ಹೊಸಪೇಟೆ: ದಶಕದಿಂದ ನನೆಗುದಿಗೆ ಬಿದ್ದಿದ್ದ ‘ವಿಜಯನಗರ ಜಿಲ್ಲೆ’ ರಚನೆ ಮಾಡಬೇಕೆಂಬ ಹೋರಾಟ ಏಕಾಏಕಿ ಚುರುಕು ಪಡೆದಿರುವುದೇಕೇ? ಅದರ ಹಿಂದಿದೆ ಯಾವ್ಯಾವ ಲೆಕ್ಕಾಚಾರ?
ಇಂತಹ ಪ್ರಶ್ನೆಗಳು ಸಾರ್ವಜನಿಕರನ್ನು ಬಹುವಾಗಿ ಕಾಡುತ್ತಿವೆ. ಅದಕ್ಕೆ ನೇರ ಉತ್ತರ ಬರಲಿರುವ ವಿಜಯನಗರ ಕ್ಷೇತ್ರದ ಉಪಚುನಾವಣೆ. ಈ ಕಾರಣಕ್ಕಾಗಿಯೇ ಈ ವಿಷಯ ಮತ್ತೆ ಮುನ್ನಲೆಗೆ ಬಂದಿದೆ ಎನ್ನುವುದು ಹಲವರ ಅಭಿಪ್ರಾಯವಾಗಿದೆ.
2007ರಲ್ಲಿ ಜಿಲ್ಲೆ ರಚನೆಗೆ ಸಂಬಂಧಿಸಿದಂತೆ ನಿರಂತರವಾಗಿ ಹೋರಾಟಗಳು ನಡೆದಿದ್ದವು. ಬಳಿಕ ಆ ವಿಷಯ ನನೆಗುದಿಗೆ ಬಿದ್ದಿತ್ತು. ಈಗ ಪುನಃ ಅದರ ಬಗ್ಗೆ ಸೊಲ್ಲು ಎತ್ತಲಾಗುತ್ತಿದೆ. ಅದರಲ್ಲೂ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಈ ವಿಷಯವನ್ನೇ ಮುಂದಿಟ್ಟುಕೊಂಡು ಧ್ವನಿ ಎತ್ತುತ್ತಿವೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ನಂತರ ಸ್ಪೀಕರ್ ಅವರಿಂದ ಅನರ್ಹಗೊಂಡಿರುವ ಆನಂದ್ ಸಿಂಗ್ ಈ ವಿಷಯದ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಮಠ, ಮಂದಿರಗಳಿಗೆ ಭೇಟಿ ಕೊಟ್ಟು ಸ್ವಾಮೀಜಿಗಳ ಆಶೀರ್ವಾದ ಪಡೆದುಕೊಂಡಿರುವ ಅವರು, ಸ್ಥಳೀಯ ಸಂಘ ಸಂಸ್ಥೆಗಳ ಪ್ರಮುಖರೊಂದಿಗೆ ಬುಧವಾರ ಬೆಂಗಳೂರಿಗೆ ನಿಯೋಗ ಕರೆದೊಯ್ದು, ಜಿಲ್ಲೆ ರಚನೆ ಮಾಡಬೇಕೆಂಬ ಹಕ್ಕೊತ್ತಾಯವನ್ನು ಮುಖ್ಯಮಂತ್ರಿಗೆ ಮಾಡಿದ್ದಾರೆ.
ಕಾಂಗ್ರೆಸ್ ಕೂಡ ಸಕ್ರಿಯವಾಗಿದ್ದು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರೊಂದಿಗೆ ಹೋರಾಟ ನಡೆಸಿ, ಮನವಿ ಪತ್ರ ಸಲ್ಲಿಸಿದೆ. ಇದರೊಂದಿಗೆ ಆನಂದ್ ಸಿಂಗ್ ಅವರ ತಂತ್ರಕ್ಕೆ ಕಾಂಗ್ರೆಸ್ ಪ್ರತಿತಂತ್ರ ಹೆಣೆಯುತ್ತಿದೆ. ಅಲ್ಲದೇ ಸಿಂಗ್ ವಿರುದ್ಧ ಆ ಪಕ್ಷದ ಮುಖಂಡರು ಸಮಯ ಸಿಕ್ಕಾಗಲೆಲ್ಲ ಮುಗಿ ಬೀಳುತ್ತಿದ್ದಾರೆ.
'ಸತತ ಮೂರು ಸಲ ಗೆದ್ದರೂ ಆನಂದ್ ಸಿಂಗ್ ಕ್ಷೇತ್ರದಲ್ಲಿ ಯಾವುದೇ ಕೆಲಸ ಮಾಡಿಲ್ಲ. ಜನರಿಗೆ ಅವರ ಬಗ್ಗೆ ಬಹಳ ಸಿಟ್ಟಿದೆ. ಹಿಂದೆ ಮಂತ್ರಿಯಾದಾಗ ಜಿಲ್ಲೆ ಮಾಡುವ ಎಲ್ಲ ಅವಕಾಶಗಳಿದ್ದವು. ಅದನ್ನು ಕೈಚೆಲ್ಲಿದರು. ವಿಜಯನಗರ ಜಿಲ್ಲೆ ಹೆಸರಿನಲ್ಲಿ ಮತ್ತೆ ರಾಜಕೀಯವಾಗಿ ಮುಂಚೂಣಿಗೆ ಬರಲು ಯತ್ನಿಸುತ್ತಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ನಿಂಬಗಲ್ ರಾಮಕೃಷ್ಣ ಆರೋಪಿಸಿದ್ದಾರೆ.
‘ಜಿಂದಾಲ್‌ಗೆ ಭೂ ಪರಭಾರೆ ಮಾಡಬಾರದು, ವಿಜಯನಗರ ಜಿಲ್ಲೆ ಮಾಡಬೇಕು ಎಂಬ ಎರಡು ಪ್ರಮುಖ ಬೇಡಿಕೆಗಳೊಂದಿಗೆ ಆನಂದ್ ಸಿಂಗ್ ಅವರ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅದರಲ್ಲಿ ಯಾವುದೇ ರಾಜಕೀಯ ಇಲ್ಲ’ ಎನ್ನುತ್ತಾರೆ ಸಿಂಗ್ ಬೆಂಬಲಿಗರು.
ಪೂರ್ವಸಿದ್ಧತೆಯ ಕೊರತೆ:
ಜಿಲ್ಲೆ ರಚನೆ ಕುರಿತು ಹೋರಾಟಕ್ಕೆ ಮುಂದಾದರೂ ಇಲ್ಲಿಯವರೆಗೆ ಜಿಲ್ಲೆಯ ಪಶ್ಚಿಮ ತಾಲ್ಲೂಕುಗಳ ಎಲ್ಲ ಜನಪ್ರತಿನಿಧಿಗಳು, ಹೋರಾಟಗಾರರ ಸಭೆಯೇ ನಡೆದಿಲ್ಲ. ವಿಜಯನಗರ ಕ್ಷೇತ್ರದಲ್ಲಿ ಮಾತ್ರ ಅದರ ಬಗ್ಗೆ ಬಲವಾದ ಕೂಗಿದೆ. ಕಂಪ್ಲಿ, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಕೊಟ್ಟೂರು ಹಾಗೂ ಹರಪನಹಳ್ಳಿಯಲ್ಲಿ ಆ ಕೂಗು ಕೇಳಿ ಬಂದಿಲ್ಲ. ಹೀಗಾಗಿ ಜಿಲ್ಲೆ ರಚನೆ ಬೇಡಿಕೆ ದೊಡ್ಡ ಮಟ್ಟದ ಹೋರಾಟದ ಸ್ವರೂಪ ಪಡೆದುಕೊಳ್ಳಲು ವಿಫಲವಾಗಿದೆ ಎನ್ನುತ್ತಾರೆ ಸಾರ್ವಜನಿಕರು.
‘ಜಿಲ್ಲಾ ಕೇಂದ್ರ ಬಹಳ ದೂರದಲ್ಲಿರುವ ಕಾರಣ ಪಶ್ಚಿಮ ತಾಲ್ಲೂಕುಗಳ ಎಲ್ಲರಿಗೂ ವಿಜಯನಗರ ಜಿಲ್ಲೆ ರಚನೆ ಆಗಬೇಕೆಂಬ ಮನಸ್ಸಿದೆ. ಆದರೆ, ಎಲ್ಲ ತಾಲ್ಲೂಕುಗಳ ಜನಪ್ರತಿನಿಧಿಗಳು, ಸ್ವಾಮೀಜಿಗಳು, ಹೋರಾಟಗಾರರನ್ನು ಒಂದೇ ವೇದಿಕೆಗೆ ತಂದರೆ ಸರ್ಕಾರದ ಮೇಲೆ ಹೆಚ್ಚಿನ ಒತ್ತಡ ಬೀಳಲು ಸಾಧ್ಯ. ಆದರೆ, ಆ ನಿಟ್ಟಿನಲ್ಲಿ ಪ್ರಯತ್ನಗಳೇ ಆಗಿಲ್ಲ’ ಎನ್ನುತ್ತಾರೆ ಹಗರಿಬೊಮ್ಮನಹಳ್ಳಿ ನಿವಾಸಿ ರಾಜೇಶ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.