ADVERTISEMENT

‘ವಕ್ಫ್‌’ ವಿರುದ್ಧ ತಿರುಗಿಬಿದ್ದ ಬಿಜೆಪಿ

ವಕ್ಫ್‌ ನೋಟಿಸ್ ವಿರುದ್ಧ ಹೋರಾಟ, ಸಿದ್ದರಾಮಯ್ಯ, ಜಮೀರ್‌ ವಿರುದ್ಧ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2024, 15:47 IST
Last Updated 21 ನವೆಂಬರ್ 2024, 15:47 IST
ರೈತರ ಜಮೀನುಗಳಿಗೆ ವಕ್ಫ್‌ ಮಂಡಳಿಯಿಂದ ನೋಟಿಸ್‌ ನೀಡಿರುವುದನ್ನು ವಿರೋಧಿಸಿ ಬಳ್ಳಾರಿ ನಗರದಲ್ಲಿ ಬಿಜೆಪಿ ಮುಖಂಡರು ಗುರುವಾರ ಪ್ರತಿಭಟನೆ ನಡೆಸಿದರು. ಶಾಸಕ ಜನಾರ್ದನ ರೆಡ್ಡಿ, ಮಾಜಿ ಸಚಿವ ಶ್ರೀರಾಮುಲು, ಮಾಜಿ ಶಾಸಕ ಸೋಮಶೇಖರ ರೆಡ್ಡಿ ಮತ್ತಿತರರು ಇದ್ದರು
ರೈತರ ಜಮೀನುಗಳಿಗೆ ವಕ್ಫ್‌ ಮಂಡಳಿಯಿಂದ ನೋಟಿಸ್‌ ನೀಡಿರುವುದನ್ನು ವಿರೋಧಿಸಿ ಬಳ್ಳಾರಿ ನಗರದಲ್ಲಿ ಬಿಜೆಪಿ ಮುಖಂಡರು ಗುರುವಾರ ಪ್ರತಿಭಟನೆ ನಡೆಸಿದರು. ಶಾಸಕ ಜನಾರ್ದನ ರೆಡ್ಡಿ, ಮಾಜಿ ಸಚಿವ ಶ್ರೀರಾಮುಲು, ಮಾಜಿ ಶಾಸಕ ಸೋಮಶೇಖರ ರೆಡ್ಡಿ ಮತ್ತಿತರರು ಇದ್ದರು   

ಬಳ್ಳಾರಿ: ರೈತರ ಭೂಮಿಗೆ ವಕ್ಫ್‌ ಮಂಡಳಿ ನೋಟಿಸ್‌ ನೀಡಿರುವುದನ್ನು ವಿರೋಧಿಸಿ ಬಿಜೆಪಿ ನಾಯಕರು, ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು. 

‘ನಮ್ಮ ಭೂಮಿ ನಮ್ಮ ಹಕ್ಕು’ ಎಂಬ ಘೋಷವಾಕ್ಯದ ಪ್ರತಿಭಟನೆಯಲ್ಲಿ ವಕ್ಫ್‌ ಖಾತೆ ಸಚಿವ ಜಮೀರ್‌ ಅಹಮದ್‌ ಖಾನ್‌, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು. 

‘ರೈತರಿಗೆ ನೀಡಲಾಗಿರುವ ನೋಟಿಸ್‌ಗಳನ್ನು ಕಾನೂನು ಬದ್ಧವಾಗಿ ಹಿಂಪಡೆಯಬೇಕು. ಪಹಣಿಗಳಲ್ಲಿನ ವಕ್ಪ್ ಹೆಸರು ತೆಗೆದು ಹಾಕಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. 

ADVERTISEMENT

ಈ ವೇಳೆ ಮಾತನಾಡಿದ ಶಾಸಕ ಜನಾರ್ದನ ರೆಡ್ಡಿ,  ‘ಭೂಮಿ ಕಬಳಿಕೆ ಮಾಡುವ ಹುನ್ನಾರವನ್ನು ವಕ್ಫ್‌ ಹೆಸರಲ್ಲಿ ಕಾಂಗ್ರೆಸ್‌ ಸರ್ಕಾರ ಮಾಡುತ್ತಿದೆ.  ಪ್ರಧಾನಿ ನರೇಂದ್ರ ಮೋದಿ ಅವರು  ವಕ್ಫ್‌ ಕಾಯ್ದೆಗೆ ತಿದ್ದುಪಡಿ ತರಲು ಆರಂಭಿಸಿದಕ್ಕೆ ಕಾಂಗ್ರೆಸ್‌ ಹೀಗೆ ಮಾಡುತ್ತಿದೆ. ಕರ್ನಾಟಕದಲ್ಲಿ ಜಮೀರ್‌ ಎಂಬ 420 ಸಚಿವನನ್ನು ಮುಂದಿಟ್ಟುಕೊಂಡು ರೈತರ ಭೂಮಿ ಕಬಳಿಸಲು ಸರ್ಕಾರ ಪ್ರಯತ್ನಿಸುತ್ತಿದೆ’ ಎಂದು ವಾಗ್ದಾಳಿ ನಡೆಸಿದರು. 

‘ವಕ್ಫ್‌ ಮಂಡಳಿ ನೋಟಿಸಿನ ವಿರುದ್ಧ ನಮ್ಮ ಹೋರಾಟ ನಡೆಯುತ್ತಿದೆ. ನೋಟಿಸ್‌ ಹಿಂಪಡೆಯುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ, ಗೆಜೆಟ್‌ ಅಧಿಸೂಚನೆಗಳನ್ನು ಕ್ಯಾಬಿನೆಟ್‌ ನಿರ್ಣಯ ಕೈಗೊಂಡು ಶಾಶ್ವತವಾಗಿ ರದ್ದು ಮಾಡಬೇಕು. ಚುನಾವಣೆ ಕಾರಣದ ಹೇಳಿಕೆಗಳನ್ನು ಸರ್ಕಾರ ನಿಲ್ಲಿಸಬೇಕು’ ಎಂದು ಒತ್ತಾಯಿಸಿದರು. 

‘ರಾಜ್ಯದಲ್ಲಿ ಬಿಜೆಪಿ ನಡೆಸುತ್ತಿರುವ ನಮ್ಮ ಹೋರಾಟವನ್ನು ಇಡೀ ದೇಶ ಗಮನಿಸಿದೆ. ರೈತರ ಜೊತೆಯಲ್ಲಿ ಬಿಜೆಪಿ ಇದೆ. ಈ ಹೋರಾಟವನ್ನು ನಾವು ಯಾವುದೇ ಹಂತಕ್ಕಾದರೂ ಕೊಂಡೊಯ್ಯುತ್ತೇವೆ’ ಎಂದರು.  

ಮಾಜಿ ಸಚಿವ ಶ್ರೀರಾಮುಲು ಮಾತನಾಡಿ, ‘ರೈತರ ಹೆಸರಿನ, ಮಠಗಳ  ಜಮೀನುಗಳನ್ನು ಕಬಳಿಸುವ ಪ್ರಯತ್ನವನ್ನು ತುಗಲಕ್‌ ಮಂತ್ರಿ ಜಮೀರ್‌ ಮಾಡುತ್ತಿದ್ದಾರೆ. ರಜಾಕರು, ನಿಜಾಮರು, ತುಗಲಕ್‌ ಕಾಲದಲ್ಲೂ ಹೀಗೆ ಆಗಿರಲಿಲ್ಲ. ಇದರಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ಕೈವಾಡವಿದೆಯೇ ಎಂಬುದನ್ನು ಅವರೇ ಸ್ಪಷ್ಟಪಡಿಸಬೇಕು. ಸರ್ಕಾರ ಈ ಓಲೈಕೆ ರಾಜಕಾರಣ ನಿಲ್ಲಿಸಬೇಕು’ ಎಂದರು. 

‘ಜನರಲ್ಲಿ ಭಯ ಉಂಟು ಮಾಡಲಾಗುತ್ತಿದೆ. ವಕ್ಫ್‌ ನೋಟಿಸ್‌ ಹಿಂಪಡೆಯುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಆದರೆ ಆಸ್ತಿಗಳು ವಕ್ಫ್‌ಗೆ ನೋಂದಣಿ ಆಗುತ್ತಲೇ ಇವೆ’ ಎಂದರು. 

ಮಾಜಿ ಶಾಸಕ ಸೋಮಶೇಖರ ರೆಡ್ಡಿ ಮಾತನಾಡಿ ‘ವಕ್ಫ್‌ ಹೆಸರಲ್ಲಿರುವ ಜಾಗಗಳಿಗೂ ವಕ್ಫ್‌ ಮಂಡಳಿ ಸೂಕ್ತ ದಾಖಲೆ ಕೊಡಬೇಕು. ಇಲ್ಲವಾದರೆ, ಅದು ಸರ್ಕಾರದ ಜಾಗ ಎಂದು ಪರಿಗಣಿಸಬೇಕು. ವಕ್ಫ್‌ ಇಂದು ಹೊಲಗಳಿಗೆ ಬಂದಿದೆ. ನಾಳೆ ಮನೆಗಳಿಗೆ ಬರುತ್ತದೆ. ಮುಂದಿನ ಪರಿಸ್ಥಿತಿ ಭೀಕರವಾಗಲಿದೆ. ವಕ್ಫ್‌ ಪೂರ್ಣ ರದ್ದಾಗಬೇಕು. ಭೂಮಿಯನ್ನು ರೈತರಿಗೆ ಹಂಚಬೇಕು. ಸರ್ಕಾರ ವಶಕ್ಕೆ ಪಡೆಯಬೇಕು’ ಎಂದರು.    

ರೈತರ ಜಮೀನುಗಳಿಗೆ ವಕ್ಫ್‌ ಮಂಡಳಿಯಿಂದ ನೋಟಿಸ್‌ ನೀಡಿರುವುದನ್ನು ವಿರೋಧಿಸಿ ಬಳ್ಳಾರಿ ನಗರದಲ್ಲಿ ಬಿಜೆಪಿ ಮುಖಂಡರು ಗುರುವಾರ ಪ್ರತಿಭಟನೆ ನಡೆಸಿದರು. ಸಂಡೂರಿನ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ ಶಾಸಕ ಜನಾರ್ದನ ರೆಡ್ಡಿ ಮಾಜಿ ಶಾಸಕ ಸೋಮಶೇಖರ ರೆಡ್ಡಿ ಮತ್ತಿತರರು ಇದ್ದರು

ಸಂಡೂರಲ್ಲಿ ಬಿಜೆಪಿಗೇ ಗೆಲುವು

ಸಂಡೂರು ಸೇರಿದಂತೆ ಶಿಗ್ಗಾವಿ ಚನ್ನಪಟ್ಟಣದಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದರು. ‘ಸರ್ವೆಗಳ ಬಗ್ಗೆ ನಾನು ಮಾತನಾಡುವುದಿಲ್ಲ. ಜನರು ನಮ್ಮ ಪರವಾಗಿದ್ದಾರೆ. ಕಾಂಗ್ರೆಸ್‌ ಹಣದ ಹೊಳೆ ಹರಿಸಿದರೂ ಜನ ನಮ್ಮ ಕಡೆ ನಿಂತಿದ್ದಾರೆ. ಅಭಿಮಾನದಿಂದ ಮತ ಹಾಕಿದ್ದಾರೆ. ಉತ್ತಮ ಅಂತರದಲ್ಲಿ ನಾವು ಗೆಲ್ಲುತ್ತೇವೆ. ಸಂಡೂರು ಬಿಜೆಪಿ ಪರವಾಗಿದ್ದರಿಂದಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಡೂರಿನಲ್ಲಿ ಮೂರು ದಿನ ಪ್ರಚಾರ ನಡೆಸಬೇಕಾಯಿತು’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.