ADVERTISEMENT

ವಿಧಾನಸಭಾ ಚುನಾವಣೆಯಲ್ಲಿ ಸೋಲು: ಶ್ರೀರಾಮುಲು ಮನೆ ಮುಂದೆ ಬೆಂಬಲಿಗರ ಕಣ್ಣೀರು

​ಪ್ರಜಾವಾಣಿ ವಾರ್ತೆ
Published 16 ಮೇ 2023, 6:05 IST
Last Updated 16 ಮೇ 2023, 6:05 IST
ಶ್ರೀರಾಮುಲು
ಶ್ರೀರಾಮುಲು   

ಬಳ್ಳಾರಿ: ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಸೋತ ಬಿಜೆಪಿ ನಾಯಕ ಬಿ. ಶ್ರೀರಾಮುಲು ಅವರ ಮನೆಗೆ ಧಾವಿಸುತ್ತಿರುವ ಬೆಂಬಲಿಗರು ಕಣ್ಣೀರು ಹಾಕುತ್ತಿದ್ದಾರೆ.

ಪ್ರತಿ ದಿನ ಶ್ರೀರಾಮುಲು ಅವರ ಮನೆಗೆ ಬರುತ್ತಿರುವ ಬೆಂಬಲಿಗರು ತಮ್ಮ ನೆಚ್ಚಿನ ನಾಯಕನಿಗೆ ಬಂದಿರುವ ಸ್ಥಿತಿ ಕಂಡು ಕಣ್ಣೀರು ಹಾಕುತ್ತಿದ್ದಾರೆ. ಶ್ರೀರಾಮುಲು ಅವರೇ ಸಾಂತ್ವನ ಹೇಳಿ  ಅವರನ್ನು ಕಳುಹಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಫಲಿತಾಂಶ ಪ್ರಕಟವಾದ ದಿನವೇ ಶ್ರೀರಾಮುಲು ಬಳ್ಳಾರಿ ತಾಲ್ಲೂಕಿನ ಮೋಕಾಗೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ಬೆಂಬಲಿಗನೊಬ್ಬ ಶ್ರೀರಾಮುಲು ಕಾಲಿಗೆರಗಿ ಕಣ್ಣೀರು ಹಾಕಿದಾಗ ಸುತ್ತ ಕುಳಿತಿದ್ದವರಲ್ಲಿ ಹೆಪ್ಪುಗಟ್ಟಿದ ದುಃಖ ಕಣ್ಣೀರಾಯಿತು. ಬೆಂಬಲಿಗರನ್ನು ಕಂಡು ಭಾವೋದ್ವೇಗಕ್ಕೆ ಒಳಗಾದ ಶ್ರೀರಾಮುಲು ಅವರೂ ಕಣ್ಣೀರು ಹಾಕಿದರು. ಈ ಸಂದರ್ಭದಲ್ಲಿ ತೆಗೆದಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. 

ADVERTISEMENT

ಅಕ್ಕಪಕ್ಕದಲ್ಲಿ ಕುಳಿತಿದ್ದ ಕೆಲವರು ಬೆಂಬಲಿಗನನ್ನು ಎಬ್ಬಿಸಿ, ‘ಚುನಾವಣೆ ಫಲಿತಾಂಶದಿಂದ ಶ್ರೀರಾಮುಲು ಅವರೂ ನೊಂದಿದ್ದಾರೆ. ನೀನೇ ಈ ರೀತಿ ಮಾಡಿದರೆ ಅವರಿಗೆ ಕಷ್ಟವಾಗುತ್ತದೆ’ ಎಂದು ಸಮಾಧಾನಪಡಿಸುತ್ತಾರೆ. ಒಂದು ಹಂತದಲ್ಲಿ, ಶ್ರೀರಾಮುಲು ಅವರೂ ‘ಎಲ್ಲ ಧರ್ಮ– ಕರ್ಮಗಳನ್ನು ದೇವರು ನೋಡಿಕೊಳ್ಳುತ್ತಾನೆ’ ಎಂದು ಹೇಳುವುದೂ ವಿಡಿಯೋದಲ್ಲಿದೆ.

ಶ್ರೀರಾಮುಲು ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಕಾಂಗ್ರೆಸ್‌ನ ಬಿ. ನಾಗೇಂದ್ರ ವಿರುದ್ಧ ಸೋತರು. 1999ರಲ್ಲಿ ಮೊದಲ ಬಾರಿಗೆ ಬಳ್ಳಾರಿ ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರು ದಿವಾಕರ ಬಾಬು ವಿರುದ್ಧ ಸೋತರು. 2004ರ ಚುನಾವಣೆಯಲ್ಲಿ ದಿವಾಕರ ಬಾಬು ವಿರುದ್ಧ ಗೆದ್ದು ಮೊದಲ ಸಲ ವಿಧಾನಸಭೆ ಪ್ರವೇಶಿಸಿದರು.

2008ರಲ್ಲಿ ಕ್ರೇತ್ರಗಳ ಪುನರ್‌ವಿಂಗಡಣೆ ಆದ ಬಳಿಕ ಬಳ್ಳಾರಿ ಗ್ರಾಮೀಣ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಾಯಿತು. ಆಗ ಶ್ರೀರಾಮುಲು ಗ್ರಾಮೀಣದಿಂದ ಸ್ಪರ್ಧಿಸಿ ಗೆದ್ದರು. ಬಿಜೆಪಿ ನಾಯಕನ ಆಪ್ತ ಗಾಲಿ ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆ ಆರೋಪಕ್ಕೆ ಸಿಕ್ಕಿ ಜೈಲು ಸೇರಿದಾಗ ಶ್ರೀರಾಮುಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಳಿಕ ನಡೆದ ಉಪ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿ ಪುನರಾಯ್ಕೆ ಆದರು.

2013ರಲ್ಲಿ ಬಿಎಸ್‌ಆರ್‌ ಪಕ್ಷ ಸ್ಥಾಪಿಸಿ ಇದೇ ಕ್ಷೇತ್ರದಿಂದ ಮತ್ತೆ ಚುನಾಯಿತರಾದರು. 2014ರ ಲೋಕಸಭೆ ಚುನಾವಣೆ ವೇಳೆ ಬಿಎಸ್‌ಆರ್‌ ಪಕ್ಷವನ್ನು ಬಿಜೆಪಿ ಜತೆ ವಿಲೀನಗೊಳಿಸಿದರು. ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಚುನಾಯಿತರಾಗಿ ರಾಷ್ಟ್ರ ರಾಜಕಾರಣಕ್ಕೆ ತೆರಳಿದರು. 2018ರ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರಿನಿಂದ ಗೆದ್ದರು. 2023ರ ಚುನಾವಣೆಯಲ್ಲಿ ತವರು ಕ್ಷೇತ್ರಕ್ಕೆ ಮರಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.