ಹೊಸಪೇಟೆ: ‘ಬಿಜೆಪಿಯಲ್ಲಿ ಕೆಳಮಟ್ಟದಲ್ಲಿ ಕೇಡರ್ ಇಲ್ಲ. ಹೀಗಾಗಿಯೇ ಬಿಜೆಪಿ ಗ್ರಾಮ ಪಂಚಾಯಿತಿ ಚುನಾವಣೆಗೆ ವಿಶೇಷ ಆಸಕ್ತಿ ತೋರಿಸುತ್ತಿದೆ’ ಎಂದು ವಿಧಾನ ಪರಿಷತ್ ಸದಸ್ಯ ಕೆ.ಸಿ. ಕೊಂಡಯ್ಯ ತಿಳಿಸಿದರು.
ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಂಚಾಯಿತಿ ಚುನಾವಣೆ ಪಕ್ಷಾತೀತವಾಗಿ ನಡೆಯಬೇಕು. ಅದರಲ್ಲಿ ಯಾವ ಪಕ್ಷವೂ ಹಸ್ತಕ್ಷೇಪ ಮಾಡಬಾರದು. ಬಿಜೆಪಿಯ ಹಸ್ತಕ್ಷೇಪಕ್ಕೆ ಸಂಬಂಧಿಸಿದಂತೆ ಈಗಾಗಲೇ ಚುನಾವಣಾ ಆಯೋಗಕ್ಕೆ ದೂರು ಕೊಡಲಾಗಿದೆ’ ಎಂದು ಹೇಳಿದರು.
‘ವಾಸ್ತವದಲ್ಲಿ ಬಿಜೆಪಿಗೆ ಪಂಚಾಯಿತಿ ಚುನಾವಣೆ ನಡೆಸುವ ಆಸಕ್ತಿಯೇ ಇರಲಿಲ್ಲ. ನಾನು ಸೇರಿದಂತೆ ಇತರೆ ಹಿರಿಯ ಸದಸ್ಯರು ನ್ಯಾಯಾಲಯದ ಮೊರೆ ಹೋಗಿದ್ದರಿಂದ ಚುನಾವಣೆ ನಡೆಸಲಾಗುತ್ತಿದೆ. ಈಗ ಕೇಡರ್ ಪಕ್ಷ ಮಾಡಲು ಪಂಚಾಯಿತಿ ಚುನಾವಣೆಗೆ ಬಿಜೆಪಿ ಕಾರ್ಯಕರ್ತರನ್ನು ನಿಲ್ಲಿಸುತ್ತಿದೆ. ಆದರೆ, ಕಾಂಗ್ರೆಸ್ ಪಕ್ಷ ಭಿನ್ನವಾದುದು. ಪಕ್ಷ ತಳಮಟ್ಟದಲ್ಲಿ ಕಾರ್ಯಕರ್ತರನ್ನು ಹೊಂದಿದೆ. ಇತ್ತೀಚಿನ ದಿನಗಳಲ್ಲಿ ಪಕ್ಷ ಕಾರ್ಯಕರ್ತರನ್ನು ಕಡೆಗಣಿಸುತ್ತಿದೆ ಎಂಬ ಭಾವನೆ ಇದೆ. ಅದು ದೂರವಾಗಬೇಕು’ ಎಂದರು.
‘ಅಧಿಕಾರ ಹೆಚ್ಚು ವಿಕೇಂದ್ರೀಕರಣವಾಗಬೇಕು. ಪಂಚಾಯಿತಿಗಳಿಗೆ ಇನ್ನಷ್ಟು ಅಧಿಕಾರ, ಸೌಲಭ್ಯ ಕೊಡಬೇಕು. ಇತ್ತೀಚಿನ ವರ್ಷಗಳಲ್ಲಿ ಶಿಕ್ಷಿತ ಯುವಕರು ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಜನ ಅಂಥವರನ್ನು ಆಯ್ಕೆ ಮಾಡಿ ಕಳುಹಿಸಬೇಕು. ಹಿಂದೆಲ್ಲ ಪಂಚಾಯಿತಿ ಚುನಾವಣೆಗಳಲ್ಲಿ ರಕ್ತಪಾತವಾಗುತ್ತಿತ್ತು. ಪಂಚಾಯಿತಿ ವ್ಯವಸ್ಥೆಗೆ ತಿದ್ದುಪಡಿ ತಂದ ನಂತರ ಪಕ್ಷಾತೀತವಾಗಿ ಚುನಾವಣೆಗಳು ನಡೆಯುತ್ತಿರುವುದರಿಂದ ಅದು ನಿಂತಿದೆ’ ಎಂದು ಹೇಳಿದರು.
ಮುಖಂಡರಾ ಮೊಹಮ್ಮದ್ ಇಮಾಮ್ ನಿಯಾಜಿ, ವೆಂಕಟರಾವ ಘೋರ್ಷಡೆ, ಎಂ.ಸಿ. ವೀರಸ್ವಾಮಿ, ವಿ. ಸೋಮಪ್ಪ ಇದ್ದರು.
‘ಹಿರಿಯ ಸದಸ್ಯನಾಗಿ ಕ್ಷಮೆ ಕೇಳುವೆ’
‘ಇತ್ತೀಚೆಗೆ ವಿಧಾನ ಪರಿಷತ್ತಿನಲ್ಲಿ ನಡೆದ ಘಟನೆ ತಲೆತಗ್ಗಿಸುವಂಥದ್ದು. ಅದಕ್ಕೆ ಬಿಜೆಪಿಯೇ ನೇರ ಹೊಣೆ. ಆದರೆ, ಆ ಘಟನೆಗೆ ಸಂಬಂಧಿಸಿದಂತೆ ಮೇಲ್ಮನೆಯ ಹಿರಿಯ ಸದಸ್ಯನಾಗಿ ಇಡೀ ರಾಜ್ಯದ ಕ್ಷಮೆ ಕೇಳುವೆ’ ಎಂದು ಕೆ.ಸಿ. ಕೊಂಡಯ್ಯ ಹೇಳಿದರು.
‘ಬಿಜೆಪಿ ಹಿಂಬಾಗಿಲಿನ ಮೂಲಕ ಸಭಾಪತಿಯವರನ್ನು ದೂರವಿಟ್ಟು ಮೇಲ್ಮನೆ ನಡೆಸಲು ಮುಂದಾಗಿತ್ತು. ಅದು ಸಂವಿಧಾನ ವಿರೋಧಿ ನಡೆ. ಎರಡೂ ಕಡೆಯವರು ಪರಸ್ಪರ ವಿರೋಧಿಸಿದ್ದರಿಂದ ನಡೆಯಬಾರದ ಘಟನೆ ನಡೆದು ಹೋಯಿತು. ಚಿಕ್ಕ ಜಿಲ್ಲೆಗಳಾದರೆ ಅಭಿವೃದ್ಧಿಗೆ ಅನುಕೂಲವಾಗುತ್ತದೆ’ ಎಂದು ವಿಜಯನಗರ ಜಿಲ್ಲೆ ರಚನೆಯ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.