ಹೊಸಪೇಟೆ (ವಿಜಯನಗರ): ಹೊಸಪೇಟೆ ನಗರಸಭೆಯಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರುವುದು ಖಚಿತವಾಗಿದೆ.
ಆಮ್ ಆದ್ಮಿ ಪಕ್ಷದ (ಎಎಪಿ) ಒಬ್ಬರು, ಎಂಟು ಜನ ಪಕ್ಷೇತರರು ಗುರುವಾರ ಬಿಜೆಪಿ ಸೇರಿದ್ದಾರೆ. ಚುನಾವಣೆಯಲ್ಲಿ ಬಿಜೆಪಿಯ ಹತ್ತು ಜನ ಸದಸ್ಯರು ಜಯಿಸಿದ್ದಾರೆ. ಇದರೊಂದಿಗೆ ಪಕ್ಷದ ಬಲ 19ಕ್ಕೆ ಏರಿಕೆಯಾಗಿದೆ. ಒಟ್ಟು 35 ಸದಸ್ಯ ಬಲದ ನಗರಸಭೆಯಲ್ಲಿ ಬಿಜೆಪಿಗೆ ಸರಳ ಬಹುಮತ ಸಿಕ್ಕಂತಾಗಿದೆ. ಬಿಜೆಪಿಯವರೇ ಅಧ್ಯಕ್ಷ, ಉಪಾಧ್ಯಕ್ಷರಾಗುವುದು ಖಚಿತವಾದಂತಾಗಿದೆ. ಇಷ್ಟೇ ಅಲ್ಲ, ಮೊದಲ ಬಾರಿಗೆ ನಗರಸಭೆಯಲ್ಲಿ ಕಮಲ ಪಕ್ಷದ ಬಾವುಟ ಹಾರಾಡಲಿದೆ.
‘ತಮ್ಮ ಪಕ್ಷದ ಟಿಕೆಟ್ ಸಿಗದೇ ಇರುವುದರಿಂದ ಪಕ್ಷೇತರರಾಗಿ ಸ್ಪರ್ಧಿಸಿ ಹಲವರು ಗೆದ್ದಿದ್ದಾರೆ. ಅವರು ಕಾಂಗ್ರೆಸ್ ಪಕ್ಷ ಬೆಂಬಲಿಸಲಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡರು ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಭರವಸೆ ವ್ಯಕ್ತಪಡಿಸಿದ್ದರು. ಆದರೆ, ಅವರು ಅಂದುಕೊಂಡಂತೆ ಯಾವುದೂ ನಡೆದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರ ರಾಜಕೀಯ ಚಾಣಾಕ್ಷತನ, ಪ್ರಭಾವಕ್ಕೆ ಮಣಿದು 9 ಜನರು ಬಿಜೆಪಿಯ ತೆಕ್ಕೆಗೆ ಹೋಗಿದ್ದಾರೆ.
ಸಚಿವ ಆನಂದ್ ಸಿಂಗ್ ಅವರ ತವರು ಕ್ಷೇತ್ರದಲ್ಲೇ ಬಿಜೆಪಿ 10 ಸ್ಥಾನಗಳಲ್ಲಷ್ಟೇ ಗೆದ್ದಿತ್ತು. ಕಾಂಗ್ರೆಸ್‌ನಲ್ಲಿ ಪ್ರಭಾವಿ ಮುಖಂಡರು ಇರದಿದ್ದರೂ 12 ಕಡೆಗಳಲ್ಲಿ ಜಯಿಸಿತ್ತು. ಆದರೆ, ಪಕ್ಷೇತರರನ್ನು ಪಕ್ಷಕ್ಕೆ ಕರೆತಂದು ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಆನಂದ್ ಸಿಂಗ್ ಮೇಲುಗೈ ಸಾಧಿಸಿದ್ದಾರೆ.
ಫಲಿತಾಂಶ ಹೊರಬಿದ್ದು ವಾರವಷ್ಟೇ ಕಳೆದಿದೆ. ಅಷ್ಟರೊಳಗೆ ಎಎಪಿಯ ಶೇಕ್ಷಾವಲಿ ಅವರು ಪಕ್ಷ ನಿಷ್ಠೆ ಬದಲಿಸಿ ಬಿಜೆಪಿ ಸೇರಿರುವುದಕ್ಕೆ ಆ ಪಕ್ಷದ ಮುಖಂಡರು ಅವರ ವಿರುದ್ಧ ಕಿಡಿಕಾರಿದ್ದಾರೆ. ಇನ್ನು, ಪಕ್ಷೇತರರ ಅವಸರದ ತೀರ್ಮಾನಕ್ಕೂ ಮತದಾರರು ಬೇಸರ ವ್ಯಕ್ತಪಡಿಸಿದ್ದಾರೆ.
ನಗರಸಭೆಯಲ್ಲಿ ವಿವಿಧ ಪಕ್ಷಗಳ ಬಲಾಬಲ
ಒಟ್ಟು ಸ್ಥಾನ 35
ಬಿಜೆಪಿ 10+ಎಎಪಿ 1 +ಪಕ್ಷೇತರರು 8= 19
ಕಾಂಗ್ರೆಸ್ 12
ಪಕ್ಷೇತರರು 4
ಬಿಜೆಪಿ ಸೇರಿದ ಸದಸ್ಯರು
ಹೆಸರು ವಾರ್ಡ್ ಪಕ್ಷ
ಶೇಕ್ಷಾವಲಿ 22 ಎಎಪಿ
ಕಾಜಾ ಬನ್ನಿ 11 ಪಕ್ಷೇತರ
ಗುಜ್ಜಲ್ ಹನುಮಂತಪ್ಪ 13 ಪಕ್ಷೇತರ
ಸರವಣನ್ 14 ಪಕ್ಷೇತರ
ಎ.ಶಾಂತಾ 19 ಪಕ್ಷೇತರ
ಸಣ್ಣ ದುರುಗಮ್ಮ 25 ಪಕ್ಷೇತರ
ಎ.ಲತಾ 30 ಪಕ್ಷೇತರ
ತಾರಿಹಳ್ಳಿ ಜಂಬುನಾಥ 31 ಪಕ್ಷೇತರ
ಹನುಮಂತವ್ವ 32 ಪಕ್ಷೇತರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.