ಸಂಡೂರು: ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಸರ್ಕಾರಿ ನೌಕರರಿಗೆ ಸಾವಿನ ಭಾಗ್ಯ ಕೊಟ್ಟಿದೆ. ಲಂಚ ಕೊಡಿ, ಇಲ್ಲ ನೇಣು ಹಾಕಿಕೊಳ್ಳಿಯೆಂದು ಹೇಳಿದಂತಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ವ್ಯಂಗ್ಯವಾಡಿದರು.
ಪಕ್ಷದ ಅಭ್ಯರ್ಥಿ ಬಂಗಾರು ಹನುಮಂತ ಪರ ಕಮತ್ತೂರು ಸೇರಿ ಹಲವು ಕಡೆ ಬುಧವಾರ ಪ್ರಚಾರ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು,‘ವಾಲ್ಮಿಕಿ ಹಗರಣದ ಕುರಿತು ನಾನು ಅಧಿವೇಶನದಲ್ಲಿ ಪ್ರಶ್ನಿಸಿದಾಗ ಮುಖ್ಯಮಂತ್ರಿ ಹಗರಣ ಒಪ್ಪಿಕೊಂಡಿದ್ದರು. ಆ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಹಣ ವಾಪಸ್ ಬಂತು. ಅದೇ ರೀತಿ ರಾಜ್ಯದಲ್ಲಿ ಅಧಿಕಾರಿಗಳ ಸರಣಿ ಆತ್ಮಹತ್ಯೆ ನಡೆಯುತ್ತಿದೆ’ ಎಂದರು.
‘ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಅಧಿಕಾರಿಗಳು ಕಾಂಗ್ರೆಸ್ ಪರ ಕೆಲಸ ಮಾಡುತ್ತಿರುವುದು ಗೊತ್ತಾಗುತ್ತಿದೆ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಪ್ರಚಾರ ಮಾಡುತ್ತಿದ್ದಾರೆ. ಸರ್ಕಾರಿ ಯಂತ್ರದ ನೇರ ದುರುಪಯೋಗವಾಗುತ್ತಿದೆ. ಈ ಬಗ್ಗೆ ನವೆಂಬರ್ 8 ರಂದು ಚುನಾವಣಾ ಆಯೋಗಕ್ಕೆ ಖುದ್ದು ದೂರು ಸಲ್ಲಿಸುವೆ’ ಎಂದು ಅವರು ತಿಳಿಸಿದರು.
ವಿಜಯೇಂದ್ರ ವಿರುದ್ಧ ಹೇಳಿಕೆ ನೀಡುತ್ತಿರುವ ರಮೇಶ ಜಾರಕಿಹೊಳಿ ಮತ್ತು ಬಸನಗೌಡ ಪಾಟೀಲ ಯತ್ನಾಳ ಅವರ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಶೋಕ, ‘ಪಕ್ಷದ ಚೌಕಟ್ಟಿನಲ್ಲಿ ಚರ್ಚೆ ನಡೆದಿದೆ’ ಎಂದರು.
ಮುನಿಸಿಕೊಂಡವರ ಸೆಳೆಯಲು ಪ್ರಯತ್ನ:
ಸಂಡೂರು ಕ್ಷೇತ್ರದಲ್ಲಿ ಮುನಿಸಿಕೊಂಡವರನ್ನು ಮತ್ತು ರಾಜಕೀಯದಿಂದ ದೂರವುಳಿದವರನ್ನು ಸೆಳೆಯಲು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಪ್ರಯತ್ನ ನಡೆಸಿದ್ದಾರೆ.
2023ರ ಚುನಾವಣೆಯ ಬಿಜೆಪಿ ಪರಾಜಿತ ಅಭ್ಯರ್ಥಿಯನ್ನು ಕರೆತರಲು ಕಾಂಗ್ರೆಸ್ ಕಸರತ್ತು ನಡೆಸುತ್ತಿದೆ. ಜತೆಗೆ, ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿರುವ ಬಿಜೆಪಿ ನಾಯಕ ಕಾರ್ತಿಕೇಯ ಘೋರ್ಪಡೆ ಅವರ ಬೆಂಬಲ ಪಡೆಯಲು ಕಾಂಗ್ರೆಸ್ ಪ್ರಯತ್ನ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಸಚಿವ ಸಂತೋಷ್ ಲಾಡ್, ‘ಘೋರ್ಪಡೆ ವಂಶಸ್ಥರನ್ನು ನಾನು ರಾಜಕೀಯವಾಗಿ ಎದುರಿಸಿರಬಹುದು. ಆದರೆ, ಅವರ ಬಗ್ಗೆ ನಾನು ಒಂದು ಮಾತನ್ನೂ ಹೇಳಿಲ್ಲ. ಎಂ.ವೈ ಘೋರ್ಪಡೆಯವರು ಈ ಭಾಗಕ್ಕೆ ಸಾಕಷ್ಟು ಕೆಲಸ ಮಾಡಿದ್ದಾರೆ. ಕಾರ್ತಿಕೇಯ ಘೋರ್ಪಡೆ ತಟಸ್ಥರಾಗಿ ಉಳಿದಿದ್ದಾರೆ ಎಂದರೆ ಅದು ನಮಗೆ ಸಹಾಯವಾದಂತೆ’ ಎಂದು ಸಚಿವ ಸಂತೋಷ ಲಾಡ್ ತಿಳಿಸಿದರು.
ಸಂಡೂರಿಗೆ ಇಂದು ಸಿಎಂ: ಕಾಂಗ್ರೆಸ್ ಅಭ್ಯರ್ಥಿ ಇ.ಅನ್ನಪೂರ್ಣ ಪರ ಪ್ರಚಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಸಂಡೂರಿಗೆ ಬರುತ್ತಿದ್ದು, ಎರಡು ದಿನ (̇ನ.7 ,8) ಇಲ್ಲಿಯೇ ಉಳಿಯುವರು. ಕ್ಷೇತ್ರದಲ್ಲಿ ಆಯೋಜಿಸಿರುವ ಒಟ್ಟು 18 ಸಭೆ, ಸಮಾವೇಶಗಳಲ್ಲಿ ಅವರು ಭಾಗವಹಿಸಲಿದ್ದಾರೆ ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರನ್ನು ಅವರ ಪಕ್ಷದ ಶಾಸಕರೇ ಟೀಕಿಸುತ್ತಿದ್ದಾರೆ. ಇಷ್ಟಾದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅವರ ಪಕ್ಷ ದುರ್ಬಲವಾಗಿದೆ. ಶಿಸ್ತು ಕಾಣೆಯಾಗಿದೆ.ಜಿ.ಸಿ ಚಂದ್ರಶೇಖರ್ ರಾಜ್ಯಸಭಾ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.