ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ಪೈಕಿ 6 ವಿಧಾನಸಭಾ ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿರುವ ಕಾಂಗ್ರೆಸ್ ಸಂಸತ್ ಸ್ಥಾನವನ್ನೂ ತನ್ನದಾಗಿಸಿಕೊಳ್ಳುವ ಉಮೇದಿನಲ್ಲಿದೆ. ಇದರ ಮಧ್ಯೆ ಟಿಕೆಟ್‌ಗಾಗಿ ಆಕಾಂಕ್ಷಿಗಳಲ್ಲಿ ಪೈಪೋಟಿ ಏರ್ಪಟ್ಟಿದೆ.
ಎಸ್.ಟಿ ಮೀಸಲು ಕ್ಷೇತ್ರವಾದ ಬಳ್ಳಾರಿಯಲ್ಲಿ ಸಚಿವ ಬಿ. ನಾಗೇಂದ್ರ ಅವರನ್ನು ಕಣಕ್ಕಿಳಿಸಲು ಪಕ್ಷ ಬಯಸಿದೆ. ಆದರೆ, ಅವರು ಸ್ಪರ್ಧಿಸಲು ‘ಒಲ್ಲೆ’ ಎಂದಿದ್ದಾರೆ. ಅವರ ಸಹೋದರ ಬಿ. ವೆಂಕಟೇಶ್ ಪ್ರಸಾದ್ ಅವರಿಗೆ ಸ್ಪರ್ಧಿಸುವ ಒಲವಿದೆ. ಕಳೆದ ಬಾರಿ ಸ್ಪರ್ಧಿಸಿ ಸೋತ ವಿ.ಎಸ್ ಉಗ್ರಪ್ಪ ಅವರು ‘ನಾನೇ ಅಭ್ಯರ್ಥಿ’ ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರೆ.
ಸಂಡೂರು ಶಾಸಕ ತುಕಾರಾಂ ಅವರ ಹೆಸರೂ ಕೇಳಿ ಬಂದಿದ್ದು, ಅದನ್ನು ಅಲ್ಲಗೆಳೆದು ಅವರು ತಮ್ಮ ಪುತ್ರಿ ಸೌಪರ್ಣಿಕಾ ಹೆಸರನ್ನು ಪ್ರಸ್ತಾಪಿಸಿದ್ದಾರೆ. ತುಕಾರಾಂ ಅವರಿಗೆ ಸಚಿವ ಸಂತೋಷ್ ಲಾಡ್ ಬೆಂಬಲವಿದೆ. ಇಷ್ಟೆಲ್ಲ ಪೈಪೋಟಿ ಮಧ್ಯೆ ಸ್ಥಳೀಯ ಮುಖಂಡ ಗುಜ್ಜಲ್ ನಾಗರಾಜ್ ಕೂಡ ಆಕಾಂಕ್ಷಿ ಆಗಿದ್ದಾರೆ.
ಅನಿರೀಕ್ಷಿತ ಹೆಸರು:
ಬಳ್ಳಾರಿಯಿಂದ ಸ್ಪರ್ಧಿಸಲು ಸಿದ್ಧವಿರುವಂತೆ ಸಚಿವ ಕೆ.ಎನ್ ರಾಜಣ್ಣ ಪುತ್ರ, ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ ಅವರಿಗೆ ಪಕ್ಷದ ಕೆಲ ನಾಯಕರು ಸೂಚಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಅವರು ‘ಬಳ್ಳಾರಿ ಅಥವಾ ರಾಯಚೂರಿನಿಂದ ಸ್ಪರ್ಧಿಸಲು ನನಗೆ ಸೂಚಿಸಿದ್ದು ನಿಜ. ಆದರೆ, ನಾನು ತುಮಕೂರಿನಲ್ಲೇ ಇರುವೆ’ ಎನ್ನುತ್ತಾರೆ.
ಮೊಳಕಾಲ್ಮೂರು ಶಾಸಕ ಎನ್. ವೈ. ಗೋಪಾಲಕೃಷ್ಣ ಅವರ ಹೆಸರೂ ಮುಂಚೂಣಿಯಲ್ಲಿದೆ. ಇದನ್ನು ಅಲ್ಲಗೆಳೆದಿರುವ ಅವರು, ‘ನಾನು ಸ್ಪರ್ಧಿಸಲ್ಲ. ನನ್ನ ಅಣ್ಣ ಎನ್.ವೈ ಹನುಮಂತಪ್ಪ ಕೂಡ ಆಕಾಂಕ್ಷಿಯಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಸ್ಪರ್ಧೆಗೆ ಅವರ ಮನವೊಲಿಕೆ ಮುಂದುವರೆದಿದೆ. ‘ಗೋಪಾಲಕೃಷ್ಣ ಅವರು ಈ ಹಿಂದೆ ಬಳ್ಳಾರಿ ಗ್ರಾಮಾಂತರ ಮತ್ತು ಕೂಡ್ಲಿಗಿ ಶಾಸಕರಾಗಿದ್ದರು. ಅವರಿಗೆ ಕ್ಷೇತ್ರದ ಪರಿಚಯವಿದೆ. ಅದರ ಲಾಭ ಪಡೆಯಬಹುದು’ ಎಂಬ ಅಭಿಪ್ರಾಯ ಕೆಲ ನಾಯಕರದ್ದು.
‘ಸಚಿವ ನಾಗೇಂದ್ರ ಅವರು ಸ್ಪರ್ಧಿಸದಿದ್ದರೆ, ಅಖಂಡ ಬಳ್ಳಾರಿಯವರಿಗೇ ಟಿಕೆಟ್ ಸಿಗಲಿ’ ಎಂಬುದು ಸ್ಥಳೀಯ ನಾಯಕರ ಆಶಯ. ಇದಕ್ಕೆ ನಾಗೇಂದ್ರ ಅವರ ಸಮ್ಮತಿಯೂ ಇದೆ. ಟಿಕೆಟ್ ಸ್ಥಳೀಯರಿಗೆ ಸಿಗುವುದೇ ಅಥವಾ ಹೊರಗಿನ ಜಿಲ್ಲೆಯವರ ಪಾಲಾಗುವುದೇ ಎಂಬುದೇ ಸದ್ಯದ ಕುತೂಹಲ.
ಹಿರಿತನ ಅನುಭವದ ಆಧಾರದಲ್ಲಿ ನನಗೆ ಟಿಕೆಟ್ ಸಿಗಲಿದೆ. ಕಳೆದ ಬಾರಿ ಕಾಂಗ್ರೆಸ್ ಅತ್ಯಂತ ಕಡಿಮೆ ಅಂತರದಲ್ಲಿ ಸೋತ ಕ್ಷೇತ್ರ ಬಳ್ಳಾರಿ. ಈ ಬಾರಿಯೂ ನಾನೇ ಅಭ್ಯರ್ಥಿ. ಗೆದ್ದೇ ಗೆಲ್ಲುತ್ತೇವೆ.–ವಿ.ಎಸ್ ಉಗ್ರಪ್ಪ ಮಾಜಿ ಸಂಸದ
ಬಳ್ಳಾರಿ ಅಥವಾ ರಾಯಚೂರಿನಿಂದ ಸ್ಪರ್ಧಿಸಲು ಸೂಚನೆ ಇದೆ. ಆದರೆ ನಾನು ತುಮಕೂರಲ್ಲೇ ಇರುತ್ತೇನೆ. ಸ್ಪರ್ಧಿಸಲೇಬೇಕು ಎಂದು ಪಕ್ಷ ಸೂಚಿಸಿದರೆ ಖಂಡಿತ ಕಣಕ್ಕಿಳಿಯುವೆ.– ಆರ್.ರಾಜೇಂದ್ರ ವಿಧಾನ ಪರಿಷತ್ ಸದಸ್ಯ
ಲೋಕಸಭೆ ಟಿಕೆಟ್‌ಗಾಗಿ ತುಂಬಾ ಪ್ರಯತ್ನ ನಡೆಸಿದ್ದೇವೆ. ಈ ಬಾರಿ ನನ್ನ ಮಗಳು ಸೌಪರ್ಣಿಕಾಗೆ ಖಂಡಿತವಾಗಿ ಟಿಕೆಟ್ ಸಿಗುವ ವಿಶ್ವಾಸವಿದೆ. ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ– ತುಕಾರಾಂ ಶಾಸಕ ಸಂಡೂರು
ನಮ್ಮ ಸಾಮರ್ಥ್ಯಕ್ಕೆ ತಕ್ಕ ಭಾರವನ್ನು ನಾವು ಹೊರಬೇಕು. ಲೋಕಸಭೆ ಚುನಾವಣೆ ಎಂಬುದು ನನ್ನ ಸಾಮರ್ಥ್ಯಕ್ಕೆ ಮೀರಿದ್ದು. ನಾನು ಸ್ಪರ್ಧಿಸುತ್ತೇನೆ ಎಂಬುದು ಸಂಪೂರ್ಣ ಸುಳ್ಳು.– ಎನ್. ವೈ ಗೋಪಾಲಕೃಷ್ಣ ಶಾಸಕ ಮೊಳಕಾಲ್ಮೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.