ADVERTISEMENT

ಅಪಘಾತ ಪರಿಹಾರ ವಿಳಂಬ: ಸಾರಿಗೆ ಸಂಸ್ಥೆ ಎರಡು ಬಸ್‌ಗಳು ಜಪ್ತಿ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2024, 16:08 IST
Last Updated 21 ಸೆಪ್ಟೆಂಬರ್ 2024, 16:08 IST
ಜಪ್ತಿ ಮಾಡಲಾದ ಕೆಕೆಎಸ್‌ಆರ್‌ಟಿಸಿ ಹೊಸಪೇಟೆ ವಿಭಾಗದ ಬಸ್ ಬಳಿ ಸಂತ್ರಸ್ತ ಕುಟುಂಬ
ಜಪ್ತಿ ಮಾಡಲಾದ ಕೆಕೆಎಸ್‌ಆರ್‌ಟಿಸಿ ಹೊಸಪೇಟೆ ವಿಭಾಗದ ಬಸ್ ಬಳಿ ಸಂತ್ರಸ್ತ ಕುಟುಂಬ   

ಸಂಡೂರು (ಬಳ್ಳಾರಿ): ಅಪಘಾತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ಒದಗಿಸಲು ನೀಡಿದ್ದ ಆದೇಶ ಪಾಲನೆ ಮಾಡುವಲ್ಲಿ ವಿಳಂಬ ಮಾಡಿದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ (ಕೆಕೆಎಸ್‌ಆರ್‌ಟಿಸಿ) ಸಂಡೂರು ನ್ಯಾಯಾಲಯ ಬಿಸಿ ಮುಟ್ಟಿಸಿದೆ.

ಹೊಸಪೇಟೆ ವಿಭಾಗದ ಎರಡು ಬಸ್‌ಗಳನ್ನು ಜಪ್ತಿ ಮಾಡುವಂತೆ ನ್ಯಾಯಾಲಯ ಇದೇ ಆಗಸ್ಟ್ 16ರಂದು ಆದೇಶ ನೀಡಿತ್ತು. ಅದರಂತೆ ಶನಿವಾರ ಎರಡು ಬಸ್‌ಗಳನ್ನು ಜಪ್ತಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

2019ರ ಏಪ್ರಿಲ್ 25 ರಂದು ಇಲ್ಲಿನ ಎಚ್.ಆರ್.ಜಿ ಕ್ರಾಸ್ ಬಳಿ ಬೈಕ್ ಮತ್ತು ಬಸ್ ಮಧ್ಯೆ ಅಪಘಾತ ಸಂಭವಿಸಿ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ನಾಣ್ಯಾಪುರದ ಪಾಂಡುರಂಗ ಮತ್ತು ನಾಗರಾಜ್ ಎಂಬುವರು ಮೃತಪಟ್ಟಿದ್ದರು. ಪಾಂಡುರಂಗ ಕುಟುಂಬಕ್ಕೆ ಹೊಸಪೇಟೆ ವಿಭಾಗವು ₹28.31 ಲಕ್ಷ , ನಾಗರಾಜ ಕುಟುಂಬಕ್ಕೆ ₹30.77 ಲಕ್ಷ ಪರಿಹಾರ ನೀಡಬೇಕೆಂದು 2022ರ ನವೆಂಬರ್ 5 ರಂದು ಆದೇಶ ನೀಡಿತ್ತು.

ADVERTISEMENT

ಆದರೆ, ಕೆಕೆಎಸ್‌ಆರ್‌ಟಿಸಿ ಆದೇಶ ಪಾಲನೆ ಮಾಡಿರಲಿಲ್ಲ. ಹೀಗಾಗಿ ಶೇ 6ರ ಬಡ್ಡಿ ಸೇರಿ ₹75 ಲಕ್ಷ ಬಾಕಿ ಲೆಕ್ಕ ಹಾಕಿ, ಎರಡು ಬಸ್‌ಗಳನ್ನು ಜಪ್ತಿ ಮಾಡುವಂತೆ ಸಂಡೂರಿನ ಹಿರಿಯ ಶ್ರೇಣಿ ನ್ಯಾಯಾಧೀಶ ಯೋಗೇಶ್ ಆದೇಶಿಸಿದ್ದರು. ವಕೀಲರಾದ ಅರಳಿ ಮಲ್ಲಪ್ಪ ಹಾಗೂ ಹೇಮರೆಡ್ಡಿ ಪ್ರಕರಣದಲ್ಲಿ ಮೃತರ ಕುಟುಂಬಗಳ ಪರ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.