ಬಳ್ಳಾರಿ: ಮಕ್ಕಳ ತೀವ್ರ ನಿಗಾ ಪಾಲನೆ ಕುರಿತು ರಾಜ್ಯಮಟ್ಟದ 10ನೇ ಸಮ್ಮೇಳನಪೆಡಿಕ್ರಿಟಿಕಾನ್ 2019 ಜಿಂದಾಲ್‌ನಲ್ಲಿಇದೇ 21ರಿಂದ 23ರವರೆಗೆ ನಡೆಯಲಿದೆ ಎಂದು ಸಮ್ಮೇಳನದ ಸಂಘಟನಾ ಆಧ್ಯಕ್ಷ ಡಾ.ಯೋಗಾನಂದ ರೆಡ್ಡಿ ತಿಳಿಸಿದರು.
ಭಾರತೀಯ ಮಕ್ಕಳ ವೈದ್ಯರ ಅಕಾಡೆಮಿ, ವಿಮ್ಸ್ ಆಸ್ಪತ್ರೆಯ ಮಕ್ಕಳ ವಿಭಾಗ ಹಮ್ಮಿಕೊಂಡಿರುವ ಸಮ್ಮೇಳನದಲ್ಲಿ ರಾಜ್ಯದ 450 ಪ್ರತಿನಿಧಿಗಳು ಹಾಗೂವಿವಿಧ ರಾಜ್ಯಗಳ 80 ಮಕ್ಕಳ ತಜ್ಞರು ಪಾಲ್ಗೊಳ್ಳಲಿದ್ದಾರೆ ಎಂದು ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
'ಕೊನೆ ಹಂತದ ಚಿಕಿತ್ಸಾ ಸೌಕರ್ಯ- ಹತ್ತಿರ, ಆದರೂ ದೂರ' ಎಂಬುದು ಸಮ್ಮೇಳನದ ಧ್ಯೇಯವಾಕ್ಯ, ದೇಶದಲ್ಲಿ ಮಕ್ಕಳ ತೀವ್ರ ನಿಗಾ ಪಾಲನೆಯು ತ್ವರಿತಗತಿಯಲ್ಲಿ ಪ್ರಗತಿ ಕಾಣುತ್ತಿದ್ದರೂ, ದೊಡ್ಡ ನಗರಗಳಿಗಷ್ಟೇ ಸೀಮಿತಗೊಂಡಿದೆ. ಗ್ರಾಮಾಂತರ ಪ್ರದೇಶಗಳಿಗೆ ತಲುಪಿಲ್ಲ. ಹೀಗಾಗಿ ಈ ದ್ಯೇಯವಾಕ್ಯದೊಂದಿಗೆ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದರು.
ಗ್ರಾಮಾಂತರ ಮತ್ತು ಸಣ್ಣ ಪಟ್ಟಣಗಳ ಮಕ್ಕಳ ವೈದ್ಯರನ್ನು ಗುರಿಯಾಗಿಸಿಕೊಂಡು ಕಾರ್ಯಾಗಾರ, ವೈಜ್ಞಾನಿಕ ಅಧಿವೇಶನ ಹಾಗು ಗೋಷ್ಢಿಗಳನ್ನು ಆಯೋಜಿಸಲಾಗಿದೆ ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಉಸಿರಾಟದ ಸೌಕರ್ಯ ಕಡಿಮೆ ಇರುವ ಕಡೆ ತೀವ್ರ ನಿಗಾ ಚಿಕಿತ್ಸೆ ಕೊಡುವುದು ಹೇಗೆ ಎಂಬ ಕುರಿತು ಮೊದಲ ದಿನ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ನಡೆಯಲಿದೆ. ಎರಡನೇ ದಿನ, ಮಕ್ಕಳ ತೀವ್ರನಿಗಾ ಕುರಿತು ನರ್ಸಿಂಗ್ ಸಿಬ್ಬಂದಿಗೆ ಹಾಗೂ ತುರ್ತು ಸಂದರ್ಭಗಳಲ್ಲಿ ಜೀವ ರಕ್ಷಣಾ ಬೆಂಬಲ ನೀಡುವ ಕುರಿತು ಜಿಂದಾಲ್ ಅಧಿಕಾರಿಗಳಿಗೆ ಮೂರನೇ ದಿನ ತರಬೇತಿ ನೀಡಲಾಗುವುದು ಎಂದರು.
ತಜ್ಞರ ಕೊರತೆ: ದೇಶದಲ್ಲಿ ಮಕ್ಕಳ ತಜ್ಞರ ಕೊರತೆ ಇದೆ. ದೇಶದಲ್ಲಿ 30 ಸಾವಿರ ತಜ್ಞರಿದ್ದಾರೆ. ರಾಜ್ಯದಲ್ಲಿ 2 ಸಾವಿರ ಮಕ್ಕಳ ತಜ್ಞರಿದ್ದು ಸಂಘದಲ್ಲಿ 1400 ಸದಸ್ಯರಿದ್ದಾರೆ. ಜಿಲ್ಲೆಯಲ್ಲಿ 110 ಮಕ್ಕಳ ತಜ್ಞರಿದ್ದಾರೆ ಎಂದು ಮಾಹಿತಿ ನೀಡಿದರು.
ಉದ್ಘಾಟನೆ: 21ರಿಂದಲೇ ಕಾರ್ಯಾಗಾರ ಆರಂಭವಾಗಲಿದ್ದು, 22 ರಂದು ಸಂಜೆ ವೈದ್ಯಕೀಯ ಶಿಕ್ಷಣ ಸಚಿವ ಈ.ತುಕಾರಾಂ ಉದ್ಘಾಟಿಸಲಿದ್ದಾರೆ. ಜಿಂದಾಲ್ ಉಕ್ಕಿನ ಕಾರ್ಖಾನೆಯ ಉಪ ವ್ಯವಸ್ಥಾಪಕ ನಿರ್ದೇಶಕ ವಿನೋದ್ ನಾವಲ್, ಉಕ್ಕಿನ ಸಂಸ್ಥೆಯ ಅಧ್ಯಕ್ಷ ರಾಜಶೇಖರ ಪಟ್ಟಣಶಟ್ಟಿ, ಉಪಾಧ್ಯಕ್ಷ ಮಂಜುನಾಥ ಪ್ರಭು, ಭಾರತೀಯ ಮಕ್ಕಳ ವೈದ್ಯರ ಅಕಾಡೆಮಿಯ ಅಧ್ಯಕ್ಷ ಡಾ.ಬಕುಲ್ ಪಾರೇಖ್, ನಿಕಟಪೂರ್ವ ಅಧ್ಯಕ್ಷ ಡಾ.ಸಂತೋಷ್ ಸೋನ್ಸ್, ಮಕ್ಕಳ ತೀವ್ರ ನಿಗಾ ಪಾಲನೆ ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಾ.ಬಾಬಣ್ಣ ಹುಕ್ಕೇರಿ ಭಾಗವಹಿಸಲಿದ್ದಾರೆ ಎಂದರು.
ಮಕ್ಕಳ ವೈದ್ಯರಾದ ಎಸ್.ಕೆ.ಅಜಯ್, ದುರ್ಗಪ್ಪ, ಬಾಲವೆಂಕಟೇಶ್ವರ, ಬಿ.ಕೆ. ಶ್ರೀಕಾಂತ್ ಮತ್ತು ಡಾ.ಡಿ.ಭಾವನಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.