ADVERTISEMENT

ಶಾಸಕ ಸೋಮಶೇಖರ್‌ ರೆಡ್ಡಿ ಹೊತ್ತಿ ಉರಿಯುವ ಹೇಳಿಕೆಗೆ ರೈತ ಸಂಘ ಖಂಡನೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2019, 9:34 IST
Last Updated 1 ಅಕ್ಟೋಬರ್ 2019, 9:34 IST
ಜಿ.ಸೋಮಶೇಖರ ರೆಡ್ಡಿ
ಜಿ.ಸೋಮಶೇಖರ ರೆಡ್ಡಿ   

ಹೊಸಪೇಟೆ: ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆ ಮಾಡಿದರೆ ಇಡೀ ಜಿಲ್ಲೆಯೇ ಹೊತ್ತಿ ಉರಿಯುತ್ತದೆ ಎಂಬ ಶಾಸಕ ಜಿ. ಸೋಮಶೇಖರ್‌ ರೆಡ್ಡಿ ಅವರ ಹೇಳಿಕೆಯನ್ನು ಜಿಲ್ಲಾ ರೈತ ಸಂಘ ಕಟುವಾದ ಶಬ್ದಗಳಲ್ಲಿ ಖಂಡಿಸಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಸಂಘದ ಜಿಲ್ಲಾ ಅಧ್ಯಕ್ಷ ಬಿ. ಗೋಣಿಬಸಪ್ಪ, ‘ವಿಜಯನಗರ ಜಿಲ್ಲೆ ರಚನೆಗೆ ಶಾಸಕರಾದ ಸೋಮಶೇಖರ್‌ ರೆಡ್ಡಿ, ಜಿ. ಕರುಣಾಕರ ರೆಡ್ಡಿ ಬಿಟ್ಟರೆ ಯಾರೊಬ್ಬರೂ ವಿರೋಧಿಸುತ್ತಿಲ್ಲ. ಅವರಿಬ್ಬರಿಗೆ ಯಾರ ಬೆಂಬಲವೂ ಇಲ್ಲ. ಆದರೆ, ವಿನಾಕಾರಣ ಇಲ್ಲಸಲ್ಲದ ಹೇಳಿಕೆಗಳನ್ನು ಕೊಟ್ಟು ಗೊಂದಲ ಮೂಡಿಸುತ್ತಿದ್ದಾರೆ’ ಎಂದಿದ್ದಾರೆ.

‘ನೂತನ ಜಿಲ್ಲೆಯಾದರೆ ಪಶ್ಚಿಮ ತಾಲ್ಲೂಕುಗಳ ಜನರಿಗೆ ಬಹಳಷ್ಟು ಅನುಕೂಲವಾಗುತ್ತದೆ. ಹಾಗಾಗಿ ಸರ್ಕಾರ ಹೊಸ ಜಿಲ್ಲೆ ಘೋಷಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ADVERTISEMENT

‘ವಿಜಯನಗರ ಹೆಸರು ಚಿರಸ್ಥಾಯಿಯಾಗಲಿ’:‘ಹೊಸ ಪೀಳಿಗೆ ವಿಜಯನಗರ ಸಾಮ್ರಾಜ್ಯದ ಹೆಸರು ಮರೆಯುತ್ತಿದೆ. ಆದರೆ, ಚಿರಸ್ಥಾಯಿಯಾಗಿ ಉಳಿಯಬೇಕಾದರೆ ಅದೇ ಹೆಸರಿನಲ್ಲಿ ನೂತನ ಜಿಲ್ಲೆ ರಚಿಸಬೇಕು’ ಎಂದು ಹಂಪಿ ಮಾತಂಗ ಮಹರ್ಷಿ ಆಶ್ರಮದ ಪೂರ್ಣಾನಂದ ಭಾರತಿ ಸ್ವಾಮೀಜಿ ಹೇಳಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ‘ಹನ್ನೊಂದು ತಾಲ್ಲೂಕುಗಳನ್ನು ಒಳಗೊಂಡಿರುವ ಬಳ್ಳಾರಿ ಜಿಲ್ಲೆ ಸಮಗ್ರ ಅಭಿವೃದ್ಧಿಯಿಂದ ವಂಚಿತವಾಗುತ್ತಿದೆ. ಜಿಲ್ಲಾ ಕೇಂದ್ರಕ್ಕೆ ಹೋಗಿ ಬರಲು ಜನ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಎಲ್ಲ ರೀತಿಯ ಮೂಲಸೌಕರ್ಯ ಹೊಂದಿರುವ ಹೊಸಪೇಟೆ ಕೇಂದ್ರವಾಗಿಟ್ಟುಕೊಂಡು ಜಿಲ್ಲೆ ರಚಿಸಬೇಕು’ ಎಂದಿದ್ದಾರೆ.

‘ಎರಡನೇ ರಾಜಧಾನಿಯಾಗಬೇಕಿತ್ತು’:‘ವಿಜಯನಗರ ರಾಜ್ಯದ ಎರಡನೇ ರಾಜಧಾನಿಯಾಗಬೇಕಿತ್ತು. ಈ ವಿಷಯವನ್ನು ಈ ಹಿಂದೆ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದ್ದ ಚಿರಂಜೀವಿ ಸಿಂಗ್‌ ಹೇಳಿದ್ದರು. ಎರಡನೇ ರಾಜಧಾನಿಯಾಲು ಸಾಧ್ಯವಾಗಿಲ್ಲ. ಕನಿಷ್ಠ ಜಿಲ್ಲೆಯಾದರೂ ಆಗಲಿ’ ಎಂದು ವಿಜಯನಗರ ಜಿಲ್ಲಾ ಹೋರಾಟ ಸಮಿತಿ ಸಂಚಾಲಕ ವೈ. ಯಮುನೇಶ್‌ ತಿಳಿಸಿದ್ದಾರೆ.

‘ವಾಸುದೇವರಾವ್ ಸಮಿತಿ, ಬಿ.ಎಂ.ಹುಂಡೇಕಾರ್ ಸಮಿತಿ, ಎಂ.ಬಿ.ಪ್ರಕಾಶ್ ಸಮಿತಿ, ಹಾಗೂ ಪಿ.ಸಿ.ಗದ್ದಿಗೌಡ್ರು ಜಿಲ್ಲಾ ಪುನರ್ ವಿಂಗಡನಾ ಸಮಿತಿಗಳು ನೂತನ ತಾಲೂಕು, ಉಪವಿಭಾಗ ಹಾಗೂ ಜಿಲ್ಲೆಗಳ ರಚನೆಗೆ ಕೆಲವು ಮಾನದಂಡಗಳನ್ನು ನಿಗದಿಪಡಿಸಿವೆ. ಆ ಎಲ್ಲಾ ಮಾನದಂಡಗಳನ್ನು ಹೊಸಪೇಟೆ ಹೊಂದಿದೆ’ ಎಂದು ಪ್ರತಿಪಾದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.