ಕಮಲಾಪುರ: ತಾಲ್ಲೂಕಿನ ಪಟವಾದ ಗ್ರಾಮವನ್ನು ಮದ್ಯಮುಕ್ತವಾಗಿಸಲು ಗ್ರಾಮಸ್ಥರು ಮತ್ತು ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು ಪಣ ತೊಟ್ಟಿದ್ದಾರೆ. ಹೋಟೆಲ್, ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರದಂತೆ ವರ್ತಕರಿಗೆ ಮನವಿ ಮಾಡಿರುವ ಅವರು ಮದ್ಯಮುಕ್ತ ಅಭಿಯಾನಕ್ಕೆ ಸಹಕಾರ ನೀಡಲು ಕೋರಿದ್ದಾರೆ.
‘ಪಟವಾದ ಗ್ರಾಮವು 2 ಸಾವಿರ ಜನ ಸಂಖ್ಯೆ ಹೊಂದಿದ್ದು, 12 ಕಿರಾಣಿ ಅಂಗಡಿ ಮತ್ತು 3 ಹೋಟೆಲ್‌ಗಳಿವೆ. ಇವುಗಳ ಪೈಕಿ 8 ಕಿರಾಣಿ ಅಂಗಡಿ ಮತ್ತು 2 ಹೋಟೆಲ್‌ಗಳಲ್ಲಿ ಮದ್ಯ ಮಾರಲಾಗುತ್ತಿದೆ. ಚಿಟಗುಪ್ಪ, ಹಳ್ಳಿಕೇಡ, ಸೊಂತ ಗ್ರಾಮದಿಂದಲೂ ಮದ್ಯ ತರಲಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಗ್ರಾಮಸ್ಥರು ತಿಳಿಸಿದರು.
‘ಮದ್ಯ ಮಾರಾಟದ ಜೊತೆಗೆ ಜೂಜಾಟ, ಮಟ್ಕಾದಂತಹ ಅಕ್ರಮ ಚಟುವಟಿಕೆಗಳು ಹೆಚ್ಚಾಗಿವೆ. ಇದರಿಂದ ಹಲವಾರು ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕುಟುಂಬಳು ಬೀದಿಪಾ ಲಾಗುವ ಸ್ಥಿತಿ ತಲುಪಿವೆ. ಇದಕ್ಕೆ ಪೂರ್ಣ ಪ್ರಮಾಣದಲ್ಲಿ ಕಡಿವಾಣ ಹಾಕಬೇಕು’ ಎಂದು ಮಹಿಳೆಯರು ಹೇಳಿದರು.
ಮದ್ಯ ಮಾರಾಟಕ್ಕ ಕಡಿವಾಣ ಹಾಕುವ ಸಂಬಂಧ ಎರಡು ದಿನ ಚರ್ಚಿಸಿದ ಗ್ರಾಮಸ್ಥರು ಭಾನುವಾರ ಪಂಚಾಯಿತಿ ಕಟ್ಟೆಯಲ್ಲಿ ಸಭೆ ಸೇರಿದರು. ‘ಮದ್ಯ ಮಾರಾಟಗಾರರ ಸ್ವಯಂ–ಪ್ರೇರಣೆಯಿಂದ ನಿಲ್ಲಿಸಬೇಕು. ಇಲ್ಲದಿ ದ್ದರೂ ದೂರು ಸಲ್ಲಿಸಲಾಗುವುದು’ ಎಂದು ಗ್ರಾಮಸ್ಥರು ನಿರ್ಧರಿಸಿದರು.
‘ಗ್ರಾಮದಲ್ಲಿ ಜೂಜು, ಮಟ್ಕಾ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪಿಎಸ್‌ಐ ಭೀಮರಾಯ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು. ಮದ್ಯ ಮಾರಾಟ ನಿಯಂತ್ರಣಕ್ಕೆ ಮಳಸಾಪುರ ಗ್ರಾಮಸ್ಥರು ನಿರ್ಧರಿಸಿದರು.
ದಳಪತಿ ಚಂದ್ರಕಾಂತ ಪಾಟೀಲ, ಶಿಕ್ಷಕ ಸುಭಾಶ್ಚಂದ್ರ ಮುಚ್ಛಟ್ಟಿ, ಶಿವಕುಮಾರ ಸೀಗಿ, ಸಿದ್ದು ಖಾನಾಪುರ, ಬಾಬುರಾವ ಜಾಧವ್, ಕಾಳಪ್ಪ ಪೂಜಾರಿ, ರವೀಂದ್ರ ತಡೋಳಗಿ, ನಾಗಶೆಟ್ಟಿ ಪಂಡರಗಿ, ಸಂಗಶೆಟ್ಟಿ ಪಾಟೀಲ, ತರುಣಕುಮಾರ ಪಂಡರಗಿ, ರಾಜಕುಮಾರ ಮುಚ್ಛಟ್ಟಿ, ಮಂಜು ರಾಮಾ, ಅನೀಲ ಪೂಜಾರಿ ಇದ್ದರು.
*
ಈಗಾಗಲೆ ಸಭೆ ಕರೆದು ಮದ್ಯ ಮಾರಾಟ ನಿಲ್ಲಿಸುವಂತೆ ಸೂಚಿಸಿದ್ದೇವೆ. ಅವರು ಒಪ್ಪಿಕೊಂಡಿದ್ದಾರೆ. ಮಾರಾಟ ಮುಂದುವರೆಸಿದರೆ ಅವರ ವಿರುದ್ಧ ದೂರು ಸಲ್ಲಿಸಲಾಗುವುದು.
-ಸುಭಾಶ್ಚಂದ್ರ ಮುಚ್ಛಟ್ಟಿ, ಶಿಕ್ಷಕ
*
ಸಾರಾಯಿ ತರಲಾಕ ಹೋಗಿ ನನ್ನ ಮಗ ಗಾಡಿ ಮ್ಯಾಗಿಂದ ಬಿದ್ದಾನ್ರಿ, ಈ ಸಾರಾಯಿ ಕುಡ್ಯಾದರಿಂದ ನಮ್ಮ ಮನಿ ಬರ್ಬಾದ್ ಆಗ್ಯಾ. ಬಂದ್ ಮಾಡಿ ಚೊಲೊ ಆಯಿತರ.
- ವಿಜಮ್ಮ ಜಮಾದಾರ, ಸ್ಥಳೀಯ ನಿವಾಸಿ
*
ಮನಿ ಸಂಸಾರಕ ನಯ್ಯಾಪೈಸಾ ಕೊಡಲ್ಲ. ಕುಡಿಲ್ಯಾಕ್ ಎಲ್ಲಿಂದರ ಸಾಲಾ ಮಾಡತಾರ, ಹೆಂಡತಿ, ಮಕ್ಕಳು ಬಿಟ್ಟು ಸಾರಾಯಿನೆ ಕುಡಿಲತರ. ಬಂದ್ ಮಾಡಿದ್ದು ಭಾಳ ಚಲೊ ಆಯ್ತು.
- ಶರಣಮ್ಮ ಹೆಳವರ್, ಸ್ಥಳೀಯ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.