ಹೂವಿನಹಡಗಲಿ: ಪಟ್ಟಣದ ಕೃಷಿ ಪತ್ತಿನ ಸಹಕಾರ ಸಂಘದಿಂದ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರ ಆಯ್ಕೆಯ ಪ್ರತಿನಿಧಿಯಾಗಿ ಹಾಲಿ ನಿರ್ದೇಶಕ ಐಗೋಳ ಚಿದಾನಂದ ಬುಧವಾರ ಆಯ್ಕೆಯಾದರು.
ಪ್ರತಿನಿಧಿಯಾಗಲು ಸಹಕಾರಿ ನಿರ್ದೇಶಕ ಎಂ.ಪಿ.ಸುಮಾ ವಿಜಯ್ ಮತ್ತು ಐಗೋಳ ಚಿದಾನಂದ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಆಯ್ಕೆ ಪ್ರಕ್ರಿಯೆಗೆ ನಡೆದ ಚುನಾವಣೆಯಲ್ಲಿ ಐಗೋಳ ಚಿದಾನಂದ 7 ಮತ ಗಳಿಸಿ ಪ್ರತಿನಿಧಿಯಾಗಿ ಆಯ್ಕೆಯಾದರು. ಎಂ.ಪಿ.ಸುಮಾ ಅವರು 3 ಮತ ಗಳಿಸಿದರು. ಸಹಕಾರಿಯ 12 ನಿರ್ದೇಶಕರ ಪೈಕಿ ಒಬ್ಬರು ರಾಜೀನಾಮೆ ನೀಡಿದ್ದು, ಮತ್ತೊಬ್ಬ ನಿರ್ದೇಶಕರು ತಟಸ್ಥರಾಗಿ ಉಳಿದರು. 10 ಜನರು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.
ಪ್ರತಿನಿಧಿಯಾಗಿ ಆಯ್ಕೆಯಾದ ಐಗೋಳ ಚಿದಾನಂದ ಅವರನ್ನು ಮುಖಂಡರಾದ ಎಂ.ಪರಮೇಶ್ವರಪ್ಪ, ವಾರದ ಗೌಸ್ ಮೊಹಿದ್ದೀನ್, ಓಲಿ ಈಶಪ್ಪ, ಸಹಕಾರಿಯ ನಿರ್ದೇಶಕರು ಅಭಿನಂದಿಸಿದರು.
‘ನಮ್ಮ ಬೆಂಬಲಿಗ ನಿರ್ದೇಶಕರಿಗೆ ಚಿದಾನಂದ ಅವರು ಆಮಿಷವೊಡ್ಡಿ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ. ಅವರ ನಿಯಮಬಾಹಿರ ಆಯ್ಕೆ ಸದ್ಯದಲ್ಲೇ ಅಸಿಂಧುಗೊಳ್ಳಲಿದೆ’ ಎಂದು ಎಂ.ಪಿ.ಸುಮಾ ವಿಜಯ್ ಹೇಳಿದರು.
‘ಸಹಕಾರಿ ಕ್ಷೇತ್ರದಲ್ಲಿಯ ಸೇವೆ ಪರಿಗಣಿಸಿ ನಿರ್ದೇಶಕರು ನನ್ನನ್ನು ಮತ್ತೊಮ್ಮೆ ಪ್ರತಿನಿಧಿಯಾಗಿ ಆಯ್ಕೆಗೊಳಿಸಿದ್ದಾರೆ. ಕೆಲವರು ಹತಾಶೆಯಿಂದ ನನ್ನ ಮೇಲೆ ಆರೋಪ ಮಾಡುತ್ತಿದ್ದು, ಎಲ್ಲದಕ್ಕೂ ಕಾಲವೇ ಉತ್ತರಿಸಲಿದೆ’ ಎಂದು ಐಗೋಳ ಚಿದಾನಂದ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.