ADVERTISEMENT

ಬಿಜೆಪಿಗೆ ಕುರುಬರು ಬೇಡವೆ?: ಪಕ್ಷದ ಸಭೆಯಲ್ಲಿ ಮುಖಂಡನ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2024, 8:29 IST
Last Updated 20 ಮಾರ್ಚ್ 2024, 8:29 IST
<div class="paragraphs"><p>ಬಿಜೆಪಿಯ ಸ್ಥಳೀಯ ಮುಖಂಡ ರಾಮಲಿಂಗಪ್ಪ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು</p></div>

ಬಿಜೆಪಿಯ ಸ್ಥಳೀಯ ಮುಖಂಡ ರಾಮಲಿಂಗಪ್ಪ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು

   

ಬಳ್ಳಾರಿ: ಪಕ್ಷಕ್ಕೆ ಕುರುಬರು, ಕುರುಬ ಸಮುದಾಯದ ನಾಯಕರು ಬೇಡವೇ? ಸಮುದಾಯದ ಮುಖಂಡರ ಬಗ್ಗೆ ಪಕ್ಷದಲ್ಲಿ ಯಾಕಿಷ್ಟು ನಿರ್ಲಕ್ಷ್ಯ ಎಂದು ಪ್ರಶ್ನಿಸಿ ಬಳ್ಳಾರಿ ಬಿಜೆಪಿಯ ಸ್ಥಳೀಯ ಮುಖಂಡ ರಾಮಲಿಂಗಪ್ಪ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಗರದಲ್ಲಿ ಬುಧವಾರ ಆಯೋಜಿಸಿದ್ದ 'ಬೂತ್ ವಿಜಯ ಅಭಿಯಾನ' ಸಭೆಯಲ್ಲಿ ಮಾತನಾಡಿದ ರಾಮಲಿಂಗಪ್ಪ ವೇದಿಕೆಯ ಬ್ಯಾನರ್ ನಲ್ಲಿ ತಮ್ಮ ಭಾವಚಿತ್ರ ಇಲ್ಲದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ADVERTISEMENT

'ಪಕ್ಷದಲ್ಲಿ ಹಲವು ವರ್ಷಗಳಿಂದ ನಿರ್ಲಕ್ಷ್ಯವಾಗುತ್ತಲೇ ಇದೆ. ಚುನಾವಣೆಗಳಲ್ಲಿ ಸೋತರೂ, ಹಿನ್ನಡೆ ಅನುಭವಿಸಿದರೂ ನಾನು ಪಕ್ಷ ಬಿಡಲಿಲ್ಲ. ಆದರೆ ನಮ್ಮ ಚಿತ್ರಗಳನ್ನು ಬ್ಯಾನರ್ ನಲ್ಲಿ ಹಾಕಲು ಇರುವ ತೊಡಕೇನು? ಅಭ್ಯರ್ಥಿ ಶ್ರೀರಾಮುಲು ಅವರೇ ಎಲ್ಲವನ್ನೂ ನೋಡಲು ಆಗುವುದಿಲ್ಲ‌‌. ಜಿಲ್ಲಾ ಘಟಕದ ಅಧ್ಯಕ್ಷರಾದವರು ಇದನ್ನೆಲ್ಲ ಗಮನಿಸಬೇಕು'ಎಂದು ಹೇಳಿದ ಅವರು, ವೇದಿಕೆ ಮೇಲಿದ್ದ ಬಿಜೆಪಿ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಅನಿಲ್ ಕುಮಾರ್ ಮೋಕಾ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

'ಎಷ್ಟು ಸಲ ಹೇಳಬೇಕು ನಿಮಗೆ? ಸಮಸ್ಯೆ ಬಗ್ಗೆ ಮಾತಾಡಬಾರದು ಅಂತಾರೆ. ಎಲ್ಲಿ ವರೆಗೆ ಮಾತಾಡಬಾರದು. ಪ್ರತಿ ಕ್ಷೇತ್ರದಲ್ಲಿ ನಮ್ಮ ಸಮಾಜದ 30 ಸಾವಿರ ಮತಗಳಿವೆ. ಪಕ್ಷಕ್ಕೆ ನಾವು ಬೇಡವೇ' ಎಂದು ಪ್ರಶ್ನಿಸಿದರು.

ಆಕ್ರೋಶಭರಿತರಾಗಿ ಭಾಷಣ ಮಾಡುತ್ತಿದ್ದ ರಾಮಲಿಂಗಪ್ಪ ಅವರನ್ನು ಎಲ್ಲರೂ ಸಮಾಧಾನ ಪಡಿಸಲು ಯತ್ನಿಸಿದರು. ಆಗ ರಾಮಲಿಂಗಪ್ಪ ಅವರು ವೇದಿಕೆಯಿಂದ ನಿರ್ಗಮಿಸಿದರು. ಅಲ್ಲೇ ಇದ್ದ ಶ್ರೀರಾಮುಲು ಆಗಲಿ, ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಆಗಲಿ ರಾಮಲಿಂಗಪ್ಪ ಅವರನ್ನು ತಡೆಯಲಿಲ್ಲ. ನಂತರ ಸ್ಥಳೀಯ ನಾಯಕರು ಹೋಗಿ ಸಮಾಧಾನಪಡಿಸಿ ಅವರನ್ನು ಮರಳು ಕರೆತಂದರು.

ರಾಮಲಿಂಗಪ್ಪ ಅವರು ಈ ಹಿಂದೆ ಇದ್ದ ಕುರುಗೋಡು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಪರಾಭವಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.