ಹೊಸಪೇಟೆ (ವಿಜಯನಗರ): ಕೋವಿಡ್, ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರ ಪರವಾದ ಬಜೆಟ್ ಮಂಡಿಸದೇ ಕಾರ್ಪೊರೇಟ್‌ನವರಿಗೆ ಕೇಂದ್ರ ಸರ್ಕಾರ ಮಣೆ ಹಾಕಿದೆ ಎಂದು ಆರೋಪಿಸಿ ಸಿಪಿಎಂ ಕಾರ್ಯಕರ್ತರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಆದಾಯ ತೆರಿಗೆ ವ್ಯಾಪ್ತಿ ಹೊರಗಿನ ಎಲ್ಲ ಕುಟುಂಬಗಳಿಗೆ ಮಾಸಿಕ ₹7,500 ನೇರ ನಗದು ವರ್ಗಾವಣೆ, ಉಚಿತ ಆಹಾರ ಕಿಟ್‌ಗಳ ವಿತರಣೆಗೆ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ಮಾಡಿಲ್ಲ. ಉದ್ಯೋಗ ಖಾತ್ರಿ ಯೋಜನೆಗೆ ₹25,000 ಕೋಟಿ ಕಡಿತ ಮಾಡಲಾಗಿದೆ. ಆಹಾರ, ಇಂಧನ, ರಸಗೊಬ್ಬರ ಸಬ್ಸಿಡಿ ಕಡಿತಗೊಳಿಸಲಾಗಿದೆ. ಆರೋಗ್ಯ ಮತ್ತು ಗ್ರಾಮೀಣ ಅಭಿವೃದ್ಧಿ ಹಂಚಿಕೆಯೂ ಕಡಿಮೆಗೊಳಿಸಿರುವುದು ಜನವಿರೋಧಿ ನಿಲುವು ತೋರಿಸುತ್ತದೆ ಎಂದು ಟೀಕಿಸಿದರು.
ಕಳೆದ ಎರಡು ವರ್ಷಗಳಿಂದ ಎಲ್‌ಪಿಜಿ ಸಬ್ಸಿಡಿಯಲ್ಲಿ ಭಾರಿ ಕಡಿತ ಮಾಡಲಾಗಿದೆ. ಇ-ಶ್ರಮ್ ಪೋರ್ಟಲ್ ಮೂಲಕ ನೋಂದಣಿ ಮಾಡಿಸಿಕೊಂಡ ಅಸಂಘಟಿತ ಕಾರ್ಮಿಕರಿಗೆ ಯಾವುದೇ ಅನುದಾನ ನೀಡಿಲ್ಲ. ಶ್ರೀಮಂತರು, ಕಾರ್ಪೊರೇಟ್‌ನವರಿಗೆ ಮಣೆ ಹಾಕಲಾಗಿದೆ ಎಂದು ಆರೋಪಿಸಿದರು.
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಆರ್. ಭಾಸ್ಕರ್ ರೆಡ್ಡಿ, ಎನ್. ಯಲ್ಲಾಲಿಂಗ, ಬಿಸಾಟಿ ಮಹೇಶ, ಮಂಜುನಾಥ, ಗೋಪಾಲ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.