ADVERTISEMENT

ಬರ ಅಧ್ಯಯನ | ಅ. 7ಕ್ಕೆ ವಿಜಯನಗರ, ಬಳ್ಳಾರಿಗೆ ಕೇಂದ್ರ ತಂಡ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2023, 14:33 IST
Last Updated 4 ಅಕ್ಟೋಬರ್ 2023, 14:33 IST
<div class="paragraphs"><p>ಬರ (ಪ್ರಾತಿನಿಧಿಕ ಚಿತ್ರ)</p></div>

ಬರ (ಪ್ರಾತಿನಿಧಿಕ ಚಿತ್ರ)

   

ಬಳ್ಳಾರಿ: ಬರ ಪರಿಸ್ಥಿತಿ ಅಧ್ಯಯನಕ್ಕೆ ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಕೃಷಿ ಹಾಗೂ ಕೃಷಿಕರ ಕಲ್ಯಾಣ ಇಲಾಖೆ ಜಂಟಿ ಕಾರ್ಯದರ್ಶಿ ಅಜಿತ್‌ ಕುಮಾರ್ ಸಾಹು (ಐಎಎಸ್‌) ನೇತೃತ್ವದ ತಂಡದ ಮೂವರು ಅಧಿಕಾರಿಗಳು ಇದೇ 7ರಂದು ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.

ಗದಗ, ಕೊಪ್ಪಳ, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಪ್ರವಾಸ ಮಾಡುವ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹೆಚ್ಚುವರಿ ಸಲಹೆಗಾರ ಡಿ. ರಾಜಶೇಖರ ಅವರ ತಂಡದಲ್ಲಿ ಪಶು ಸಂಗೋಪನಾ ಇಲಾಖೆ ನಿರ್ದೇಶಕ ವಿ.ಆರ್‌. ಠಾಕ್ರೆ, ಗ್ರಾಮೀಣಾಭಿವೃದ್ಧಿ ಇಲಾಖೆ ಸಹಾಯಕ ಆಯುಕ್ತ ಮೋತಿರಾಂ ಅವರಿದ್ದಾರೆ. ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದ ನಿರ್ದೇಶಕ (ಕಂದಾಯ) ಕರೀಗೌಡ ಈ ತಂಡದ ಜತೆಯಲ್ಲಿರುತ್ತಾರೆ.

ADVERTISEMENT

ಬೆಂಗಳೂರಿಂದ ಗುರುವಾರ 5ರಂದು ವಿಮಾನದಲ್ಲಿ ಹುಬ್ಬಳ್ಳಿಗೆ ಆಗಮಿಸುವ ತಂಡ 6ರಂದು ಶುಕ್ರವಾರ ಗದಗ ಜಿಲ್ಲೆಯ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದ ಬಳಿಕ ಬರ ವೀಕ್ಷಣೆಗೆ ತೆರಳಲಿದೆ. ಆನಂತರ ಕೊಪ್ಪಳ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದು ಬೆಳೆ ವೀಕ್ಷಣೆ ನಡೆಸಲಿದೆ. ರಾತ್ರಿ ಮುನಿರಾಬಾದ್‌ನಲ್ಲಿ ತಂಡ ವಾಸ್ತವ್ಯ ಹೂಡಲಿದೆ.

7ರಂದು ಶನಿವಾರ ಬೆಳಿಗ್ಗೆ ವಿಜಯನಗರ ಜಿಲ್ಲೆಯ ಹೊಸಪೇಟೆ ಆಗಮಿಸಿ ವಿಜಯನಗರ ಜಿಲ್ಲಾಧಿಕಾರಿ ಹಾಗೂ ಬಳ್ಳಾರಿ ಜಿಲ್ಲಾಧಿಕಾರಿಯಿಂದ ಮಾಹಿತಿ ಸಂಗ್ರಹಿಸಲಿದೆ. ಬಳ್ಳಾರಿ ಜಿಲ್ಲಾಧಿಕಾರಿಗಳು ಸಿದ್ಧಪಡಿಸಿದ ವೇಳಾ ಪಟ್ಟಿಯಂತೆ ಸಂಡೂರು ತಾಲ್ಲೂಕಿನ ಕೆಲವು ಗ್ರಾಮಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿ ವೀಕ್ಷಿಸಲಿದೆ.

ಆನಂತರ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿಗೆ ಭೇಟಿ ನೀಡಿ ಮಳೆಬೆಳೆ ಪರಿಸ್ಥಿತಿ ಅಧ್ಯಯನ ಮಾಡಲಿದೆ. ರಾತ್ರಿ ಕೇಂದ್ರ ತಂಡದ ಸದಸ್ಯರು ಹೊಸಪೇಟೆಯಲ್ಲಿ ತಂಗಲಿದ್ದು, 8ರಂದು ರಸ್ತೆ ಮೂಲಕ ಬೆಂಗಳೂರಿಗೆ ಪ್ರಯಾಣಿಸಲಿದೆ.

ಸಂಡೂರು ತಾಲ್ಲೂಕಿನಲ್ಲಿ ಯಾವ ಸ್ಥಳಗಳಿಗೆ ಕೇಂದ್ರ ತಂಡವನ್ನು ಕರೆದೊಯ್ಯಬೇಕು ಎಂದು ನಿರ್ಧರಿಸಲು ಅಧಿಕಾರಿಗಳ ತಂಡವೊಂದನ್ನು ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್‌ ಕುಮಾರ್‌ ಮಿಶ್ರಾ ಅಲ್ಲಿಗೆ ಕಳುಹಿಸಿದ್ದಾರೆ.

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವ ಎಸ್‌.ಎನ್‌. ರುದ್ರೇಶ್‌, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ್‌, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಸಂತೋಷ್‌ ಸಪ್ಪಂಡಿ ಸ್ಥಳ ನಿಗದಿಪಡಿಸಿ ಜಿಲ್ಲಾಧಿಕಾರಿಗೆ ಮಾಹಿತಿ ನೀಡಲಿದ್ದಾರೆ.

ಆನಂತರ ಸ್ಥಳ ಅಂತಿಮಗೊಳ್ಳಲಿದೆ. ಗುರುವಾರ ಸಂಜೆಯೊಳಗಾಗಿ ಕೇಂದ್ರ ತಂಡದ ಜಿಲ್ಲಾ ಪ್ರವಾಸ ಪಟ್ಟಿ ಸಿದ್ಧವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.