ADVERTISEMENT

ಹೈಬ್ರಿಡ್ ಜೋಳದ ಬೆಲೆ ಕುಸಿತ; ಆರಂಭವಾಗದ ಜೋಳ ಖರೀದಿ ಕೇಂದ್ರ

ಕಂಗಾಲಾದ ರೈತರು

​ಪ್ರಜಾವಾಣಿ ವಾರ್ತೆ
Published 9 ಜನವರಿ 2024, 5:43 IST
Last Updated 9 ಜನವರಿ 2024, 5:43 IST
ತೆಕ್ಕಲಕೋಟೆ ಸಮೀಪದ ಹಳೇಕೋಟೆ ಗ್ರಾಮದ ರೈತ ಪಂಪಣ್ಣ ಜೋಳದ ಒಕ್ಕಲು ಮಾಡುತ್ತಿರುವುದು
ತೆಕ್ಕಲಕೋಟೆ ಸಮೀಪದ ಹಳೇಕೋಟೆ ಗ್ರಾಮದ ರೈತ ಪಂಪಣ್ಣ ಜೋಳದ ಒಕ್ಕಲು ಮಾಡುತ್ತಿರುವುದು   

ಸಿರುಗುಪ್ಪ: ಭತ್ತದ ನಾಡು ಸಿರುಗುಪ್ಪ ತಾಲ್ಲೂಕಿನಲ್ಲಿ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹೈಬ್ರಿಡ್ ಜೋಳ ಬೆಳೆಯಲಾಗಿದ್ದು, ಕೊಯ್ಲು ಆರಂಭವಾಗುತ್ತಿದ್ದಂತೆ ಮಾರುಕಟ್ಟೆಯಲ್ಲಿ ಕುಸಿದ ದರ ರೈತರನ್ನು ಆತಂಕಕ್ಕೀಡು ಮಾಡಿದೆ.

ವ್ಯಾಪಕ ಪ್ರಮಾಣದಲ್ಲಿ ಹೈಬ್ರಿಡ್ (ನಂಬರ್) ಜೋಳ ಬೆಳೆದಿದ್ದ ರೈತರು ಕಟಾವು ಪ್ರಾರಂಭಿಸುತ್ತಿದ್ದಂತೆ ಕ್ವಿಂಟಲ್‌ಗೆ ₹500 ರಿಂದ ₹700ವರೆಗೆ ದರ ಕುಸಿತ ಕಂಡಿದೆ. ಸದ್ಯ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ಕನಿಷ್ಠ ₹2,800 ದಿಂದ ಗರಿಷ್ಠ ₹3,000 ಧಾರಣೆಯಲ್ಲಿ ವರ್ತಕರು ಖರೀದಿಸುತ್ತಿದ್ದಾರೆ. ಜೋಳ ಖರೀದಿ ಕೇಂದ್ರ ಆರಂಭವಾಗದ ಹಿನ್ನೆಲೆಯಲ್ಲಿ ದರ ಕುಸಿದಿರುವುದು ರೈತರನ್ನು ಚಿಂತೆಗೀಡು ಮಾಡಿದೆ.

ಬರಗಾಲ ಅನುಭವಿಸಿ ಕಂಗೆಟ್ಟಿದ್ದ ಅನ್ನದಾತ ಭತ್ತ, ಮೆಣಸಿನ ಕಾಯಿ ಫಸಲು ಕೈ ಬಿಟ್ಟು ಬೆಳೆದ ಜೋಳ ಇನ್ನೇನು ಕೈಹಿಡಿಯಿತು ಎನ್ನುವಾಗಲೇ ಬೆಲೆ ಕುಸಿದಿರುವುದು ರೈತರನ್ನು ನಿರಾಸೆಗೊಳಿಸಿದೆ.

ADVERTISEMENT

ತಾಲ್ಲೂಕಿನ ಕೆಲ ಹೋಬಳಿಗಳಲ್ಲಿ ಜೋಳದ ಕೊಯ್ಲು ಆರಂಭವಾಗಿದೆ. ಎಕರೆಗೆ 20 ಕ್ವಿಂಟಲ್ ಸರಾಸರಿಯಲ್ಲಿ ಜೋಳ ಇಳುವರಿ ಬರಲಿದೆ ಎಂಬುದು ರೈತರ ನಿರೀಕ್ಷೆ. ಈ ಪ್ರಕಾರ ತಾಲ್ಲೂಕಿನಲ್ಲಿ 20 ಲಕ್ಷ ಕ್ವಿಂಟಲ್‌ಗೂ ಅಧಿಕ ಜೋಳ ಉತ್ಪಾದನೆ ಆಗುವ ಬಗ್ಗೆ ಅಂದಾಜಿಸಲಾಗಿದೆ.

ಪ್ರತಿ ಬಾರಿಯೂ ಸರ್ಕಾರ ತಡವಾಗಿ ಜೋಳ ಖರೀದಿ ಕೇಂದ್ರ ತೆರೆಯುವುದರಿಂದ ಬೆಂಬಲ ಬೆಲೆ ಯೋಜನೆಯ ಲಾಭ ರೈತರಿಗೆ ದೊರೆಯದೇ ವ್ಯಾಪಾರಿಗಳಿಗೆ ಮಾತ್ರ ಅನುಕೂಲ ಆಗುತ್ತದೆ ಎಂಬುದು ಇಲ್ಲಿನ ರೈತರ ಅಭಿಪ್ರಾಯವಾಗಿದೆ. ಸರ್ಕಾರ ಖರೀದಿ ಕೇಂದ್ರ ತೆರೆಯುವ ತನಕ ಕಾಯಲು ಸಾಧ್ಯವಾಗದೇ ವ್ಯಾಪಾರಿ ನಿಗದಿ ಮಾಡುವ ದರಕ್ಕೆ ಮಾರಾಟ ಮಾಡುವುದರಿಂದ ರೈತರು ನಷ್ಟಕ್ಕೆ ಗುರಿಯಾಗುತ್ತಿದ್ದಾರೆ.

ತಾಲ್ಲೂಕಿನಲ್ಲಿ ವ್ಯಾಪಕ ಪ್ರಮಾಣದಲ್ಲಿ ಜೋಳ ಉತ್ಪಾದನೆ ಆಗಿರುವುದರಿಂದ ಕೂಡಲೇ ಸೂಕ್ತ ಗೋದಾಮು ವ್ಯವಸ್ಥೆ ಮಾಡಿಕೊಂಡು, ಬೆಂಬಲ ಬೆಲೆ ಅಡಿ ಜೋಳ ಖರೀದಿ ಕೇಂದ್ರ ತೆರೆಯುವಂತೆ ಆಗ್ರಹಿಸಿದ್ದಾರೆ.

'ಈ ಬಾರಿ ಮಳೆ ಕೈಕೊಡ್ತು, ಮೊದಲು ಹಾಕಿದ್ದ ಬೆಳೆ ಕೆಡಿಸಿ ಮತ್ತೆ ಜೋಳ ಬಿತ್ತಿದೆ. ಜೋಳ ಕೈ ಹಿಡಿಯಬಹುದು ಅಂತ ತಿಳ್ಕಂಡಿದ್ದೆ. ಆದ್ರೆ ರೇಟ್ ಇಲ್ಲ ಸಾರ್' ಎಂದು ಹಳೇಕೋಟೆ ಪಂಪಣ್ಣ ಅಲವತ್ತುಕೊಂಡರು.

ಈ ವರ್ಸ ಮಳಿ ಇಲ್ರಿ, ಎರಡನೆ ಬಾರಿ ಬಿತ್ತಿದ ಜೋಳ ಚಲೋ ಆಗೇತಿ. ಆದ್ರ ಮಾರ್ಕೆಟ್ನಾಗ ಬೆಳಿಗೆ ತಕ್ಕ ಬೆಲೆ ಸಿಗದೇ ಲುಕ್ಸಾನು ಆಗತೈತಿ. ಒಂದು ಕ್ವಿಂಟಲ್ ಜೋಳಕ್ಕ ₹2,800 ಧಾರಣಿ ಆದ್ರ ಯಾವ ರೈತ ಉಳಿತಾನ?’ ಎಂದು ಬಲಕುಂದಿ ಗ್ರಾಮದ ರೈತ ಶರಣಬಸವ ಬೇಸರ ವ್ಯಕ್ತಪಡಿಸಿದರು.

ತೆಕ್ಕಲಕೋಟೆ ಪಟ್ಟಣ ಸಮೀಪದ ಮಳೆಯಾಶ್ರಿತ ಜಮೀನಿನಲ್ಲಿ ರೈತ ಮಹಮ್ಮದ್ ಗೌಸ್ ಜೋಳದ ಕೊಯ್ಲು ಮಾಡಿರುವುದು
ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್ ಪಿ ಸಿ)ದಲ್ಲಿ ಮ್ಯಾಪಿಂಗ್ ಕಾರ್ಯ ಬಾಕಿ ಇದ್ದು ಒಂದು ವಾರದೊಳಗಾಗಿ ಸಿರುಗುಪ್ಪ ತಾಲ್ಲೂಕಿನ ಜೋಳ ಖರೀದಿ ಕೇಂದ್ರ ಕಾರ್ಯಾಚರಿಸುವ ನಿರೀಕ್ಷೆ ಇದೆ
ಆಶಿಕ್ ಅಲಿ ಜಿಲ್ಲಾ ವ್ಯವಸ್ಥಾಪಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಬಳ್ಳಾರಿ

ರೈತರಿಗೆ ನಿರಾಶೆ:

ಬರದ ಮಧ್ಯೆಯೂ ಮುತ್ತಿನಂಥ ಹೈಬ್ರಿಡ್ ಜೋಳ ಬೆಳೆದು ರೈತರು ಸಂತಸಗೊಂಡಿದ್ದರು. ಜೋಳದ ತಳಿಗಳಾದ ಹೈಟೆಕ್ 3201 ಹೈಟೆಕ್ 3206 ಮಹಾಲಕ್ಷಿ 296 ಗೋಲ್ಡ್ ಪ್ರಧಾನ ಸಿ ಎಸ್ ಎಚ್ 14 ಹಾಗೂ ಎಂ 35-1 ತಳಿಯನ್ನು ರೈತರು ಬಿತ್ತನೆ ಮಾಡಿದ್ದರು. ಅಲ್ಲದೆ ಜೋಳ ಬಿತ್ತನೆಯ ಗುರಿ 3972 ಹೆಕ್ಟೇರ್ ಇದ್ದದ್ದು ಈ ಬಾರಿ ಗುರಿ ಮೀರಿ 9956 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದು ಜೋಳದ ಕಣಜವಾಗಿ ಮಾರ್ಪಟ್ಟಿದ್ದ ಸಿರುಗುಪ್ಪ ತಾಲ್ಲೂಕು ಈಗ ಜೋಳದ ದರ ಕುಸಿತದಿಂದಾಗಿ ರೈತರು ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ. ಸರ್ಕಾರವು ಬಿಳಿಜೋಳ-ಹೈಬ್ರಿಡ್ ಪ್ರತಿ ಕ್ವಿಂಟಲ್‍ಗೆ ದರ ₹3180 ಬಿಳಿಜೋಳ-ಮಾಲ್ದಂಡಿ ಪ್ರತಿ ಕ್ವಿಂಟಲ್‍ಗೆ ದರ ₹3225 ಘೋಷಿಸಿದೆ. ಆದರೆ ಜೋಳ ಖರೀದಿ ಕೇಂದ್ರ ಆರಂಭವಾಗದ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು ಬೆಂಬಲ ಬೆಲೆಗಿಂತಲೂ ಕಡಿಮೆ ದರ ನಿಗದಿ ಪಡಿಸಿದ್ದು ಹೆಚ್ಚಿನ ಬೆಲೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಶೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.