ಹೊಸಪೇಟೆ: ವಿಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪ್ರಚಾರ ತಾರಕಕ್ಕೇರಿದೆ. ಕಾಂಗ್ರೆಸ್ ತನ್ನೆಲ್ಲ ಶಕ್ತಿ ಪಣಕ್ಕಿಟ್ಟು ಅಭ್ಯರ್ಥಿ ಗೆಲುವಿಗೆ ಪ್ರಯತ್ನಿಸುತ್ತಿದೆ. ಆದರೆ, ಜಿಲ್ಲೆಯವರೇ ಆದ ಆ ಪಕ್ಷದ ಇಬ್ಬರು ಶಾಸಕರು ಇದುವರೆಗೆ ಕ್ಷೇತ್ರದತ್ತ ತಲೆ ಹಾಕಿಲ್ಲ.
ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಬಿ. ನಾಗೇಂದ್ರ ಹಾಗೂ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾ ನಾಯ್ಕ ಒಮ್ಮೆಯೂ ವಿಜಯನಗರ ಕ್ಷೇತ್ರದಲ್ಲಿ ಕಾಣಿಸಿಕೊಂಡಿಲ್ಲ.
ಕಾಂಗ್ರೆಸ್ ಶಾಸಕರಾದ ಪಿ.ಟಿ. ಪರಮೇಶ್ವರ ನಾಯ್ಕ, ಈ. ತುಕಾರಾಂ, ಜೆ.ಎನ್. ಗಣೇಶ್, ಕ್ಷೇತ್ರದ ಉಸ್ತುವಾರಿ ಬಸವರಾಜ ರಾಯರಡ್ಡಿ, ಮುಖಂಡರಾದ ವಿ.ಎಸ್. ಉಗ್ರಪ್ಪ, ಸೂರ್ಯನಾರಾಯಣ ರೆಡ್ಡಿ, ಮೊಹಮ್ಮದ್ ಇಮಾಮ್ ನಿಯಾಜಿ ಸೇರಿದಂತೆ ಹಲವರು ಪಕ್ಷದ ಅಭ್ಯರ್ಥಿ ವೆಂಕಟರಾವ ಘೋರ್ಪಡೆ ಪರ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಆದರೆ, ನಾಗೇಂದ್ರ, ಭೀಮಾ ನಾಯ್ಕ ಅನುಪಸ್ಥಿತಿ ಎದ್ದು ಕಾಣುತ್ತಿದೆ.
ಈ ಹಿಂದೆ ನಡೆದ ಬಳ್ಳಾರಿ ಲೋಕಸಭೆ ಉಪಚುನಾವಣೆ, ನಂತರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲಾ ಶಾಸಕರು ಒಗ್ಗಟ್ಟಿನಿಂದ ಕೆಲಸ ಮಾಡಿದ್ದರು. ‘ಯಾವ ಕ್ಷೇತ್ರದಲ್ಲಿ, ಯಾರು ಅತ್ಯಧಿಕ ಮತಗಳನ್ನು ತಂದುಕೊಡುತ್ತಾರೋ ಅವರಿಗೆ ಸಚಿವ ಸ್ಥಾನ ನೀಡಲಾಗುವುದು’ ಎಂದು ಪಕ್ಷ ಘೋಷಿಸಿದ್ದರಿಂದ ಎಲ್ಲರೂ ಪೈಪೋಟಿಗಿಳಿದು ಕೆಲಸ ಮಾಡಿದ್ದರು.
ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ ಅವರು ಪ್ರತಿಷ್ಠೆಯಾಗಿ ತೆಗೆದುಕೊಂಡು ಚುನಾವಣೆ ಮಾಡಿದ್ದರು. ಇದರಿಂದಾಗಿ ಉಗ್ರಪ್ಪನವರು ಎರಡು ಲಕ್ಷ ಮತಗಳಿಗಿಂತಲೂ ಹೆಚ್ಚಿನ ಅಂತರದಿಂದ ಗೆದ್ದಿದ್ದರು. ಅಂದು ತೋರಿದ ಒಗ್ಗಟ್ಟು ಈಗ ಕಾಣುತ್ತಿಲ್ಲ.
ಶುಕ್ರವಾರ ನಡೆದ ಕಾಂಗ್ರೆಸ್ ಪದಾಧಿಕಾರಿಗಳ ಸಭೆಯಲ್ಲೂ ಈ ವಿಷಯ ಪ್ರಸ್ತಾಪವಾಗಿದೆ. ‘ಕಾಂಗ್ರೆಸ್ ಪಕ್ಷ ಸಮುದ್ರವಿದ್ದಂತೆ. ಇಲ್ಲಿ ಮುಖಂಡರ ಕೊರತೆಯಿಲ್ಲ. ಎಲ್ಲರೂ ಒಗ್ಗೂಡಿ ಕೆಲಸ ಮಾಡಿದರೆ ಜಯ ಖಂಡಿತ. ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳಿದ್ದರೆ ಅದನ್ನು ಬದಿಗೊತ್ತಿ, ಘೋರ್ಪಡೆಯವರ ಗೆಲುವಿಗೆ ಶ್ರಮಿಸೋಣ’ ಎಂದು ಮುಖಂಡರು ಮಾತನಾಡಿದ್ದಾರೆ. ಆದರೆ, ಕಾರ್ಯರೂಪಕ್ಕೆ ಬಂದಂತೆ ಕಾಣಿಸುತ್ತಿಲ್ಲ.
ಬಿ.ಎಂ.ಎಂ. ಕಾರ್ಖಾನೆ ವಿಚಾರದಲ್ಲಿ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಹಾಗೂ ಭೀಮಾ ನಾಯ್ಕ ನಡುವೆ ವೈಮನಸ್ಸು ಉಂಟಾಗಿತ್ತು. ಇಬ್ಬರ ಬೆಂಬಲಿಗರು ಕೈ ಕೈ ಮಿಲಾಯಿಸುವ ಹಂತಕ್ಕೂ ಹೋಗಿದ್ದರು. ಹಗರಿಬೊಮ್ಮನಹಳ್ಳಿಗೆ ಬಂದು ಸಿಂಗ್ ಹಸ್ತಕ್ಷೇಪ ಮಾಡುತ್ತಿರುವುದಕ್ಕೆ ಬಹಿರಂಗವಾಗಿಯೇ ಬೇಸರ ತೋಡಿಕೊಂಡಿದ್ದ ಭೀಮಾ ನಾಯ್ಕ, ವಿಜಯನಗರದಲ್ಲಿ ಭರ್ಜರಿ ಪ್ರಚಾರ ಮಾಡುವರು ಎಂಬ ನಿರೀಕ್ಷೆ ಇತ್ತು. ಆದರೆ, ಇದುವರೆಗೆ ಅವರು ಬಂದಿಲ್ಲ.
ಶಾಸಕ ನಾಗೇಂದ್ರ ಅವರು ಬಿಜೆಪಿಯತ್ತ ಮುಖ ಮಾಡಿದ್ದು, ಈ ಕಾರಣಕ್ಕಾಗಿಯೇ ಅವರು ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.