ADVERTISEMENT

ದುಷ್ಟ ಕಾಂಗ್ರೆಸ್ ಸರ್ಕಾರ: ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2024, 15:20 IST
Last Updated 28 ಏಪ್ರಿಲ್ 2024, 15:20 IST
   

ಹೊಸಪೇಟೆ: ‘ರೈತರಿಗೆ ಬರ ಪರಿಹಾರ ನೀಡದ, ಹೆಣ್ಣುಮಕ್ಕಳಿಗೆ ರಕ್ಷಣೆ ನೀಡದ ದುಷ್ಟ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ವಾಗ್ದಾಳಿ ನಡೆಸಿದರು.

ಹೊಸಪೇಟೆಯಲ್ಲಿ ಭಾನುವಾರ ಆಯೋಜಿಸಿದ್ದ ಬಿಜೆಪಿ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ‘ರಾಜ್ಯ ಕಾಂಗ್ರೆಸ್ ಸರ್ಕಾರ ಬರ ಪರಿಹಾರ ಕೊಟ್ಟಿಲ್ಲ. ರೈತರ ಕಣ್ಣೊರೆಸುವ ಪ್ರಯತ್ನ ಮಾಡಲಿಲ್ಲ. ಅಲ್ಪಸಂಖ್ಯಾತರ ತುಷ್ಟೀಕರಣವನ್ನು ಮಾತ್ರ ಚನ್ನಾಗಿ ಮಾಡುತ್ತಿದೆ. ಬೆಳಗಾವಿ ಅಧಿವೇಶನದ ಸಂದರ್ಭದಲ್ಲೇ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಸಿ ಹಲ್ಲೆ ಮಾಡಲಾಯಿತು. ಅಲ್ಲಿಗೆ ಮುಖ್ಯಮಂತ್ರಿ ಹೋಗಲಿಲ್ಲ, ಸಾಂತ್ವನ ಹೇಳಲಿಲ್ಲ. ವಿಧಾನಸೌಧದಲ್ಲಿ ಪಾಕ್‌ ಪರ ಘೋಷಣೆ ಕೂಗಿದಾಗ ದೇಶದ್ರೋಹಿಗಳನ್ನು ಬಂಧಿಸಲಿಲ್ಲ. ನೇಹಾ ಹತ್ಯೆಯಾದಾಗ ಸರ್ಕಾರ ಖಂಡನೆ ಮಾಡಲಿಲ್ಲ. ಕಾಂಗ್ರೆಸ್‌ನ ತುಷ್ಟೀಕರಣ ರಾಜಕಾರಣ ಎಲ್ಲಿಗೆ ಬಂದಿದೆ ಎಂದರೆ, ಮಹಿಳೆಯರಿಗೆ ಸುರಕ್ಷತೆ ಇಲ್ಲವಾಗಿದೆ. ದುಷ್ಟ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ’ ಎಂದು ಆರೋಪಿಸಿದರು.

‘ರಾಜ್ಯದಲ್ಲಿ 900 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್‌ ಸರ್ಕಾರ ಪರಿಹಾರ ನೀಡಲಿಲ್ಲ. ಆದರೆ, ಮೋದಿ ಸರ್ಕಾರ ಮೂರುವರೆ ಸಾವಿರ ಕೋಟಿಯಷ್ಟ ಬರ ಪರಿಹಾರ ಬಿಡುಗಡೆ ಮಾಡಿದೆ. ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದಾಗ ಯಡಿಯೂರಪ್ಪ ಅವರೂ ಪರಿಹಾರ ನೀಡಿದ್ದಾರೆ. ಈ ಸರ್ಕಾರ ಗ್ಯಾರೆಂಟಿಗಳಿಗಾಗಿ ಎಸ್ಸಿಎಸ್‌ಟಿ ಅನುದಾನಕ್ಕೇ ಕೈಹಾಕಿದೆ‘ ಎಂದು ಆರೋಪಿಸಿದರು.

ADVERTISEMENT

‘ಕಾಂಗ್ರೆಸ್‌ ಪಕ್ಷ ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತುತ್ತದೆ. ವೀರೇಂದ್ರ ಪಾಟೀಲರಿಗೆ ಕಾಂಗ್ರೆಸ್‌ ಮಾಡಿದ ಮೋಸವನ್ನು ಯಾರೂ ಮರೆತಿಲ್ಲ‘ ಎಂದೂ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.