ಸಂಡೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಸಂಘಟನೆ ನೇತೃತ್ವದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ತಾಲ್ಲೂಕಿನ ಬಂಡ್ರಿ, ಚೋರನೂರು, ನಿಡಗುರ್ತಿ ಹಾಗೂ ಬೊಮ್ಮಾಘಟ್ಟದ ಗ್ರಾಮ ಪಂಚಾಯ್ತಿ ಕಚೇರಿಗಳ ಮುಂದೆ ಶನಿವಾರ ಧರಣಿ ನಡೆಸಿ ಪಂಚಾಯ್ತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ನಂತರ ಮಾತನಾಡಿದ ಸಿಪಿಐ (ಎಂ) ತಾಲ್ಲೂಕು ಸಮಿತಿ ಕಾರ್ಯದರ್ಶಿ ಎ. ಸ್ವಾಮಿ, ‘ಪ್ರತಿಯೊಬ್ಬರನ್ನು ಉಚಿತವಾಗಿ ಕೋವಿಡ್ ಪರೀಕ್ಷೆಗೆ ಒಳಪಡಿಸಿ, ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಬೇಕು. ಪ್ರತಿಯೊಬ್ಬರಿಗೂ ಮುಂದಿನ ಆರು ತಿಂಗಳವರೆಗೆ ಮಾಸಿಕ ₹ 7,500 ಪರಿಹಾರ ನೀಡಬೇಕು. ಕುಟುಂಬದ ಪ್ರತಿ ಸದಸ್ಯನಿಗೂ ಮಾಸಿಕ 10 ಕೆ.ಜಿ. ಆಹಾರ ಧಾನ್ಯ ವಿತರಿಸಬೇಕು. ಉದ್ಯೋಗ ಖಾತ್ರಿ ವೇತನವನ್ನುಕನಿಷ್ಠ ₹ 600ಕ್ಕೆ ಹೆಚ್ಚಿಸಬೇಕು ಮತ್ತು ಈ ಯೋಜನೆಯನ್ನು ನಗರ ಪ್ರದೇಶಕ್ಕೂ ವಿಸ್ತರಿಸಬೇಕು. ಶಿಕ್ಷಣ, ಆರೋಗ್ಯ, ರೈಲು, ರಸ್ತೆ, ವಿದ್ಯುತ್, ದೂರಸಂಪರ್ಕ, ವಿಮಾ ಕಂಪನಿ, ಬ್ಯಾಂಕ್‍ಗಳ ಖಾಸಗೀಕರಣ ಪ್ರಕ್ರಿಯೆ ತಡೆಯಬೇಕು. ನಿವೇಶನ ರಹಿತ ದೇವದಾಸಿ ಮಹಿಳೆಯರಿಗೆ ನಿವೇಶನ ನೀಡಬೇಕು. ಸರ್ಕಾರ ಕೂಡಲೆ ಈ ಬೇಡಿಕೆಗಳನ್ನು ಈಡೇರಿಸಲು ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ಡಿವೈಎಫ್‍ಐ ಸಂಘಟನೆ ಕಾರ್ಯದರ್ಶಿ ಸ್ವಾಮಿ, ಸದಸ್ಯರಾದ ಲಕ್ಕಪ್ಪ, ಮಲ್ಲೇಪ್ಪ ಹಾಗೂ ಹೂಲೆಪ್ಪ, ದೇವದಾಸಿ ಮಹಿಳಾ ವಿಮೋಚನಾ ಸಂಘದ ಅಧ್ಯಕ್ಷೆ ದುರುಗಮ್ಮಾ, ಸದಸ್ಯರಾದ ತಿಪ್ಪಮ್ಮಾ, ಮಂಜಮ್ಮಾ, ಗಂಗಮ್ಮಾ, ಬಸಮ್ಮಾ, ಹುಲಿಗೆಮ್ಮಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.