ADVERTISEMENT

ಕೋವಿಡ್‌ ಅಕ್ರಮ | ವರದಿ ಕೈಸೇರಿದ ಬಳಿಕ ತನಿಖೆ ನಿರ್ಧಾರ: ಸಿಎಂ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2024, 23:55 IST
Last Updated 9 ನವೆಂಬರ್ 2024, 23:55 IST
ಸಿದ್ದರಾಮಯ್ಯ 
ಸಿದ್ದರಾಮಯ್ಯ    

ಬಳ್ಳಾರಿ: ‘ಕೋವಿಡ್‌ ಕಾಲದ ಅಕ್ರಮದ ಕುರಿತ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ ಕುನ್ಹಾ ಆಯೋಗದ ಮಧ್ಯಂತರ ವರದಿಯನ್ನು ಪರಿಶೀಲಿಸಿ ಸಂಪುಟ ಉಪ ಸಮಿತಿಯು ಸರ್ಕಾರಕ್ಕೆ ವರದಿ ಕೊಟ್ಟ ಬಳಿಕ ತನಿಖೆ ಕುರಿತು ತೀರ್ಮಾನಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.  

ಸಂಡೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತೋರಣಗಲ್‌ನಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನಾನು ವಿರೋಧ ಪಕ್ಷದ ನಾಯಕನಾಗಿದ್ದಾಗಲೇ ಕೋವಿಡ್‌ ಅಕ್ರಮದ ಕುರಿತು ಸದನದ ಒಳಗೆ–ಹೊರಗೆ ಹೋರಾಟ ಮಾಡಿದ್ದೆ. ಸರ್ಕಾರ ಬಂದ ಬಳಿಕ ಆಯೋಗ ರಚಿಸಲಾಗಿತ್ತು’ ಎಂದರು.

‘ಮುಡಾ ವಿಷಯಕ್ಕೂ ಹಿಂದೆಯೇ ಹಗರಣದ ಬಗ್ಗೆ ನಾನು ಮಾತನಾಡಿದ್ದೆ. ಆಯೋಗ ರಚನೆಯನ್ನೂ ಮಾಡಿದ್ದೆ. ಇದರಲ್ಲಿ ರಾಜಕೀಯ ದುರುದ್ದೇಶವೇನೂ ಇಲ್ಲ. ಯಡಿಯೂರಪ್ಪ ಅವರ ಮೇಲೆ ಪೋಕ್ಸೊ ಪ್ರಕರಣ ಇದೆ. ಅದು ರಾಜಕೀಯ ದುರುದ್ದೇಶವೇ’ ಎಂದು ಅವರು ಪ್ರಶ್ನಿಸಿದರು.

ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯ 15 ದಿನಗಳಲ್ಲಿ ರಾಜೀನಾಮೆ ನೀಡಲಿದ್ದಾರೆ ಎಂಬ ಬಿ.ಎಸ್‌ ಯಡಿಯೂರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಯಡಿಯೂರಪ್ಪ ಶಾಸ್ತ್ರ ಹೇಳುತ್ತಾರಾ? ಮುಡಾ ಹಗರಣದಲ್ಲಿ ನಾನು ತಪ್ಪು ಮಾಡಿಲ್ಲ ಎಂಬುದು ನನ್ನ ಆತ್ಮಸಾಕ್ಷಿಗೆ ಗೊತ್ತಿದೆ’ ಎಂದರು. 

‘ಯಡಿಯೂರಪ್ಪ ₹2 ಸಾವಿರ ಕೋಟಿ ಕೊಟ್ಟು ಮುಖ್ಯಮಂತ್ರಿಯಾದರೆ, ವಿಜಯೇಂದ್ರ ಹಣ ಕೊಟ್ಟು ಬಿಜೆಪಿ ಅಧ್ಯಕ್ಷರಾದರು ಎಂದು ಬಿಜೆಪಿ ನಾಯಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. ಇದರ ಬಗ್ಗೆ ಯಡಿಯೂರಪ್ಪ ಮಾತನಾಡಲಿ’ ಎಂದು ಸವಾಲು ಹಾಕಿದರು.

‘ಗೃಹಲಕ್ಷ್ಮಿ ಯೋಜನೆಯಲ್ಲಿ ಹೆಣ್ಣುಮಕ್ಕಳಿಗೆ ಹಣ ನೀಡಲು ಸರ್ಕಾರದ ಬಳಿ ಹಣವೇ ಇಲ್ಲ’ ಎಂಬ ಜೆಡಿಎಸ್ ವರಿಷ್ಠಎಚ್‌.ಡಿ. ದೇವೇಗೌಡರ ಆರೋಪಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಯವರು, ‘ದೇವೇಗೌಡರು ಸುಳ್ಳು ಹೇಳುತ್ತಾರೆ. ಅಕ್ಟೋಬರ್‌ವರೆಗಿನ ಗೃಹಲಕ್ಷ್ಮಿ ಹಣ ಕೊಟ್ಟಿದ್ದೇವೆ. ನವೆಂಬರ್‌ ತಿಂಗಳಿನದ್ದು ಕೊಡಬೇಕು. ವಿಳಂಬವಾದ ಮಾತ್ರಕ್ಕೆ ಸರ್ಕಾರದ ಬಳಿ ಹಣವಿಲ್ಲ ಎಂದಲ್ಲ. ಅದಕ್ಕೆ ಬೇರೆ ಬೇರೆ ಕಾರಣ ಇರುತ್ತವೆ’ ಎಂದರು. 

ನಾಗೇಂದ್ರಗೆ ಮತ್ತೆ ಸಚಿವಗಿರಿ?: ವಾಲ್ಮೀಕಿ ನಿಗಮದ ಹಗರಣದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನಾಗೇಂದ್ರ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ತೆಗೆದುಕೊಳ್ಳುವರೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಚುನಾವಣೆಗಳು ನಡೆದಿವೆ. ಚುನಾವಣೆಗಳು ಮುಗಿಯಲಿ. ಬಳಿಕ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದರು. ಇದಕ್ಕೂ ಮುನ್ನ, ವಾಲ್ಮೀಕಿ ನಿಗಮದ ವಿಷಯದಲ್ಲಿ ನಾಗೇಂದ್ರ ವಿರುದ್ಧ ಸುಳ್ಳು ಪ್ರಕರಣ ದಾಖಲಾಗಿದೆ ಎಂದರು.

‘₹15 ಸಾವಿರ ಕೋಟಿ ಭ್ರಷ್ಟಾಚಾರ’
ಬೆಂಗಳೂರು: ಕೋವಿಡ್‌ ಸಮಯದಲ್ಲಿ ಸುಮಾರು ₹15 ಸಾವಿರ ಕೋಟಿ ಭ್ರಷ್ಟಾಚಾರ ನಡೆದಿದೆ ಎನ್ನಲಾಗಿದ್ದು, ತನಿಖಾ ಸಮಿತಿ ಆ ಎಲ್ಲ ದಾಖಲೆಗಳನ್ನು ಸಂಗ್ರಹಿಸಿರಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕೋವಿಡ್‌ನಿಂದ ರಾಜ್ಯದಲ್ಲಿ ಮಕ್ಕಳು, ಮಹಿಳೆಯರು ಸೇರಿ 50 ಸಾವಿರಕ್ಕೂ ಹೆಚ್ಚಿನ ಜನರು ಮೃತಪಟ್ಟಿದ್ದಾರೆ. ರಾಜ್ಯ ಸರ್ಕಾರ ಅಂದು ಸಕಾಲದಲ್ಲಿ ಚಿಕಿತ್ಸೆ, ಔಷಧಿ ಮತ್ತು ಪ್ರತಿಬಂಧಕ ಕ್ರಮಗಳನ್ನು ಕೈಗೊಂಡಿದ್ದರೆ ಇಷ್ಟೊಂದು ಸಾವು ಖಂಡಿತ ಸಂಭವಿಸುತ್ತಿರಲಿಲ್ಲ. ಜನ ಕೊರೊನಾ ವೈರಸ್‌ಗಿಂತ ಹೆಚ್ಚಾಗಿ ಬಿಜೆಪಿಯ ಭ್ರಷ್ಟಾಚಾರದ ವೈರಸ್‌ನಿಂದ ಮೃತಪಟ್ಟಿರು. ಈ ಸಾವಿಗೆ ಅಂದಿನ ಬಿಜೆಪಿ ಸರ್ಕಾರವೇ ನೇರ ಹೊಣೆ ಎಂದು ದೂರಿದ್ದಾರೆ. ಸಾವನ್ನೂ ಸಂಭ್ರಮಿಸುವ, ಹೆಣ ಬಿದ್ದಲ್ಲಿ ರಾಜಕೀಯದ ಬೇಳೆ ಬೇಯಿಸುವ ಬಿಜೆಪಿ ಮತ್ತು ಅದರ ನೇತೃತ್ವದ ಆಗಿನ ಸರ್ಕಾರ ಕೊರೊನಾ ಕಾಲದಲ್ಲಿಯೂ ಇದೇ ಕೆಲಸ ಮಾಡಿದೆ. ಜನರು ಸಾಯುತ್ತಿರುವಾಗ ಹಾಸಿಗೆ, ವೆಂಟಿಲೇಟರ್, ಔಷಧಿ, ಪಿಪಿಇ ಕಿಟ್, ವ್ಯಾಕ್ಸಿನ್, ಮಾಸ್ಕ್, ಸ್ಯಾನಿಟೈಸರ್‌ ಖರೀದಿಯಲ್ಲೂ ದುಡ್ಡು ಹೇಗೆ ಬಾಚಬಹುದು ಎನ್ನುವ ಲೆಕ್ಕದಲ್ಲಿ ತೊಡಗಿತ್ತು. ಇದು ಬಿಜೆಪಿ ನಾಯಕರ ಅಮಾನವೀಯ ನಡವಳಿಕೆ ಎಂದು ಟೀಕಿಸಿದ್ದಾರೆ. ‘ಯಡಿಯೂರಪ್ಪನವರ ಮಗ ವಿಜಯೇಂದ್ರ ತಾನೊಬ್ಬ ಸತ್ಯ ಹರಿಶ್ಚಂದ್ರನ ಮಗನಂತೆ ಕಾಂಗ್ರೆಸ್‌ ವಿರುದ್ಧ ಸುಳ್ಳು ಆರೋಪ ಮಾಡುತ್ತಾ ತಿರುಗಾಡುತ್ತಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿಯೂ ಆಡಳಿತದ ಸೂತ್ರ ವಿಜಯೇಂದ್ರನ ಕೈಯಲ್ಲಿಯೇ ಇತ್ತು. ಮುಖ್ಯಮಂತ್ರಿ ಸಹಿಯನ್ನು ತಾನೇ ಹಾಕುತ್ತಿದ್ದ ಎಂದು ಅವರ ಪಕ್ಷದ ನಾಯಕರೇ ಆರೋಪ ಮಾಡಿದ್ದಾರೆ. ಕೊರೊನಾ ಭ್ರಷ್ಟಾಚಾರದಲ್ಲೂ ಅವರ ಪಾಲು ಇದೆ’ ಎಂದು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.