ADVERTISEMENT

ನವೋದಯ ಕವಿಗೆ ನಾಡೋಜ ಕೊಟ್ಟು ಗೌರವಿಸಿದ್ದ ಕನ್ನಡ ವಿಶ್ವವಿದ್ಯಾಲಯ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 17 ಫೆಬ್ರುವರಿ 2022, 6:58 IST
Last Updated 17 ಫೆಬ್ರುವರಿ 2022, 6:58 IST
2002ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ನುಡಿಹಬ್ಬದಲ್ಲಿ ಕವಿ ಚೆನ್ನವೀರ ಕಣವಿ ಅವರಿಗೆ ಅಂದಿನ ರಾಜ್ಯಪಾಲ ಟಿ.ಎನ್‌. ಚತುರ್ವೇದಿ ಅವರು ನಾಡೋಜ ಗೌರವ ಪದವಿ ಕೊಟ್ಟು ಗೌರವಿಸಿದ್ದರು. ಅಂದಿನ ಕುಲಪತಿ ಎಚ್‌.ಜೆ. ಲಕ್ಕಪ್ಪಗೌಡ, ಉನ್ನತ ಶಿಕ್ಷಣ ಸಚಿವ ಡಾ.ಜಿ. ಪರಮೇಶ್ವರ, ವಿಧಾನ ಪರಿಷತ್‌ ಸದಸ್ಯ ಕೆ.ಸಿ. ಕೊಂಡಯ್ಯ, ಪ್ರಾಧ್ಯಾಪಕ ಕೆ. ರವೀಂದ್ರನಾಥ ಇದ್ದರು 
2002ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ನುಡಿಹಬ್ಬದಲ್ಲಿ ಕವಿ ಚೆನ್ನವೀರ ಕಣವಿ ಅವರಿಗೆ ಅಂದಿನ ರಾಜ್ಯಪಾಲ ಟಿ.ಎನ್‌. ಚತುರ್ವೇದಿ ಅವರು ನಾಡೋಜ ಗೌರವ ಪದವಿ ಕೊಟ್ಟು ಗೌರವಿಸಿದ್ದರು. ಅಂದಿನ ಕುಲಪತಿ ಎಚ್‌.ಜೆ. ಲಕ್ಕಪ್ಪಗೌಡ, ಉನ್ನತ ಶಿಕ್ಷಣ ಸಚಿವ ಡಾ.ಜಿ. ಪರಮೇಶ್ವರ, ವಿಧಾನ ಪರಿಷತ್‌ ಸದಸ್ಯ ಕೆ.ಸಿ. ಕೊಂಡಯ್ಯ, ಪ್ರಾಧ್ಯಾಪಕ ಕೆ. ರವೀಂದ್ರನಾಥ ಇದ್ದರು    

ಹೊಸಪೇಟೆ (ವಿಜಯನಗರ): ನವೋದಯ ಕವಿ ಎಂದೇ ಹೆಸರಾಗಿದ್ದ ಚೆನ್ನವೀರ ಕಣವಿ ಅವರಿಗೂ ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೂ ಎರಡು ದಶಕಗಳ ನಂಟಿತ್ತು.

ಕವನ, ಸಾನೆಟ್‌ಗಳ ಮೂಲಕ ಕನ್ನಡ ನಾಡಿನಲ್ಲಿ ಮನೆ ಮಾತಾಗಿದ್ದ ಚೆನ್ನವೀರ ಕಣವಿ ಅವರಿಗೆ ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯವು ಪ್ರತಿಷ್ಠಿತ ನಾಡೋಜ ಗೌರವ ಪದವಿ ಕೊಟ್ಟು ಗೌರವಿಸಿತ್ತು. 2002ನೇ ಇಸ್ವಿಯಲ್ಲಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ನುಡಿಹಬ್ಬ ಸಮಾರಂಭದಲ್ಲಿ ಅಂದಿನ ರಾಜ್ಯಪಾಲ ಟಿ.ಎನ್‌. ಚತುರ್ವೇದಿ ಅವರು ನಾಡೋಜ ಕೊಟ್ಟು ಗೌರವಿಸಿದ್ದರು. ಅದೇ ಸಮಾರಂಭದಲ್ಲಿ ಜಾನಪದ ವಿದ್ವಾಂಸ ಎಚ್‌.ಎಲ್‌. ನಾಗೇಗೌಡರಿಗೂ ನಾಡೋಜ ಪ್ರದಾನ ಮಾಡಲಾಗಿತ್ತು.

ನಾಡೋಜ ಗೌರವಕ್ಕೆ ಚೆನ್ನವೀರ ಕಣವಿ ಅವರ ಹೆಸರು ಶಿಫಾರಸು ಮಾಡಿದಾಗ ಸರ್ಕಾರ ಕ್ಷಣಮಾತ್ರವೂ ಹಿಂದೆ ಮುಂದೆ ಯೋಚಿಸದೇ ಅವರ ಹೆಸರಿಗೆ ಅಂತಿಮ ಮುದ್ರೆ ಹಾಕಿತ್ತು. ಅವರ ಹೆಸರು ಘೋಷಿಸಿದಾಗ ಯಾರೊಬ್ಬರೂ ಅದರ ಬಗ್ಗೆ ಚಕಾರ ಎತ್ತಿರಲಿಲ್ಲ. ಅದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ ಎಂದು ಈಗಲೂ ಸ್ಮರಿಸುತ್ತಾರೆ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರು.

ADVERTISEMENT

‘ನಾಡೋಜ ಸ್ವೀಕರಿಸಲು ವಿಶ್ವವಿದ್ಯಾಲಯಕ್ಕೆ ಬಂದಿದ್ದ ಕಣವಿ ಅವರು ಎರಡು ದಿನ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲೇ ತಂಗಿದ್ದರು. ಯಾವುದೇ ಹಮ್ಮು, ಬಿಮ್ಮು ಇಲ್ಲದೇ ಎಲ್ಲರೊಂದಿಗೆ ಮುಕ್ತವಾಗಿ ಬೆರೆಯುತ್ತಿದ್ದರು. ಅವರ ಬದುಕು ಬಹಳ ಸರಳತೆಯಿಂದ ಕೂಡಿತ್ತು. ಎಲ್ಲೂ ಕೂಡ ತೋರಿಕೆ, ಆಡಂಬರ ಇರಲಿಲ್ಲ. ಸಾತ್ವಿಕ ಬದುಕು ಅವರದಾಗಿತ್ತು’ ಎಂದು ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಕೆ. ರವೀಂದ್ರನಾಥ ಸ್ಮರಿಸಿದರು.

‘ಭುವನ ವಿಜಯ ಸಭಾಂಗಣದಲ್ಲಿ ಕಣವಿ, ನಾಗೇಗೌಡರೊಂದಿಗೆ ಸಂವಾದ ಕಾರ್ಯಕ್ರಮ ಇಟ್ಟುಕೊಳ್ಳಲಾಗಿತ್ತು. ಪ್ರತಿಯೊಂದು ಪ್ರಶ್ನೆಗಳಿಗೂ ಸಾವಧಾನದಿಂದ ಉತ್ತರಿಸಿದ್ದರು. ಒಬ್ಬ ಕವಿಯಾದವನು ಸಮಾಜಮುಖಿ ವಿಮರ್ಶಕನಾಗಿರಬೇಕು. ಭಾವನಾ ಲೋಕದಲ್ಲಿ ತೇಲಾಡಬಾರದು ಎಂದು ಸಲಹೆ ನೀಡಿದ್ದರು’ ಎಂದು ಅವರ ಮಾತುಗಳನ್ನು ನೆನಕೆ ಮಾಡಿಕೊಂಡರು.

‘ನಾನು ಗಮನಿಸಿರುವಂತೆ ಕಣವಿ ಅವರು ಧಾರವಾಡದಲ್ಲಿ ಪ್ರಸಾರಾಂಗದಲ್ಲಿದ್ದುಕೊಂಡು ಉತ್ತಮ ಕೆಲಸ ಮಾಡಿದ್ದರು. ಕವನ, ಸಾನೆಟ್‌ಗಳನ್ನು ಹೆಚ್ಚು ಬರೆದು, ಅದಕ್ಕೆ ಘನತೆ ತಂದುಕೊಟ್ಟಿದ್ದರು. ನಾಡಿನಲ್ಲಿ ಅವರೊಬ್ಬ ಸಮನ್ವಯ ಕವಿಯಾಗಿ ಗುರುತಿಸಿಕೊಂಡಿದ್ದರು. ಅವರ ಅಗಲಿಕೆಯಿಂದ ನಾಡಿಗೆ ದೊಡ್ಡ ನಷ್ಟವಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.