ADVERTISEMENT

ಜಿಂದಾಲ್‌ಗೆ ಭೂಮಿ ಕೊಟ್ಟರೆ ಸುಮ್ಮನಿರಲ್ಲ: ಸಾಲಿ ಸಿದ್ದಯ್ಯ ಸ್ವಾಮಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 29 ಮೇ 2019, 12:03 IST
Last Updated 29 ಮೇ 2019, 12:03 IST
   

ಹೊಸಪೇಟೆ: ‘ತೋರಣಗಲ್‌ ಸಮೀಪದ ಜಿಂದಾಲ್‌ ಕಂಪೆನಿಗೆ ರಾಜ್ಯ ಸರ್ಕಾರವು 3,660 ಎಕರೆ ಭೂಮಿ ಪರಭಾರೆ ಮಾಡಲು ಹೊರಟಿರುವುದು ಸರಿಯಾದ ಕ್ರಮವಲ್ಲ. ಈ ನಿರ್ಧಾರದಿಂದ ಸರ್ಕಾರ ಕೂಡಲೇ ಹಿಂದೆ ಸರಿಯಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಬಿಜೆಪಿ ಮುಖಂಡ ಸಾಲಿ ಸಿದ್ದಯ್ಯ ಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

‘ಜಿಂದಾಲ್‌ಗೆ ಪ್ರತಿ ಎಕರೆ ಭೂಮಿಯನ್ನು ₹1.5 ಲಕ್ಷಕ್ಕೆ ಕೊಡಲು ಸರ್ಕಾರ ತೀರ್ಮಾನಿಸಿದೆ. ಅದಕ್ಕೆ ಸ್ವತಃ ಕಾಂಗ್ರೆಸ್ಸಿನ ಹಿರಿಯ ಮುಖಂಡ ಎಚ್‌.ಕೆ. ಪಾಟೀಲ ಅವರೇ ವಿರೋಧ ವ್ಯಕ್ತಪಡಿಸಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಸಚಿವ ಡಿ.ಕೆ. ಶಿವಕುಮಾರ ಅವರು ಬಿಟ್ಟರೆ ಯಾರೊಬ್ಬರೂ ಬೆಂಬಲ ವ್ಯಕ್ತಪಡಿಸಿಲ್ಲ. ಸಾಕಷ್ಟು ವಿರೋಧ ಇರುವಾಗ ಕಡಿಮೆ ಬೆಲೆಯಲ್ಲಿ ಸಾವಿರಾರು ಎಕರೆ ಭೂಮಿ ಮಾರಾಟಕ್ಕೆ ಮುಂದಾಗಿರುವುದು ಸರಿಯಲ್ಲ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಅಕ್ರಮ ಸಂಪತ್ತಿಗೆ ಸಂಬಂಧಿಸಿದಂತೆ ಸಚಿವ ಡಿ.ಕೆ. ಶಿವಕುಮಾರ ಅವರು ಈಗಾಗಲೇ ಐ.ಟಿ. ಬಲೆಯಲ್ಲಿ ಸಿಲುಕಿಕೊಂಡಿದ್ದಾರೆ. ಈಗ ಜಿಂದಾಲ್‌ಗೆ ಭೂಮಿ ಮಾರಾಟ ಮಾಡಿ ಇನ್ನೊಂದು ಅಕ್ರಮವೆಸಗಲು ಮುಂದಾಗಿದ್ದಾರೆ. ಅಂದಹಾಗೆ, ಜಿಂದಾಲ್‌ ಎಂದೂ ಕನ್ನಡಿಗರ ಹಿತಕ್ಕಾಗಿ ಕೆಲಸ ನಿರ್ವಹಿಸಿಲ್ಲ. ಉನ್ನತ ಹುದ್ದೆಗಳಲ್ಲಿ ಉತ್ತರ ಭಾರತದವರನ್ನು ನೇಮಿಸಿಕೊಂಡಿದೆ. ಕೆಳಹಂತದ ಗುತ್ತಿಗೆ ಆಧಾರಿತ ನೌಕರಿಗಳಲ್ಲಿ ಸ್ಥಳೀಯರನ್ನು ನೇಮಿಸಿಕೊಂಡು ಅನ್ಯಾಯವೆಸಗಿದೆ’ ಎಂದು ಆರೋಪಿಸಿದರು.

ADVERTISEMENT

‘ಜಿಂದಾಲ್‌ನಲ್ಲಿ ಸ್ಥಳೀಯರು ಎಷ್ಟಿದ್ದಾರೆ, ಉತ್ತರ ಭಾರತೀಯರು ಎಷ್ಟು ಜನ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಕಂಪೆನಿಯೇ ಬಹಿರಂಗಪಡಿಸಲಿ. ಯಾವುದೇ ಭದ್ರತೆಯಿಲ್ಲದೆ ಸ್ಥಳೀಯರನ್ನು ದುಡಿಸಿಕೊಳ್ಳುತ್ತಿದೆ. ಕನ್ನಡವನ್ನು ಸಂಪೂರ್ಣವಾಗಿ ಕಡೆಗಣಿಸಿ ಕನ್ನಡ ವಿರೋಧಿ ನೀತಿ ಅನುಸರಿಸುತ್ತಿದೆ. ಕನ್ನಡಿಗರನ್ನು ವಂಚಿಸುತ್ತ ಬಂದಿರುವ ಈ ಕಂಪೆನಿಗೆ ಯಾವುದೇ ಕಾರಣಕ್ಕೂ ಭೂಮಿ ಕೊಡಬಾರದು. ಒಂದುವೇಳೆ ಕೊಟ್ಟರೆ ಬೀದಿಗಿಳಿದು ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.