ಸಂಡೂರು: ಸಂಡೂರು- ಹೊಸಪೇಟೆ, ತೋರಣಗಲ್ಲು- ಕೂಡ್ಲಿಗಿ ಸಂಪರ್ಕ ಸಂಪರ್ಕ ರಸ್ತೆಗಳು ಹಾಗೂ ಇಲ್ಲಿನ ಕುಮಾರಸ್ವಾಮಿ ದೇವಸ್ಥಾನಕ್ಕೆ ತೆರಳುವ ರಸ್ತೆಯನ್ನು ಬಿಜೆಪಿಯವರು ತಾವೇ ಮಾಡಿದ್ದೇವೆ ಎಂದು ಅಪಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ ಇದರ ಹಿಂದಿನ ಇತಿಹಾಸವೇ ಬೇರೆ ಇದೆ’ ಎಂದು ಸಂಸದ ಇ.ತುಕಾರಾಂ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕುಮಾರಸ್ವಾಮಿ ದೇವಸ್ಥಾನದ 11 ಕಿ.ಮೀ ರಸ್ತೆಯನ್ನು ಸ್ಥಳೀಯ ಮೈನಿಂಗ್ ಕಂಪನಿಗಳಾದ ಸ್ಮಯೋರ್, ವೆಸ್ಕೋ, ಬಿಕೆಜಿ, ಜೆಎಸ್‌ಡಬ್ಲ್ಯೂ, ಎಚ್ಆರ್‌ಜಿ, ಎಂಎಂಎಲ್ ಕಂಪನಿಗಳ ಸಹಕಾರದಲ್ಲಿ ನಿರ್ಮಿಸಲಾಗಿದೆ. ಇದಕ್ಕೂ ಮುನ್ನ 2010ರಲ್ಲಿ ಬಳ್ಳಾರಿಯ ಆರ್.ಕೆ ಇನ್ಫ್ರಾಸ್ಟ್ರಕ್ಚರ್ ಕಂಪನಿಯು ₹23,49,51,123 ಮೊತ್ತಕ್ಕೆ ಟೆಂಡರ್ ಪಡೆದು ಅದರ ಶೇ 10ರಷ್ಟು ಹಣ ₹3.35 ಕೋಟಿ ಅಡ್ವಾನ್ಸ್ ಪಡೆದು ಕೆಲಸ ಮಾಡದೆ ಮೋಸ ಮಾಡಿದ್ದರು. ಕುಮಾರಸ್ವಾಮಿ ರಸ್ತೆಯಲ್ಲೂ ಮೋಸ ಮಾಡಿದ್ದಾರೆ. ಈಗ ತಾವೇ ನಿರ್ಮಿಸಿದ್ದೇವೆ ಎಂದು ಹೇಳುತ್ತಿದ್ದಾರೆ’ ಎಂದು ಟೀಕಿಸಿದರು.
‘ಸಂಡೂರು– ಹೊಸಪೇಟೆ ರಸ್ತೆ ನಿರ್ಮಾಣಕ್ಕೆ 2001ರಲ್ಲಿ ಜನಾರ್ಧನ ರೆಡ್ಡಿ, ಕರುಣಾಕರ ರೆಡ್ಡಿ ಮಾಲೀಕತ್ವದ ರಾಘವೇಂದ್ರ ಕನ್‌ಸ್ಟ್ರಕ್ಟರ್ಸ್ ಸಂಸ್ಥೆಗೆ ₹2.38 ಕೋಟಿಗೆ ಟೆಂಡರ್ ಪಡೆಯಲಾಗಿತ್ತು. ಶೇ 24.3ರಷ್ಟು ಲೀಸ್‌ಗೆ ಪಡೆದಿದ್ದರು. ಅಂದಿನ ಸಚಿವ ವೈ.ಎಂ ಘೋರ್ಪಡೆ ಅವರನ್ನು ಕರೆಸಿ ಭೂಮಿಪೂಜೆ ಮಾಡಿಸಲಾಗಿತ್ತು. ಆದರೆ ಕಾಮಗಾರಿ ಪೂರ್ಣಗೊಳ್ಳಲಿಲ್ಲ. ಗುತ್ತಿಗೆ ಪರವಾನಗಿ ಬ್ಲಾಕ್ ಲಿಸ್ಟ್‌ಗೆ ಸೇರಿಸಿ, ಭದ್ರತಾ ಠೇವಣಿ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಬಿಜೆಪಿಯವರು ಕೆಲಸ ಮಾಡದೆ ಸಂಡೂರು ಜನತೆಗೆ ಮೋಸ ಮಾಡಿದ್ದಾರೆ. ಇಂಥವರು ಈಗ ಸಂಡೂರು ಅಭಿವೃದ್ಧಿ ಬಗ್ಗೆ ಮಾತಾಡುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.
‘ಮೊದಲ ಬಾರಿ ಶಾಸಕನಾದಾಗ ರಸ್ತೆ ನಿರ್ಮಾಣಕ್ಕೆ ಸದನದಲ್ಲಿ ಧ್ವನಿ ಎತ್ತಿದ್ದೆ. ₹135 ಕೋಟಿ ಅನುದಾನವನ್ನು ಹುಡ್ಕೋ ಸಾಲದಲ್ಲಿ ಬಿಡ್ ಆ್ಯಂಡ್ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಮಾಡಿಸಿ, ಸಂಡೂರಿನಿಂದ ಹೊಸಪೇಟೆ, ಕೂಡ್ಲಿಗಿ, ತೋರಣಗಲ್ಲು ರಸ್ತೆ ನಿರ್ಮಿಸಿದೆವು’ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಾಡಾ ಮಾಜಿ ಅಧ್ಯಕ್ಷ ರೋಷನ್ ಜಮೀರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಏಕಾಂಬರಪ್ಪ, ಚಿತ್ರಿಕಿ ಸತೀಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.