಅಧಿಕಾರವನ್ನು ಮನವರಿಕೆ ಮಾಡಿಕೊಟ್ಟು, ಅವುಗಳನ್ನು ಬಲಪಡಿಸಲು ಹೋರಾಡುತ್ತಿದ್ದೇನೆ. ಇದು ಮತದಾರರಿಗೂ ಗೊತ್ತಿದೆ

-ಕೆ.ಸಿ.ಕೊಂಡಯ್ಯ, ಕಾಂಗ್ರೆಸ್‌ ಅಭ್ಯರ್ಥಿ

ಒಟ್ಟು ಮತದಾರರು 4663

ಪುರುಷರು 2194

ಮಹಿಳೆಯರು 2468

ಲೈಂಗಿಕ ಅಲ್ಪಸಂಖ್ಯಾತರು 1

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.