ಹೊಸಪೇಟೆ (ವಿಜಯನಗರ): ಕೇಂದ್ರ ಸರ್ಕಾರವು ಸತತವಾಗಿ ತೈಲ ದರ ಹೆಚ್ಚಳ ಮಾಡುತ್ತಿರುವುದನ್ನು ವಿರೋಧಿಸಿ ಕಾಂಗ್ರೆಸ್ ಶಾಸಕರ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಬುಧವಾರ ನಗರದಲ್ಲಿ ಬೈಸಿಕಲ್ ಜಾಥಾ ನಡೆಸಿದರು.
ನಗರದ ಸಾಯಿಬಾಬಾ ವೃತ್ತದಿಂದ ಆರಂಭಗೊಂಡ ಜಾಥಾ ನಗರದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿತು. ಎಪಿಎಂಸಿ, ಟಿ.ಬಿ. ಡ್ಯಾಂ ರಸ್ತೆ, ವಾಲ್ಮೀಕಿ ವೃತ್ತ, ರಾಮ ಟಾಕೀಸ್, ಬಸ್ ನಿಲ್ದಾಣ, ರೋಟರಿ ವೃತ್ತದ ಮೂಲಕ ಹಾದು ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಕೊನೆಗೊಂಡಿತು. ರ್‍ಯಾಲಿಯಲ್ಲಿ ಅಂತರ ಮರೀಚಿಕೆಯಾಗಿತ್ತು.
ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು. ಜಾಥಾದುದ್ದಕ್ಕೂ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿದರು. ‘ಗಲಿ ಗಲಿ ಮೇ ಚೋರ್ ಹೈ ಚೌಕಿದಾರ್ ಚೋರ್ ಹೈ’, ‘ಬಚ್ಚಾ ಬಚ್ಚಾ ಜಾನ್ತ ಹೈ ಚೌಕಿದಾರ್ ಚೋರ್ ಹೈ’, ‘ಸರ್ಕಾರಂತೆ ಸರ್ಕಾರ್ ಅವರಪ್ಪಂದು ಸರ್ಕಾರ’ ಎಂದು ಘೋಷಣೆ ಹಾಕಿದರು.
ಇದಕ್ಕೂ ಮುನ್ನ ಶಾಸಕರಾದ ಯು.ಟಿ. ಖಾದರ್, ಈ. ತುಕಾರಾಂ, ಪರಮೇಶ್ವರ ನಾಯ್ಕ, ಭೀಮಾ ನಾಯ್ಕ ಜಾಥಾಕ್ಕೆ ಚಾಲನೆ ನೀಡಿದರು. ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್. ಮಂಜುನಾಥ, ಬಳ್ಳಾರಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶಿವಯೋಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೊಹಮ್ಮದ್ ಇಮಾಮ್ ನಿಯಾಜಿ, ವಿ. ಸೋಮಪ್ಪ, ಮುಖಂಡರಾದ ವೆಂಕಟರಾವ ಘೋರ್ಪಡೆ, ದೀಪಕ್ ಸಿಂಗ್, ಗುಜ್ಜಲ್ ರಘು, ಗುಜ್ಜಲ್ ನಾಗರಾಜ್, ಹಾಲಪ್ಪ, ಭರತ್, ಅಕ್ಕಿ ತೋಟೇಶ್, ಬಡಾವಲಿ, ಗೌಸ್, ವೀಣಾ ಮಹಾಂತೇಶ, ಆಶಾಲತಾ, ಮುನ್ನಿ ಭಾಗವಹಿಸಿದ್ದರು.
‘ಕೋವಿಡ್ ಲಾಕ್ ಡೌನ್ ನಿಂದ ಜನಸಾಮಾನ್ಯರು ತೀವ್ರ ಸಂಕಷ್ಟದಲ್ಲಿದ್ದಾರೆ. ಆದರೆ, ಕೇಂದ್ರ ಸರ್ಕಾರ ಸತತವಾಗಿ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಮಾಡುತ್ತಿದೆ. ಇದರಿಂದಾಗಿ ಅಡುಗೆ ಎಣ್ಣೆ ಸೇರಿದಂತೆ ಇತರೆ ಅಗತ್ಯ ವಸ್ತುಗಳ ಬೆಲೆ ದುಬಾರಿಯಾಗುತ್ತಿದೆ. ಇದು ಜನವಿರೋಧಿ ಸರ್ಕಾರ. ಇದು ಬೇಗ ತೊಲಗಿದರಷ್ಟೇ ಎಲ್ಲರಿಗೂ ಮುಕ್ತಿ. ಬೆಲೆ ಹೆಚ್ಚಳದಿಂದ ಜನಸಾಮಾನ್ಯರು ನೆಮ್ಮದಿಯಿಂದ ಬದುಕಲು ಆಗುತ್ತಿಲ್ಲ’ ಎಂದು ಮುಖಂಡರು ಟೀಕಿಸಿದರು.
/ಬಾಕ್ಸ್/
ರ್‍ಯಾಲಿಯಲ್ಲಿ ಬಾಲಕರು
ಬುಧವಾರ ಕಾಂಗ್ರೆಸ್ ನಡೆಸಿದ ಬೈಸಿಕಲ್ ಜಾಥಾದಲ್ಲಿ ಅನೇಕ ಜನ ಬಾಲಕರು ಪಾಲ್ಗೊಂಡಿದ್ದರು. ಬೈಸಿಕಲ್‌ಗಳಿಗೆ ಕಾಂಗ್ರೆಸ್ ಧ್ವಜ ಕಟ್ಟಿಕೊಂಡು, ರ್‍ಯಾಲಿಯಲ್ಲಿ ಭಾಗವಹಿಸಿದ್ದರು. ‘ನೀವೇಕೇ ಇಲ್ಲಿಗೆ ಬಂದಿದ್ದು, ನಿಮ್ಮನ್ನು ಯಾರು ಕರೆತಂದದ್ದು’ ಎಂದು ಕೆಲವು ಬಾಲಕರನ್ನು ‘ಪ್ರಜಾವಾಣಿ’ ಪ್ರಶ್ನಿಸಿದಾಗ, ಅವರು ಏನನ್ನೂ ಪ್ರತಿಕ್ರಿಯಿಸಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.