ADVERTISEMENT

ಸಂಡೂರು ಉಪ ಚುನಾವಣೆ: ಮತದಾನ ಮುಗಿದ ಬಳಿಕ ಸೋಲು–ಗೆಲುವಿನ ಲೆಕ್ಕಾಚಾರ

ಪ್ರತಿಕೂಲ–ಅನುಕೂಲವಾಗುವ ಅಂಶಗಳ ಕುರಿತು ನಾಯಕರು, ಜನರ ಚರ್ಚೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2024, 4:49 IST
Last Updated 15 ನವೆಂಬರ್ 2024, 4:49 IST
<div class="paragraphs"><p>ಅನ್ನಪೂರ್ಣ ತುಕಾರಾಂ,&nbsp;ಬಂಗಾರು ಹನುಮಂತು&nbsp;</p></div>

ಅನ್ನಪೂರ್ಣ ತುಕಾರಾಂ, ಬಂಗಾರು ಹನುಮಂತು 

   

ಸಂಡೂರು: ಉಪ ಚುನಾವಣೆಗೆ ಮತದಾನ ನಡೆದ ಬೆನ್ನಲ್ಲೇ ಸಂಡೂರು ವಿಧಾನಸಭಾ ಕ್ಷೇತ್ರದಾದ್ಯಂತ ಸೋಲು-ಗೆಲುವಿನ ಲೆಕ್ಕಾಚಾರಗಳು ಶುರುವಾಗಿದೆ. ಯಾವ ಅಂಶಗಳು ತಮಗೆ ಪ್ಲಸ್ ಅಥವಾ ಮೈನಸ್, ಎಷ್ಟು ಅಂತರದಲ್ಲಿ ಗೆಲ್ಲಬಹುದು ಎಂದು ಕೈ-ಕಮಲ ಪಾಳೆಯದಲ್ಲಿ ಅವಲೋಕನಗಳು ನಡೆದರೆ, ಸಾರ್ವಜನಿಕರ ವಲಯದಲ್ಲೂ ಚರ್ಚೆ ಜೋರಾಗಿದೆ.

ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,36,348 ಮತದಾರರಿದ್ದು ಈ ಬಾರಿ 1,80,189 ಮತಗಳು‌ ಚಲಾವಣೆಯಾಗಿವೆ. 1,17,885 ಪುರುಷರ ಪೈಕಿ  99,922 ಮತದಾನ ಮಾಡಿದ್ದಾರೆ. 1,18,435 ಮಹಿಳೆಯರ ಪೈಕಿ, ಮತದಾನದ ಮಾಡಿದವರು 88,255 ಮಾತ್ರ. ಈ ಅಂಶ ಕಾಂಗ್ರೆಸ್‌ ತಲೆ ಕೆಡಿಸಿದೆ. 

ADVERTISEMENT

ಈ ಬಾರಿ ಹೆಚ್ಚಿನ ಮತದಾನವಾಗಲಿದೆ ಎಂಬ ಎರಡೂ ಪಕ್ಷಗಳ ನಿರೀಕ್ಷೆ ಹುಸಿಯಾಗಿದೆ. 2023ರ ವಿಧಾನಸಭಾ ಚುನಾವಣೆಗೆ ಶೇ‌ 77.08ರಷ್ಟು ಮತದಾನ ಆಗಿದ್ದರೆ ಈ ಉಪ ಚುನಾವಣೆಯಲ್ಲಿ ಶೇ 76.24 ರಷ್ಟು ಮಾತ್ರ ಮತದಾನವಾಗಿದೆ. ಇದು ಗೆಲುವಿನ ಅಂತರವನ್ನು ನಿರ್ಧರಿಸಲಿದೆ ಎಂಬ ಮಾತುಗಳು ಕೇಳಿಬಂದಿವೆ. 

ಗೆಲುವಿನ ಲೆಕ್ಕಾಚಾರದಲ್ಲಿ ಕೈ ಪಾಳೆಯ: ಹಿಂದೆಂದೂ ಕಾಣದ ಚುನಾವಣೆಯನ್ನು ಕ್ಷೇತ್ರದ ಜನ ಈ ಬಾರಿ ನೋಡಿದ್ದಾರೆ‌. ಕ್ಷೇತ್ರದ ನಾಯಕರುಗಳಿಗಷ್ಟೆ ಸೀಮಿತವಾಗಿರುತ್ತಿದ್ದ ಚುನಾವಣೆಗಳು ಈ ಬಾರಿ ಇಡೀ ರಾಜ್ಯದ ಕುತೂಹಲವನ್ನು ಹುಟ್ಟಿಸಿದೆ. ಮುಖ್ಯ ಮಂತ್ರಿ ಸಿದ್ಧರಾಮಯ್ಯನವರು ಮೂರು ದಿನಗಳ ಕಾಲ ಕ್ಷೇತ್ರದಲ್ಲಿ ನಡೆಸಿದ ಅಬ್ಬರದ ಪ್ರಚಾರ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕ್ಷೇತ್ರದಲ್ಲಿ ಸಂಚರಿಸಿದ್ದು, ಪಕ್ಷದ ಐದು ಗ್ಯಾರಂಟಿ ಯೋಜನೆಗಳು, ಜಾತಿವಾರು ಮತಗಳ ಲೆಕ್ಕಾಚಾರ, ಯಾವ ಬೂತ್‌ಗಳಲ್ಲಿ ಎಷ್ಟು ಮತದಾನವಾಗಿದೆ. ಅದರಲ್ಲಿ ತಮಗೆ ಎಷ್ಟು ಮತ ಬಂದಿರಬಹುದು ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ ತೊಡಗಿದೆ. 

ಒಂದು ಅವಕಾಶದ ನಿರೀಕ್ಷೆಯಲ್ಲಿ ಬಿಜೆಪಿ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅವರ ಮಗ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ, ಬಿ.ವೈ ರಾಘವೇಂದ್ರ ಲಿಂಗಾಯತ ಮತಗಳನ್ನು ಕ್ರೋಢೀಕರಿಸಿದ್ದು ಸಹಕಾರಿ ಆಗಲಿದೆ.  ಜನಾರ್ದನ ರೆಡ್ಡಿ ಆಗಮನದ ಪರಿಣಾಮಗಳು ಏನಾಗಬಹುದು ಎಂಬ ಚರ್ಚೆಗಳು ಬಿಜೆಪಿ ಪಾಳಯದಲ್ಲಿ ನಡೆಯುತ್ತಿದೆ. ಯಡಿಯೂರಪ್ಪ ಮತ್ತು ವಿಜಯೇಂದ್ರ ಆಗಮನ ಪ್ಲಸ್‌ ಆಗಲಿದೆ ಎಂದು ಪಕ್ಷ ಭಾವಿಸಿದೆ. 

ಒಳ ಮೀಸಲಾತಿ ವಿಚಾರ ಸಾಕಷ್ಟು ಪ್ರಭಾವ ಬೀರಿ ದಲಿತರ ಮತ ಬಿಜೆಪಿಯತ್ತ ವಾಲಿವೆ ಎಂದು ಕೆಲ ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ದಲಿತ  ನಾಯಕರಾದ ಎನ್.ಮಹೇಶ್, ಛಲವಾದಿ ನಾರಾಯಣ ಸ್ವಾಮಿ ಇತರರು ನಡೆಸಿದ ಸಭೆಗಳು ಪರಿಣಾಮ ಬೀರಿರಬಹುದು ಎಂದು ಅಂದಾಜಿಸುವ ಕಾರ್ಯಗಳು ನಡೆಯುತ್ತಿವೆ.  ಕಾಂಗ್ರೆಸ್ ಪಕ್ಷದಲ್ಲೇ ಟಿಕೆಟ್ ಗಾಗಿ ಉಂಟಾದ ಒಳ ಮುನಿಸು, ಕೆ.ಎಸ್.ದಿವಾಕರ್ ಹಿಡಿತದಲ್ಲಿರುವ ಮತಗಳು ಬಿಜೆಪಿಗೆ ಚಲಾವಣೆಯಾಗಲಿವೆ. ಹೀಗೆ ಯಾವುದೇ ಕೋನದಲ್ಲಿ ನೋಡಿದರೂ ಬಿಜೆಪಿ ಗೆಲುವು ಶತಸಿದ್ಧ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ ಬಿಜೆಪಿ ನಾಯಕರು.

ಗ್ಯಾರಂಟಿ ಯೋಜನೆಯ ಫಲಾನುಭವಿ ಮಹಿಳೆಯರೇ ಕಾಂಗ್ರೆಸ್ ನಿಂದ ವಿಮುಖರಾಗಿರುವುದಕ್ಕೆ ಕಡಿಮೆ ಸಂಖ್ಯೆಯಲ್ಲಿ‌ಚಲಾವಣೆಯಾದ ಮತಗಳೇ ಉದಾಹರಣೆ ಎನ್ನುವ ಬಿಜೆಪಿಗರು ಯುವ ಸಮೂಹದ ಸಂಪೂರ್ಣ ಮತಗಳು ಬಿಜೆಪಿಗೆ‌ ಹರಿದು ಬಂದಿವೆ‌‌ ಎನ್ನುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.