ಕೂಡ್ಲಿಗಿ: ಪಟ್ಟಣದಲ್ಲಿ ಗುರು ಭವನ ನಿರ್ಮಾಣ ಕಾರ್ಯ ಆರಂಭವಾಗಿ ಏಳು ವರ್ಷ ಕಳೆದರೂ ಕಟ್ಟಡ ನೆಲ ಬಿಟ್ಟು ಮೇಲೇಳದೆ, ಗುಂಡಿಯಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪಾತ್ತಿ ತಾಣವಾಗಿ ಮಾರ್ಪಟ್ಟಿದೆ.
ಅಧಿಕಾರಿಗಳು ಹಾಗೂ ಶಿಕ್ಷಕರು ಸೇರಿ ಪ್ರತಿ ವರ್ಷ ಶಿಕ್ಷಕರ ದಿನವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಅಂದು ಮಾತ್ರ ಗುರುಭವನದ ನಿರ್ಮಾಣದ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಆದರೆ ಕಾಮಗಾರಿ ಜಾರಿಯಾಗಿಲ್ಲ ಎಂದು ಬಹುತೇಕ ಶಿಕ್ಷಕರು ಅಭಿಪ್ರಾಯ ಪಡುತ್ತಾರೆ.
ಪಟ್ಟಣದ ಚೋರನೂರು ರಸ್ತೆಯಲ್ಲಿನ ಬಡಾವಣೆಯಲ್ಲಿ 80-60 ಅಡಿ ಅಳತೆಯ ನಿವೇಶನ ಗುರುತು ಮಾಡಿ, ಇದರಲ್ಲಿ ₹1.25 ಕೋಟಿ ವೆಚ್ಚದಲ್ಲಿ ಮೂರು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿತ್ತು. ಅದರಂತೆ 2017ರಲ್ಲಿ ಅಂದಿನ ಶಾಸಕರಾಗಿದ್ದ ಬಿ. ನಾಗೇಂದ್ರ ಭೂಮಿ ಪೂಜೆ ನೆರವೇರಿಸಿದ್ದರು. ಈ ಸಂದರ್ಭದಲ್ಲಿ ಶಾಸಕರ ಅನುದಾನದಲ್ಲಿ ₹20 ಲಕ್ಷ ಹಣ ಬಿಡುಗಡೆಯಾಗಿದ್ದು, ಕಾಮಗಾರಿಯೂ ಆರಂಭವಾಗಿತ್ತು. ಆದರೆ ನೆಲ ಮಾಳಿಗೆ ನಿರ್ಮಾಣ ಮಾಡಲು ಸುಮಾರು 10 ಅಡಿಯೊಷ್ಟು ನೆಲ ಅಗಿದು ಫಿಲ್ಲರ್‌ಗಳನ್ನು ಹಾಕಿ ಕೈಬಿಡಲಾಗಿದೆ.
ಕಳೆದ ವಿಧಾನ ಸಭಾ ಚುನಾವಣೆಯ ಮುನ್ನ ಶಾಸಕ ಎನ್.ವೈ. ಗೋಪಾಲಕೃಷ್ಣ ₹1.40 ಕೋಟಿ ಅನುದಾನ ಬಿಡುಗಡೆ ಮಾಡಿಸಿ, ಟೆಂಡರ್ ಪ್ರಕ್ರಿಯೆ ಹಂತಕ್ಕೆ ಬಂದು ನಿಂತಿತ್ತು. ಆದರೆ ಚುನಾವಣೆ ಘೋಷಣೆಯಾಗಿ, ಹೊಸ ಸರ್ಕಾರ ಬಂದ ಮೇಲೆ ಎಲ್ಲಾ ಟೆಂಡರ್‌ಗಳು ಹಿಂಪಡೆದಿದ್ದರಿಂದ ನಿರ್ಮಾಣ ಕಾರ್ಯ ಮತ್ತೆ ನಿಂತು ಹೋಯಿತು. ಇದೀಗ ಈ ನಿವೇಶನ ಮಳೆ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ತಾಣವಾಗಿದೆ.
ಶಿಕ್ಷಕರು ನೀಡಿದ ವಂತಿಗೆಯ ಖರ್ಚು ವೆಚ್ಚದ ಬಗ್ಗೆ ಮಾಹಿತಿ ಸಿಗುತ್ತಿಲ್ಲ ಎಂದು ಹೆಸರು ಹೇಳಲು ಇಚ್ಚಿಸದ ಶಿಕ್ಷಕರೊಬ್ಬರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಇನ್ನಾದರೂ ಶಾಸಕರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಗಮನ ಹರಿಸಿ ಶಿಕ್ಷಕರ ಅನುಕೂಲಕ್ಕಾಗಿ ಗುರುಭವನ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಅನೇಕ ಶಿಕ್ಷಕರು ಒತ್ತಾಯಿಸಿದ್ದಾರೆ.
ಪಟ್ಟಣದಲ್ಲಿ ಗುರುಭವನ ನಿರ್ಮಾಣ ಮಾಡಬೇಕು ಎಂಬುವ 35 ವರ್ಷಗಳ ಶಿಕ್ಷಕರ ಕನಸು ನನಸಾಗುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಇದರಿಂದ ಶಿಕ್ಷಕರು ತಮ್ಮ ಕಾರ್ಯಕ್ರಮಗಳನ್ನು ನಡೆಸಲು ಪರದಾಡುವ ಸ್ಥಿತಿ ಇದೆ. ಇನ್ನಾದರೂ ಗುರು ಭವನ ನಿರ್ಮಾಣವಾಗಲಿ ಎಂಬುದು ತಾಲ್ಲೂಕಿನ ಶಿಕ್ಷಕರ ಆಶಯವಾಗಿದೆ.
ಭವನ ನಿರ್ಮಾಣ ಮಾಡಲು ₹1.40 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ. ತಾಂತ್ರಿಕ ಸಮಸ್ಯೆಗಳಿದ್ದು ಅವುಗಳನ್ನು ನಿವಾರಿಸಿಕೊಂಡು ಮುಂದುವರಿಯಲಾಗುವುದುಶ್ರೀನಿವಾಸ್ ಎನ್.ಟಿ., ಶಾಸಕ
ಗುರು ಭವನ ಪೂರ್ಣ ಗೊಳಿಸಲು ಶಾಸಕ ಶ್ರೀನಿವಾಸ್ ಎನ್.ಟಿ. ಅವರು ಮುಂದಾಗಿದ್ದು ಅನುದಾನ ಬಿಡುಗಡೆ ಪ್ರಕ್ರಿಯೆ ನಡೆದಿದೆ. ಶೀಘ್ರದಲ್ಲಿಯೇ ನಿರ್ಮಾಣ ಆರಂಭವಾಗುವ ವಿಶ್ವಾಶವಿದೆ.ಗೌಡ್ರು ಕೊಟ್ರೇಶ್, ಅಧ್ಯಕ್ಷರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲ್ಲೂಕು ಘಟಕ ಕೂಡ್ಲಿಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.