ಹರಪನಹಳ್ಳಿ: ಕೊಂಬುಗಳಿಗೆ ನವಿಲು ಗರಿ, ಕೊರಳಲ್ಲಿ ಘಂಟೆ, ಮುತ್ತಿನಹಾರ, ಹಣೆಗೆ ಹೂವು ಕಟ್ಟಿಕೊಂಡು ಮೈ ಮೇಲೆ ಅರಿಶಿಣ, ಕುಂಕುಮ ಬಣ್ಣದ ಲೇಪನದಿಂದ ಕಂಗೊಳಿಸುತ್ತಾ ಬೀದಿಗಳಲ್ಲಿ ಅತ್ತಿಂದಿತ್ತ ಓಡುತ್ತಿದ್ದ ಎಮ್ಮೆಗಳು ನೆರೆದವರನ್ನು ಪುಳಕಗೊಳಿಸಿದವು.
ಪಟ್ಟಣದ ಗೌಳಿಗರ ಕುಟುಂಬಗಳು ದೀಪಾವಳಿಯ ಪಾಂಡವರ ಹಬ್ಬದ ಆಚರಣೆಯಲ್ಲಿ ತಮ್ಮ ಎಮ್ಮೆಗಳನ್ನು ಅಲಂಕರಿಸಿ ಅವುಗಳನ್ನು ಮಾರುಕಟ್ಟೆಯ ಬೀದಿಗಳಲ್ಲಿ ಓಡಿಸಿ, ಕುಣಿದು ಕುಪ್ಪಳಿಸುವಾಗ ಮಂಗಳವಾರ ಕಂಡುಬಂದ ದೃಶ್ಯವಿದು.
ಸಿಂಗಾರಿ ಎಮ್ಮೆಗಳನ್ನು ರಸ್ತೆಗೆ ಕರೆದುಕೊಂಡು ಬಂದ ಯುವಕರು ಅವುಗಳ ಮೇಲೆ ಹೂ ಮಳೆ ಸುರಿಸಿದರು. ಪಟಾಕಿ ಹೊಡೆದು, ಕೇಕೆ ಸಿಳ್ಳೆಯ ಮಳೆಗರಿದರೂ, ಅಲ್ಲಾಡದ ಎಮ್ಮೆಗಳು ತಮ್ಮ ಮಾಲೀಕನ್ನು ದಿಟ್ಟಿಸಿ ನೋಡುತ್ತಿದ್ದವು. ಅವು ನಿಂತಿದ್ದ ಸ್ಥಳದಲ್ಲಿಯೇ ಪಟಾಕಿ ಸಿಡಿಸಿದಾಗ ಎಮ್ಮೆಗಳು ಬೆದರಿದಂತೆ ಕಂಡುಬಂದರೂ ತನ್ನ ಮಾಲೀಕನ ಕೈ ಸನ್ನೆಯನ್ನೆ ಕೇಂದ್ರಿಕರಿಸಿದ್ದವು. ಮಾಲೀಕರು ಹುಯ್, ಹೊಯ್, ಸಿಕ್, ಟರ್, ಟ್ರ, ಬಾ, ಬಾ ಧ್ವನಿಗಳನ್ನು ಆಲಿಸುತ್ತಾ ಓಡಿಸುತ್ತಿದ್ದರು. ಅವರನ್ನೆ ಹಿಂಬಾಲಿಸುತ್ತಿದ್ದ ಎಮ್ಮೆಗಳು ಆತ ನಿಂತ ತಕ್ಷಣ, ಅವು ನಿಲ್ಲುತ್ತಿದ್ದವು.
ಮಾಲೀಕರು ತಮ್ಮ ಸ್ನೇಹಿತರ ಬಟ್ಟೆ ವ್ಯಾಪಾರ, ಚಿನ್ನಾಭರಣದ ಮಳಿಗೆ ಪ್ರವೇಶಿಸಿದರು. ಆಗ ಅವರನ್ನೆ ಬೆನ್ನತ್ತಿದ್ದ ಎಮ್ಮೆಗಳು, ಅಂಗಡಿಯೊಳಗೆ ಹೋಗಿ ಯಾವುದೇ ಅಪಾಯ ಮಾಡದೆ ಮರಳಿದವು. ಪುಟಾಣಿ ಬಾಲಕನೊಬ್ಬ ಒಂದು ತಿಂಗಳ ಕರುವನ್ನು ಜನರ ನಡುವೆ ಓಡಿಸಿಕೊಂಡು ಬಂದು ಗಮನ ಸೆಳೆದ. ಪಟಾಕಿ ಸದ್ದು, ಕೇಕೆ, ಸಿಳ್ಳೆಗಳ ನಡುವೆ ಎರಡು ತಾಸು ನಡೆದ ಎಮ್ಮೆ ಬೆದರಿಸುವ ಸ್ಪರ್ಧೆಯ ಈ ಕ್ಷಣಗಳನ್ನು ನೆರೆದವರು ಕಣ್ತುಂಬಿಕೊಂಡು ಖುಷಿಪಟ್ಟರು.
ಗೌಳಿಗ ನೂರಾರು ಎಮ್ಮೆಗಳನ್ನು ಒಟ್ಟಾಗಿ ಸೇರಿಸಿ ಎಲ್ಲರೂ ಬನ್ನಿಮರದ ಮಹಾಕಾಳಿ ಕಟ್ಟೆಗೆ ತೆರಳಿ ಕುಟುಂಬ ಸಮೇತರಾಗಿ ಪೂಜೆ ಸಲ್ಲಿಸಿದರು. ಅಲ್ಲಿ ಎಮ್ಮೆಗಳಿಂದ ಕಟ್ಟೆ ಎದುರು ಬೈಠಕ್ (ಮಂಡಿಯೂರಿಸುವುದು) ಮಾಡಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ತಮ್ಮ ಮನೆಗಳಿಗೆ ತೆರಳಿದರು.
ಪುರಸಭೆ ಸದಸ್ಯ ಗೌಳಿ ವಿನಯ್ ಕುಮಾರ, ಈಶಪ್ಪ, ನಂದೀಶ, ನಿಂಗಪ್ಪ, ಮಲ್ಲಿಕಾರ್ಜುನ್, ಮಾಲತೇಶ್, ಗೌರಿಶಂಕರ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.