ADVERTISEMENT

ಕೂಡ್ಲಿಗಿ | ಹೊರ ವಲಯದಲ್ಲಿ ಕಾಲೇಜು: ವಿದ್ಯಾರ್ಥಿಗಳು ಪರದಾಟ

ಎ.ಎಂ.ಸೋಮಶೇಖರಯ್ಯ
Published 15 ಫೆಬ್ರುವರಿ 2024, 6:41 IST
Last Updated 15 ಫೆಬ್ರುವರಿ 2024, 6:41 IST
<div class="paragraphs"><p>ಕೂಡ್ಲಿಗಿ ಪಟ್ಟಣದ ಹೊರ ವಲಯದಲ್ಲಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿಗಳು ಟ್ರ್ಯಾಕ್ಟರಿನಲ್ಲಿ ಬರುತ್ತಿರುವುದು.</p></div>

ಕೂಡ್ಲಿಗಿ ಪಟ್ಟಣದ ಹೊರ ವಲಯದಲ್ಲಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿಗಳು ಟ್ರ್ಯಾಕ್ಟರಿನಲ್ಲಿ ಬರುತ್ತಿರುವುದು.

   

ಕೂಡ್ಲಿಗಿ: ತಾಲ್ಲೂಕು ಸೇರಿದಂತೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ಪಡೆಯಲು ಅನುಕೂಲವಾಗಲಿ ಎಂದು ನಿರ್ಮಾಣ ಮಾಡಿದ ಪಾಲಿಟೆಕ್ನಿಕ್ ಕಾಲೇಜು ಸರಿಯಾದ ಸಾರಿಗೆ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಪಟ್ಟಣದ ಹೊರ ವಲಯದಲ್ಲಿ ಸುಮಾರ 5 ಕಿ.ಮೀ. ದೂರದಲ್ಲಿ ನಿರ್ಮಾಣ ಮಾಡಿರುವುದೇ ಇದಕ್ಕೆ ಕಾರಣ.

2009ರಲ್ಲಿ ಸ್ಥಾಪನೆಯಾದ ಈ ಕಾಲೇಜು ಸುಮಾರು 12 ವರ್ಷಗಳ ಕಾಲ ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆಸಲಾಯಿತು. ನಂತರ ಅದಕ್ಕೆ ಪಟ್ಟಣದ ಹೊರ ವಲಯದಲ್ಲಿನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿನ ಕರಿಕಲ್ಲು ಗುಡ್ಡದಲ್ಲಿ ಸರ್ಕಾರಿ ಜಾಗ ಗುರುತಿಸಿ ಸುಸಜ್ಜಿತ ತರಗತಿ ಕೊಠಡಿಗಳು, ಅಧುನಿಕ ಪ್ರಯೋಗಲಾಯಗಳು, ಕ್ಯಾಂಟೀನ್ ಸೇರಿದಂತೆ ಸುಮಾರು ₹ 9 ಕೋಟಿ ವೆಚ್ಚದಲ್ಲಿ ಕಾಲೇಜು ಕಟ್ಟಡ ನಿರ್ಮಾಣ ಮಾಡಿ, 2021ರಲ್ಲಿ ಸ್ಥಳಾಂತರ ಮಾಡಲಾಗಿದೆ. ಆದರೆ ವಿದ್ಯಾರ್ಥಿಗಳು ಇಲ್ಲಿಗೆ ಹೋಗಿ ಬರುವುದೇ ದೊಡ್ಡ ಸಮಸ್ಯೆಯಾಗಿದೆ.

ADVERTISEMENT

ಕಾಲೇಜಿನಲ್ಲಿ 4 ಕೋರ್ಸ್‌ಗಳಲ್ಲಿ 74 ವಿದ್ಯಾರ್ಥಿನಿಯರು ಹಾಗೂ 488 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 562 ವಿದ್ಯಾರ್ಥಿಗಳಿದ್ದು, 25ಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ. ಇವರು ತಾಲ್ಲೂಕಿನ ವಿವಿಧ ಭಾಗಗಳಿಂದ ಬರುತ್ತಿದ್ದು, ತಮ್ಮ ತಮ್ಮ ಗ್ರಾಮಗಳಿಂದ ಬಸ್‌ಗಳಲ್ಲಿ ಕೂಡ್ಲಿಗಿ ಪಟ್ಟಣಕ್ಕೆ ಬರುತ್ತಾರೆ. ಅಲ್ಲದೆ ಪಟ್ಟಣದ ವಿವಿಧ ಮೂಲೆಗಳಲ್ಲಿನ ಸಾಕಷ್ಟು ವಿದ್ಯಾರ್ಥಿಗಳಿದ್ದಾರೆ.

ಆದರೆ ಪಟ್ಟಣದ ಬಸ್ ನಿಲ್ದಾಣದಿಂದ ಬೆಳಗ್ಗೆ ಒಂದು ಬಸ್‌ ಮಾತ್ರ ಕಾಲೇಜಿಗೆ ಬಂದು ಹೋಗುತ್ತದೆ. ಆದರೆ ಇಷ್ಟು ವಿದ್ಯಾರ್ಥಿಗಳಿಗೆ ಒಂದು ಬಸ್‌ ಯಾವುದಕ್ಕೂ ಸಾಲುವುದಿಲ್ಲ. ಅಲ್ಲದೆ ಸಮಯಕ್ಕೆ ಸರಿಯಾಗಿ ಬಸ್ ಬಾರದೇ ಇದ್ದರೆ, ಅಥವಾ ವಿದ್ಯಾರ್ಥಿಗಳು ತಡವಾಗಿ ಬಂದರೆ ಪಟ್ಟಣದಿಂದ ನಡೆದುಕೊಂಡೆ ಹೋಗಬೇಕು. ಇಲ್ಲವೇ ಕಾಲೇಜು ಕಡೆ ಹೊಗುವ ಬೈಕುಗಳು ಅಥವಾ ಇತರೆ ವಾಹನಗಳಿಗೆ ಕೈಮಾಡಿ ನಿಲ್ಲಿಸಿಕೊಂಡು ಹೋಗಬೇಕಾದ ಸ್ಥಿತಿ ಡಿಪ್ಲೊಮಾ ಕಾಲೇಜಿನ ವಿದ್ಯಾರ್ಥಿಗಳದು. ಅದರಲ್ಲಿ ವಿದ್ಯಾರ್ಥಿನಿಯರ ಸ್ಥಿತಿ ಹೇಳತೀರದು.

ಕಾಲೇಜಿಗೆ ಹೋಗಲು ರಾಷ್ಟ್ರೀಯೆ ಹೆದ್ದಾರಿ-50ರಲ್ಲಿಯೇ ನಡೆದುಕೊಂಡು ಹೋಗಬೇಕು. ಈ ಹೆದ್ದಾರಿಯಲ್ಲಿ ಬೃಹತ್ ಲಾರಿಗಳು ಸೇರಿದಂತೆ ಸಾವಿರಾರು ವಾಹನಗಳು ಓಡಾಡುತ್ತಿವೆ. ಅಲ್ಲದೆ ಬೆಂಗಳೂರು ಕಡೆ ಹೋಗುವ ನೂರಾರು ಬಸ್ಸುಗಳು ಇದೇ ಕಾಲೇಜು ಮುಂದೆ ಹಾದು ಹೋಗುತ್ತವೆ. ಆದರೆ ಅವುಗಳನ್ನು ಹತ್ತುವ ಭಾಗ್ಯ ಮಾತ್ರ ಈ ವಿದ್ಯಾರ್ಥಿಗಳಿಗಿಲ್ಲ. ಏಕೆಂದರೆ ಆ ಎಲ್ಲ ಬಸ್‌ಗಳು ವೇಗದೂತ ಎಂದು ಕಾಲೇಜು ಬಳಿ ನಿಲ್ಲಿಸುವುದಿಲ್ಲ.

ಇದರಿಂದ ಹೊಸಹಳ್ಳಿ ಕಡೆಯಿಂದ ಬರುವ ವಿದ್ಯಾರ್ಥಿಗಳು ಸಹ ಪಟ್ಟಣಕ್ಕೆ ಬಂದು ಮತ್ತೆ ನಡೆದುಕೊಂಡು ಹೋಗಬೇಕು. ಈ ಬಗ್ಗೆ ಈ ಹಿಂದಿನ ಶಾಸಕರು ಹಾಗೂ ಹಾಲಿ ಶಾಸಕರು ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜವಾಗಿಲ್ಲ. ಇದರಿಂದ ವಿದ್ಯಾರ್ಥಿಗಳು ನಿತ್ಯ ಬೈಕ್, ಟ್ರ್ಯಾಕ್ಟರ್, ಆಟೊಗಳಲ್ಲಿ, ಇಲ್ಲವೇ ನಡೆದುಕೊಂಡು ಬರಬೇಕಾದ ಸ್ಥಿತಿ ಇದೆ. ಇತ್ತೀಚೆಗೆ ವಿದ್ಯಾರ್ಥಿಯೊಬ್ಬ ಬೇರೊಬ್ಬರ ಬೈಕಿನಲ್ಲಿ ಬರುವಾಗ ಬೈಕಿನ ಹಿಂಬದಿಗೆ ಲಾರಿ ಡಿಕ್ಕಿಯಾಗಿ ವಿದ್ಯಾರ್ಥಿ ಗಂಬೀರವಾಗಿ ಗಾಯಗೊಂಡಿದ್ದಾನೆ.

ಇನ್ನಾದರೂ ಸಂಬಂಧಿಸಿ ಅಧಿಕಾರಿಗಳು ಹಾಗೂ ಶಾಸಕರು ಈ ರಸ್ತೆಯಲ್ಲಿ ಸಂಚಾರ ಮಾಡುವ ಎಲ್ಲಾ ಬಸ್ಸುಗಳನ್ನು ಇಲ್ಲಿ ನಿಲುಗಡೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಕಾಲೇಜಿನ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

ಈ ಹಿಂದೆ ಬೆಳಿಗ್ಗೆ ಹಾಗೂ ಸಂಜೆ ಎರಡು ಬಾರಿ ಒಂದು ಬಸ್‌ ಬಂದು ಹೊಗುತ್ತಿತ್ತು. ಆದರೆ ಈಗ ಬೆಳಿಗ್ಗೆ ಮಾತ್ರ ಒಂದೇ ಬಸ್‌ ಬರುತ್ತದೆ. ಎಲ್ಲ ಬಸ್‌ ನಿಲುಗಡೆಗೆ ಕ್ರಮ ಕೈಗೊಳ್ಳಬೇಕು
ಅಕ್ಕಸಾಲಿ ನೀಲಕಂಠಾಚಾರಿ ಪ್ರಭಾರ ಪ್ರಾಚಾರ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.