ಬಳ್ಳಾರಿ: ಬಳ್ಳಾರಿ ನಗರದ ರೂಪನಗುಡಿ ರಸ್ತೆಯ ವಾಲ್ಮೀಕಿ ಬೀದಿಯಲ್ಲಿರುವ ಮನೆಯೊಂದರ ಮೇಲೆ ದಾಳಿ ನಡೆಸಿರುವ ಸೈಬರ್, ಆರ್ಥಿಕ, ಮಾದಕ ದ್ರವ್ಯ (ಸಿಇಎನ್) ವಿಭಾಗದ ಪೊಲೀಸರು ₹19.10 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ ಪಡೆದಿದ್ದಾರೆ.
ದಾಳಿ ವೇಳೆ ಇಬ್ಬರು ಗಾಂಜಾ ಮಾರಾಟಗಾರರನ್ನು ಬಂಧಿಸಲಾಗಿದ್ದು, ಇನ್ನೂ ನಾಲ್ವರು ಪರಾರಿಯಾಗಿದ್ದಾರೆ. ನಗರದ ರಾಣಿತೋಟ ನಿವಾಸಿಯಾದ ವಾಹೀದ್ (38), ಪಿ. ಚಾಂದ್ ಭಾಷಾ (40) ಬಂಧಿತರು. ಮನೆಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ 19 ಕೆ.ಜಿಯಷ್ಟು ಗಾಂಜಾವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ರೂಪನಗುಡಿ ರಸ್ತೆಯ ಮನೆಯೊಂದರಲ್ಲಿ ಗಾಂಜಾವನ್ನು ಅಕ್ರಮವಾಗಿ ದಾಸ್ತಾನು ಮಾಡಿರುವ ಬಗ್ಗೆ ಸೈಬರ್ ಕ್ರೈಂ ವಿಭಾಗದ ಡಿಎಸ್‌ಪಿ ಸಂತೋಷ ಚವ್ಹಾಣ್ ಅವರಿಗೆ ಬುಧವಾರ ಖಚಿತ ಮಾಹಿತಿ ಲಭ್ಯವಾಗಿತ್ತು ಎನ್ನಲಾಗಿದ್ದು, ಅದರ ಆಧಾರದಲ್ಲಿ ಸಿಬ್ಬಂದಿಯ ತಂಡದೊಂದಿಗೆ ದಾಳಿ ನಡೆಸಲಾಗಿತ್ತು.
ಸಂತೋಷ ಚವ್ಹಾಣ ನೇತೃತ್ವದ ಪೊಲೀಸರ ತಂಡದಲ್ಲಿ ಇನ್ಸ್‌ಪೆಕ್ಟರ್ ರಮಾಕಾಂತ, ಪಿಎಸ್‌ಐ ವಲಿಬಾಷ, ಸಿಬ್ಬಂದಿಯಾದ ಸುರೇಶ, ತಿಪ್ಪೇರುದ್ರಪ್ಪ, ಸುಧಾಕರ್, ಹನುಮಂತರೆಡ್ಡಿ, ಕೆ. ಯಲ್ಲೇಶಿ, ವೆಂಕಟೇಶ ಜಿ., ಮಂಜುನಾಥ, ಶ್ರೀಧರ್ ಮತ್ತು ವಿಜಯಕುಮಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.