ಹೊಸಪೇಟೆ: ಇಲ್ಲಿನ ಹಂಪಿ ವಿರೂಪಾಕ್ಷೇಶ್ವರ ದೇಗುಲದಲ್ಲಿ ವಸ್ತ್ರ ಸಂಹಿತೆ ಜಾರಿಗೆ ತರಲು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧಾರ್ಮಿಕ ಇಲಾಖೆ ಚಿಂತನೆ ನಡೆಸಿದೆ.
ಈ ಕುರಿತು ಇಲಾಖೆಯು ಇತ್ತೀಚೆಗೆ ಜಿಲ್ಲಾಧಿಕಾರಿ ರಾಮಪ್ರಸಾದ್ ಮನೋಹರ್ ಅವರಿಗೆ ಪ್ರಸ್ತಾವ ಸಲ್ಲಿಸಿದೆ. ಜಿಲ್ಲಾಧಿಕಾರಿ ಒಪ್ಪಿಗೆ ಸೂಚಿಸಿದ ಬಳಿಕ ವಸ್ತ್ರ ಸಂಹಿತೆ ಜಾರಿಗೆ ಬರಲಿದೆ. ಈ ವಿಷಯವನ್ನು ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್ ರಾವ್ ‘ಪ್ರಜಾವಾಣಿ’ಗೆ ದೃಢಪಡಿಸಿದ್ದಾರೆ.
‘ದೇಶದ ಕೆಲವು ಪ್ರಸಿದ್ಧ ದೇಗುಲಗಳಲ್ಲಿ ಈಗಾಗಲೇ ವಸ್ತ್ರ ಸಂಹಿತೆ ಜಾರಿಯಲ್ಲಿದೆ. ರಾಜ್ಯದ ಉಡುಪಿ, ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಹೊರನಾಡಿನಲ್ಲಿ ಇದನ್ನು ನೋಡಬಹುದು. ಇತ್ತೀಚೆಗೆ ನಡೆದ ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಈ ಕುರಿತು ಗಂಭೀರ ಚರ್ಚೆ ನಡೆದಿತ್ತು. ಸಭೆಯಲ್ಲಿದ್ದವರು ಅದಕ್ಕೆ ಒಪ್ಪಿಗೆ ಸೂಚಿಸಿದ್ದರು. ಅಷ್ಟೇ ಅಲ್ಲ, ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿಯವರೇ ಪ್ರಸ್ತಾವ ಕಳಿಸಿಕೊಡುವಂತೆ ಸೂಚಿಸಿದ್ದರು. ಹೀಗಾಗಿ ಅವರು ಒಪ್ಪಿಗೆ ಕೊಡುವುದು ಬಹುತೇಕ ಖಚಿತ’ ಎಂದು ಪ್ರಕಾಶ್ ರಾವ್ ತಿಳಿಸಿದ್ದಾರೆ.
‘ಇಡೀ ಹಂಪಿಯಲ್ಲಿ ವಿರೂಪಾಕ್ಷೇಶ್ವರ ದೇಗುಲದಲ್ಲಿ ಮಾತ್ರ ಪೂಜೆ ಸಲ್ಲಿಸಲು ಭಕ್ತರಿಗೆ ಅವಕಾಶವಿದೆ. ಎತ್ತರದ ಗೋಪುರ, ವಿಶಿಷ್ಟ ವಾಸ್ತುಶಿಲ್ಪದಿಂದ ಶ್ರೀಮಂತವಾಗಿರುವ ಇಲ್ಲಿ ನಿತ್ಯ ವಿರೂಪಾಕ್ಷೇಶ್ವರನ ಪೂಜೆ ನಡೆಯುತ್ತದೆ. ಆದರೆ, ಇಲ್ಲಿಗೆ ಬರುವ ದೇಶ–ವಿದೇಶದ ಪ್ರವಾಸಿಗರ ಪೈಕಿ ಕೆಲವರು ತುಂಡುಡುಗೆಗಳನ್ನು ತೊಟ್ಟು ಹಂಪಿಯಲ್ಲಿ ಓಡಾಡುತ್ತಾರೆ. ಅದೇ ರೀತಿ ವಿರೂಪಾಕ್ಷೇಶ್ವರ ದೇಗುಲದ ಒಳಗೂ ಹೋಗುತ್ತಾರೆ. ಇದರಿಂದ ದೇಗುಲದ ಪಾವಿತ್ರ್ಯತೆಗೆ ಧಕ್ಕೆ ಉಂಟಾಗುತ್ತದೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ವಸ್ತ್ರ ಸಂಹಿತೆ ಜಾರಿಗೊಳಿಸಿದರೆ ಎಲ್ಲರಲ್ಲೂ ಧಾರ್ಮಿಕ, ಏಕಚಿತ್ತದ ಭಾವ ಬರುತ್ತದೆ. ಹಿಂದೂ ಸಂಪ್ರದಾಯದ ಉಡುಗೆ ತೊಡುಗೆ ಬಗ್ಗೆ ಗೌರವ ಹೆಚ್ಚಾಗುತ್ತದೆ’ ಎಂದು ವಿವರಿಸಿದ್ದಾರೆ.
‘ದೇಗುಲದ ಪರಿಸರದಲ್ಲಿ ವಿರೂಪಾಕ್ಷ ದೇವರ ಜತೆಗೆ ಪಂಪಾಂಬಿಕೆ, ಭುವನೇಶ್ವರಿ ದೇವಿ ಮೂರ್ತಿಗಳಿವೆ. ಶೈವಾಗಮ ಸಂಪ್ರದಾಯದ ಪ್ರಕಾರ ತ್ರಿಕಾಲ ಪೂಜೆ, ದೀವಟಿಗೆ, ತೊಟ್ಟಿಲು, ಫಲಪೂಜೆ, ಕಡುಬಿನ ಕಾಳಗ, ನವರಾತ್ರಿ ಉತ್ಸವ, ಶಿವರಾತ್ರಿ ಜಾಗರಣೆ, ತೆಪ್ಪೋತ್ಸವ, ಜೋಡಿ ರಥೋತ್ಸವ ಸೇರಿದಂತೆ ಇತರೆ ಧಾರ್ಮಿಕ ಆಚರಣೆಗಳು ನಡೆಯುತ್ತವೆ. ಅದಕ್ಕೆ ಧಕ್ಕೆ ಉಂಟಾಗದಿರಲಿ ಎನ್ನುವುದು ಸಂಹಿತೆಯ ಉದ್ದೇಶವಾಗಿದೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.